ಇತಿಹಾಸ ನಿರ್ಮಿಸಿದ ಮಹಿಳಾ ನ್ಯಾಯಮೂರ್ತಿಗಳ ವಿಶೇಷ ಪೀಠ

KannadaprabhaNewsNetwork |  
Published : Aug 02, 2026, 02:15 AM IST
ಮಹಿಳಾ ನ್ಯಾಯಮೂರ್ತಿಗಳ ವಿಶೇಷ ಪೀಠದಲ್ಲಿ ಪಾಲ್ಗೊಂಡ ನ್ಯಾಯಮೂರ್ತಿಗಳು. | Kannada Prabha

ಸಾರಾಂಶ

ಧಾರವಾಡದ ಹೈಕೋರ್ಟ್‌ ಪೀಠದಲ್ಲಿ ಶನಿವಾರ ಎಲ್ಲ ನ್ಯಾಯಪೀಠಗಳ ಅಧ್ಯಕ್ಷತೆಯನ್ನು ಮಹಿಳಾ ನ್ಯಾಯಮೂರ್ತಿಗಳೇ ವಹಿಸುವ ಮೂಲಕ ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಾಣವಾಯಿತು.

ಧಾರವಾಡ:

ಧಾರವಾಡದ ಹೈಕೋರ್ಟ್‌ ಪೀಠದಲ್ಲಿ ಶನಿವಾರ ಎಲ್ಲ ನ್ಯಾಯಪೀಠಗಳ ಅಧ್ಯಕ್ಷತೆಯನ್ನು ಮಹಿಳಾ ನ್ಯಾಯಮೂರ್ತಿಗಳೇ ವಹಿಸುವ ಮೂಲಕ ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಾಣವಾಯಿತು. ಈ ನಡುವೆ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲೂ ಮಹಿಳಾ ನ್ಯಾಯವಾದಿಗಳೂ ವಾದಿಸಿದ್ದು ಮತ್ತೊಂದು ವಿಶೇಷ. ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆದಿದೆ.ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದಲ್ಲಿ ಇದು ಜಾರಿಗೊಂಡಿದ್ದು, ಈ ರೀತಿಯ ಸಂಪೂರ್ಣ ಮಹಿಳಾ ನ್ಯಾಯಮೂರ್ತಿಗಳ ಪೀಠವು ಮೊದಲ ಬಾರಿಗೆ ಕಾರ್ಯನಿರ್ವಹಿಸಿದೆ ಎಂದು ಮೂಲಗಳು ತಿಳಿಸಿವೆ. ಇದು ನ್ಯಾಯಾಂಗದಲ್ಲಿನ ಲಿಂಗ ಸಮಾನತೆ ಮತ್ತು ಸಾಂಸ್ಥಿಕ ಪ್ರಗತಿಯ ಬದ್ಧತೆಯನ್ನು ಪ್ರತಿಬಿಂಬಿಸಿದಂತಾಗಿದೆ.

ಈ ಐತಿಹಾಸಿಕ ವಿಶೇಷ ಪೀಠದಲ್ಲಿ ನ್ಯಾಯಮೂರ್ತಿಗಳಾದ ಅನು ಶಿವರಾಮನ್, ಜ್ಯೋತಿ ಎಂ., ಲಲಿತಾ ಕನ್ನೇಗಂಟಿ, ಚಿಲ್ಲಕೂರು ಸುಮಲತಾ, ಪಿ. ಶ್ರೀ ಸುಧಾ, ಕೆ.ಎಸ್. ಹೇಮಲೇಖಾ, ತಾರಾ ವಿತಸ್ತಾ ಗಂಜು, ಗೀತಾ ಕೆ.ಬಿ., ರಾಜೇಶ್ವರಿ ಹೆಗಡೆ ಹಾಗೂ ಕೆ.ಜಿ. ಶಾಂತಿ ಅವರು ಭಾಗವಹಿಸಿದ್ದರು. ಅವರು ಮೂರು ವಿಭಾಗೀಯ ಪೀಠಗಳು ಹಾಗೂ ನಾಲ್ಕು ಏಕಸದಸ್ಯ ಪೀಠಗಳಲ್ಲಿ ವಿಚಾರಣೆ ನಡೆಸಿದರು.

