ಶರಣ ಸಂಸ್ಕೃತಿಯೇ ಕನ್ನಡಿಗರ ಅಸ್ಮಿತೆ: ಡಾ. ನಿಂಗು ಸೊಲಗಿ

KannadaprabhaNewsNetwork |  
Published : Aug 02, 2026, 02:00 AM IST
ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾದ ಡಾ.ನಿಂಗು ಸೊಲಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಗದಗ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿರುವ ಬೂದೀಶ್ವರ ಮಠದಲ್ಲಿ ಶನಿವಾರ ಜರುಗಿದ 2ನೇ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ, ರಂಗಕರ್ಮಿ ಡಾ. ನಿಂಗು ಸೊಲಗಿ ಭಾಷಣ ಮಾಡಿದರು.

ಗದಗ: ಶರಣರ ವಚನಗಳು ನಮ್ಮಲ್ಲಿರುವ ಅವಗುಣಗಳೆಂಬ ಕಸವನ್ನು ಕಿತ್ತೆಸೆದು, ಜಾಗ್ರತ ಮನಸ್ಕರಾಗಿ ಬದುಕಲು ಪ್ರೇರೇಪಿಸುತ್ತವೆ ಎಂದು ಮಕ್ಕಳ ಸಾಹಿತಿ, ರಂಗಕರ್ಮಿ ಡಾ. ನಿಂಗು ಸೊಲಗಿ ಅಭಿಪ್ರಾಯಪಟ್ಟರು.

ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿರುವ ಬೂದೀಶ್ವರ ಮಠದಲ್ಲಿ ಶನಿವಾರ ಜರುಗಿದ 2ನೇ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭಾಷಣ ಮಾಡಿದ ಅವರು, ವಚನ ಸಾಹಿತ್ಯ, ದಾಸೋಹ, ಕಾಯಕ ಸಿದ್ಧಾಂತ ಹಾಗೂ ಅನುಭಾವ ಮಂಟಪದಂತಹ ಪ್ರಜಾಸತ್ತಾತ್ಮಕ ನೆಲೆಗಳನ್ನು ನೀಡಿದ ಶರಣ ಸಂಸ್ಕೃತಿಯೇ ಇಂದು ಕನ್ನಡಿಗರ ಅಸ್ಮಿತೆಯಾಗಿದೆ ಎಂದು ಹೇಳಿದರು.ಶರಣರ ಇವ ನಮ್ಮವ ಎಂಬ ಭಾವನೆ ಹಾಗೂ ಪಂಪ, ಕನಕದಾಸರಂತಹ ಮಹಾಕವಿಗಳ ಆಶಯದಂತೆ ಕನ್ನಡ ಸಾಹಿತ್ಯದುದ್ದಕ್ಕೂ ಸಾಮರಸ್ಯದ ಬೇರುಗಳನ್ನು ಕಾಣಬಹುದು. ಮೇವುಂಡಿ ಮಲ್ಲಾರಿ ಅವರಂತಹ ಪ್ರಜ್ಞಾವಂತ ಸಾಹಿತಿಗಳು ತಮ್ಮ ಪದ್ಯಗಳ ಮೂಲಕ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ದಯಾಪರತೆ ಮತ್ತು ಮಾನವೀಯತೆಯ ಸ್ಪರ್ಶ ನೀಡಿದ್ದಾರೆ. ಮಕ್ಕಳ ಮನೋಭೂಮಿಕೆಯಲ್ಲಿ ಇಂತಹ ಅನುಭೂತಿಯನ್ನು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ರಾಜಾಶ್ರಯದ ಪಂಡಿತ ಪರಂಪರೆ, ಶ್ರಮಿಕರ ಜನಪದ ಪರಂಪರೆ ಹಾಗೂ ಇವೆರಡರ ಮಧ್ಯೆ ಹುಟ್ಟಿಕೊಂಡ ಜನಮುಖಿ ವೈಚಾರಿಕ (ವಚನ, ದಾಸ) ಪರಂಪರೆ ಎಂಬ ಮೂರು ಮುಖ್ಯ ತೊರೆಗಳನ್ನು ಗುರುತಿಸಬಹುದು. ಇಂದು ಹೊಸ ತಾಂತ್ರಿಕ ಜಗತ್ತಿನಲ್ಲಿ ಮಕ್ಕಳಿಗೆ ವಚನ ಸಾಹಿತ್ಯ, ಕೃಷಿ ಹಾಗೂ ದಾಸೋಹ ಸಂಸ್ಕೃತಿಯನ್ನು ಅವರ ವಯೋಮಾನಕ್ಕೆ ಗ್ರಾಹ್ಯವಾಗುವಂತೆ ತಲುಪಿಸುವ ವಾಚಿಕೆ ಮತ್ತು ನಾಟಕಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಇಂದಿನ ಪರೀಕ್ಷಾ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿರುವ ನಿಸರ್ಗಸಹಜ ಕುತೂಹಲ ಹಾಗೂ ಸೃಜನಶೀಲತೆಯನ್ನು ಹತ್ತಿಕ್ಕುತ್ತಿದೆ. ಮಕ್ಕಳು ಬರಿದಾದ ಬಿಳಿ ಹಾಳೆಯಲ್ಲ, ಅವರು ಸ್ವಂತ ಸಂವೇದನೆ ಹಾಗೂ ಸಾಮರ್ಥ್ಯವುಳ್ಳವರು ಎಂಬುದನ್ನು ಸಮಾಜ ಗ್ರಹಿಸಬೇಕು. ಪಬ್ಜಿಯಂತಹ ವಿಡಿಯೋ ಗೇಮ್‌ಗಳು ಮಕ್ಕಳ ಮನಸ್ಸನ್ನು ವಿಕೃತಗೊಳಿಸುತ್ತಿದ್ದು, ಅವರಿಗೆ ಪರಿಸರಸ್ನೇಹಿ ಹಾಗೂ ಸಾಂಘಿಕ ಭಾವನೆ ಬೆಳೆಸುವ ಜಾನಪದ ಆಟಗಳನ್ನು ಆಡಲು ಅವಕಾಶ ನೀಡಬೇಕು. ಇಂತಹ ಆಟಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿಯನ್ನು ನೀಡುತ್ತವೆ ಎಂದು ಹೇಳಿದರು.

