)
ಕೊಪ್ಪಳ: ಬೂತ್ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಸಲಹೆ-ಸೂಚನೆ ಆಧಾರದ ಮೇಲೆ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದೇ ಸಂಘಟನ್ ಸೃಜನ್ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಎಐಸಿಸಿ ವೀಕ್ಷಕ ವಿವೇಕ್ ಬನ್ಸಲ್ ಹೇಳಿದರು.
ರಾಜ್ಯದಲ್ಲಿ ಆ. 15ರವರೆಗೆ ಸಂಘಟನ್ ಸೃಜನ್ ಅಭಿಯಾನ ನಡೆಯಲಿದೆ. ಎಐಸಿಸಿಯಿಂದ ನೇಮಕಗೊಂಡಿರುವ ವೀಕ್ಷಕರು ತಾಲೂಕು, ಬ್ಲಾಕ್ ಹಾಗೂ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಪಕ್ಷದ ಸಂಘಟನೆ ಹೇಗೆ ನಡೆಯುತ್ತಿದೆ, ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳೇನು, ಸಂಘಟನೆ ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಕುರಿತು ಕಾರ್ಯಕರ್ತರಿಂದ ನೇರವಾಗಿ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಇಂದಿನ ಯುವಕರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸುವುದು ಸರ್ಕಾರಗಳ ಪ್ರಮುಖ ಜವಾಬ್ದಾರಿಯಾಗಿದೆ.ಆದರೆ ಕೇಂದ್ರ ಸರ್ಕಾರ ಉದ್ಯೋಗ ಭರ್ತಿಗೆ ಅಗತ್ಯ ಆದ್ಯತೆ ನೀಡುತ್ತಿಲ್ಲ. ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ನಡೆಸುತ್ತಿರುವ ವಿವಿಧ ಹೋರಾಟಗಳೇ ಇದಕ್ಕೆ ಸಾಕ್ಷಿ ಎಂದರು.ಮಾಜಿ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಕುಡಿವ ನೀರು ಹಾಗೂ ರೈತರಿಗೆ ನೀರಾವರಿ ಯೋಜನೆ ಕೈಗೊಳ್ಳುವುದು ಮುಖ್ಯ. ಇದರ ಜತೆ ಕೈಗಾರಿಕೆಗಳಿಗೆ ಕೇವಲ ೧ಟಿಎಂಸಿ ನೀರನ್ನು ನೀಡಲಾಗುತ್ತಿದೆ. ನದಿಗೆ ಹರಿದು ಹೋಗುವ ನೀರನ್ನು ಕೈಗಾರಿಕೆಯವರು ಬಳಸಿಕೊಳ್ಳುತ್ತಿದ್ದಾರೆ. ಆದರೆ, ನೀರಾವರಿ ಹಾಗೂ ಕುಡಿವ ನೀರು ಪೂರೈಕೆಯೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.
ಬಿಜೆಪಿಯವರು ಹೋರಾಟ ನಡೆಸುವುದಕ್ಕೆ ಕಾಂಗ್ರೆಸ್‌ನಿಂದ ಯಾವುದೇ ಅಭ್ಯಂತರವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಪಕ್ಷಕ್ಕೂ ತನ್ನ ವಿಚಾರಗಳಿಗಾಗಿ ಹೋರಾಟ ನಡೆಸುವ ಹಕ್ಕಿದೆ, ಆದರೆ ಹೋರಾಟದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೂ ಕೆಲವು ಮಿತಿಗಳಿವೆ. ಈ ಹಿಂದೆ ನಾವು ಸಹಿತ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರೂ ಸಹಿತ ಬಿಜೆಪಿಯವರ ರೀತಿಯಲ್ಲಿ ವರ್ತಿಸಿಲ್ಲ ಅವರು ತಮ್ಮ ಬುದ್ಧಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ಟಿಪ್ಪಣಿ ಮಾಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ತಿಳಿಸಿದ್ದಾರೆ.