ಈ ದಿನದ ವಿಶೇಷತೆಗೆ ಮತ್ತಷ್ಟು ಮೆರುಗು ನೀಡುವಂತೆ, ಎಲ್ಲ ನ್ಯಾಯಾಲಯಗಳೂ ಸಂಪೂರ್ಣ ಡಿಜಿಟಲ್ ನ್ಯಾಯಾಲಯಗಳಾಗಿ ಕಾರ್ಯನಿರ್ವಹಿಸಿದವು. ನ್ಯಾಯಮೂರ್ತಿಗಳಿಗೆ ಪ್ರಕರಣಗಳ ದಾಖಲಾತಿಗಳನ್ನು ಸಂಪೂರ್ಣ ಸ್ಕ್ಯಾನ್ ಮಾಡಿದ ಸಾಫ್ಟ್‌ಕಾಪಿ ರೂಪದಲ್ಲೇ ಒದಗಿಸಲಾಗಿದ್ದು, ತಂತ್ರಜ್ಞಾನ ಆಧಾರಿತ ನ್ಯಾಯ ವಿತರಣೆಯತ್ತ ಹೈಕೋರ್ಟ್‌ನ ಬದ್ಧತೆಯನ್ನು ಇದು ಪ್ರತಿಬಿಂಬಿಸಿತು.

ನ್ಯಾಯಮೂರ್ತಿಗಳಿಗೆ ಸಹಕರಿಸಿದ ನ್ಯಾಯಾಲಯದ ಅಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿಯಲ್ಲೂ ಹೆಚ್ಚಿನವರು ಮಹಿಳೆಯರೇ ಆಗಿದ್ದರು. ಕರ್ನಾಟಕದ ಅಡ್ವೆಕೇಟ್ ಜನರಲ್ ಅವರ ನಿರ್ದೇಶನದಂತೆ, ಆ ದಿನ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲಿ ರಾಜ್ಯದ ಪರವಾಗಿ ಮಹಿಳಾ ಸರ್ಕಾರಿ ವಕೀಲರೇ ವಾದ ಮಂಡಿಸಿದ್ದೂ ವಿಶೇಷ.

ಮಹಿಳಾ ಸಬಲೀಕರಣ, ನ್ಯಾಯಾಂಗದ ಶ್ರೇಷ್ಠತೆ ಹಾಗೂ ನ್ಯಾಯ ವಿತರಣಾ ವ್ಯವಸ್ಥೆಯ ಆಧುನೀಕರಣಕ್ಕೆ ಹೈಕೋರ್ಟ್ ಹೊಂದಿರುವ ಬದ್ಧತೆಯನ್ನು ಇವತ್ತು ಪುನರುಚ್ಚರಿಸಿತು. ಈ ವಿಶೇಷ ಪೀಠದ ಮುಂದೆ ಒಟ್ಟು 540 ಪ್ರಕರಣಗಳು ಪಟ್ಟಿಯಾಗಿದ್ದು, ಅವುಗಳಲ್ಲಿ 185 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಹೈಕೋರ್ಟ್‌ ಪೀಠ ವಕೀಲರ ಸಂಘದ ಅಧ್ಯಕ್ಷ ಬಿ. ಡಿ. ಹಿರೇಮಠ ಅವರ ನೇತೃತ್ವದಲ್ಲಿ ಎಲ್ಲ ಮಹಿಳಾ ನ್ಯಾಯಮೂರ್ತಿಗಳು ಹಾಗೂ ಮಹಿಳಾ ವಕೀಲರನ್ನು ಸನ್ಮಾನಿಸಿ ಈ ಐತಿಹಾಸಿಕ ಸಂದರ್ಭವನ್ನು ಸ್ಮರಣೀಯವಾಗಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಪ್ರದಾಯಿಕ, ಯಾಂತ್ರೀಕೃತ ಮೀನುಗಾರಿಕೆ ಪುನಾರಂಭ
ಶಿಸ್ತಿನ ಜೀವನವೇ ಆರೋಗ್ಯ, ಆಧ್ಯಾತ್ಮಿಕ ಪ್ರಗತಿಗೆ ದಾರಿ: ರಾಘವೇಶ್ವರ ಶ್ರೀ