ಮಕ್ಕಳ ಸಾಹಿತ್ಯದಲ್ಲಿ ಹಳೆಯ ಮೌಲ್ಯಗಳ ಪುನರ್ ಮೌಲ್ಯೀಕರಣ ನಡೆಯಬೇಕಿದೆ. ಜ್ಞಾನೇಂದ್ರಿಯಗಳನ್ನು ಮುಚ್ಚಿ ಕುಳಿತುಕೊಳ್ಳುವ ಬದಲು ಕಣ್ತೆರೆದು ನೋಡು, ಕಿವಿಗೊಟ್ಟು ಕೇಳು, ಬಾಯ್ತೆರೆದು ನೀನೊಮ್ಮೆ ಹೇಳು ಎಂಬ ಜಾಗ್ರತ ಭಾವನೆ ಮೂಡಿಸಬೇಕು. ನೀರಡಿಸಿದ ಕಾಗೆಯ ಕಥೆಯಲ್ಲೂ ಸ್ವಾರ್ಥ ಮರೆತು ಸೃಜನಶೀಲವಾಗಿ ಯೋಚಿಸುವ ಮನೋಭಾವ ಬೆಳೆಸಬೇಕು. ಪ್ರಸ್ತುತ ಶಿಕ್ಷಣವು ಕೇವಲ ಪರೀಕ್ಷೆಗೆ ಸೀಮಿತವಾಗುತ್ತಿರುವ ಈ ಸಂದರ್ಭದಲ್ಲಿ, ಪೋಷಕರು, ಶಿಕ್ಷಕರು ಹಾಗೂ ಮಕ್ಕಳು ಒಟ್ಟಾಗಿ ಚರ್ಚಿಸಿ ಸೃಜನಶೀಲ ಹಾದಿಯಲ್ಲಿ ಸಾಗುವ ಅಗತ್ಯವಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣ ಸಾಹಿತ್ಯ ಬದುಕಿಗೆ ದಾರಿದೀಪ: ಶಿವಕುಮಾರ ಗೌಡ ಪಾಟೀಲ
ಕೆರೆಗಳಿಗೆ ಕೃಷ್ಣಾ ನದಿ ನೀರು ಹರಿಸುವಂತೆ ಒತ್ತಾಯ