ಮಂಗಳೂರು: 1997ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ಡಾ. ತುಂಬೆ ಮೊಯ್ದೀನ್ ಅವರ ನೇತೃತ್ವದಲ್ಲಿ ಆರಂಭಗೊಂಡ ‘ತುಂಬೆ ಗ್ರೂಪ್’ 29 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ 30ನೇ ವರ್ಷಕ್ಕೆ ಪ್ರವೇಶಿಸಿದೆ. ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಸಣ್ಣ ಹೆಜ್ಜೆಯೊಂದಿಗೆ ಆರಂಭವಾದ ಸಂಸ್ಥೆ ಇಂದು ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಂಶೋಧನೆ ಸೇರಿದಂತೆ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವೈವಿಧ್ಯಮಯ ಬೃಹತ್ ಶೈಕ್ಷಣಿಕ-ಆರೋಗ್ಯ ಸಮೂಹವಾಗಿ ಬೆಳೆದಿದೆ.ಅಜ್ಮಾನ್ ಆಡಳಿತ ಕುಟುಂಬದ ಆಹ್ವಾನದ ಮೇರೆಗೆ ಡಾ. ತುಂಬೆ ಮೊಯ್ದೀನ್ ಅವರು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಮಹತ್ವದ ಅವಕಾಶ ಪಡೆದಿದ್ದರು. ಇದರ ಫಲವಾಗಿ 1998ರಲ್ಲಿ ಗಲ್ಫ್ ಮೆಡಿಕಲ್ ಕಾಲೇಜು ಆರಂಭಗೊಂಡಿದ್ದು, ಬಳಿಕ ಅದು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಾಗಿ ರೂಪಾಂತರಗೊಂಡಿತು. ಇಂದು ಈ ವಿಶ್ವವಿದ್ಯಾಲಯ ಏಳು ಕಾಲೇಜುಗಳು ಹಾಗೂ 50ಕ್ಕೂ ಹೆಚ್ಚು ಮಾನ್ಯತೆ ಪಡೆದ ಕೋರ್ಸ್‌ಗಳನ್ನು ಹೊಂದಿದ್ದು, 111ಕ್ಕೂ ಹೆಚ್ಚು ರಾಷ್ಟ್ರಗಳ ಸುಮಾರು 5,000 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.ವಿಶ್ವವಿದ್ಯಾಲಯ 70ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಹಾಗೂ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗ ಹೊಂದಿದೆ. ಸಂಶೋಧನಾ ಅನುದಾನಕ್ಕಾಗಿ ವಾರ್ಷಿಕ ಸುಮಾರು 10 ಮಿಲಿಯನ್ ದಿರ್ಹಂ ಹೂಡಿಕೆ ಮಾಡಲಾಗುತ್ತಿದೆ.
ಮುಂದಿನ ವಿಸ್ತರಣೆಯ ಭಾಗವಾಗಿ ಶಾರ್ಜಾ ಹೆಲ್ತ್‌ಕೇರ್ ಸಿಟಿಯಲ್ಲಿ 120 ಹಾಸಿಗೆಗಳ ಮನೋವೈದ್ಯಕೀಯ ಮತ್ತು ಪುನರ್ವಸತಿ ಆಸ್ಪತ್ರೆ, ತುಂಬೆ ಮೆಡಿಸಿಟಿಯಲ್ಲಿ ಪಶುವೈದ್ಯಕೀಯ ಬೋಧನಾ ಆಸ್ಪತ್ರೆ ಹಾಗೂ ಪಶುವೈದ್ಯಕೀಯ ಕಾಲೇಜು ಮತ್ತು ತುಂಬೆ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಲಾಗಿದೆ.ದುಬೈನಲ್ಲಿ ತುಂಬೆ ಮೆಡಿಸಿಟಿ ಸ್ಥಾಪಿಸುವ ಯೋಜನೆಯೂ ಪ್ರಗತಿಯಲ್ಲಿದ್ದು, ಸುಮಾರು 1,000 ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ. ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ಸಹಯೋಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಯುಎಇಯಲ್ಲೇ ಮೊದಲ ಬಾರಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ಮುಂದಾಗಿದೆ.
ಜಾಗತಿಕ ಶಿಕ್ಷಣಕ್ಕೆ ಆದ್ಯತೆ: ತುಂಬೆ ಇಂಟರ್‌ನ್ಯಾಷನಲ್ ಪಾತ್‌ವೇ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಯುಎಇಯಲ್ಲಿ ತಮ್ಮ ಫೌಂಡೇಶನ್ ಶಿಕ್ಷಣ ಪೂರ್ಣಗೊಳಿಸಿ, ಯುರೋಪ್‌ನ ಸಹಭಾಗಿ ವಿಶ್ವವಿದ್ಯಾಲಯಗಳಲ್ಲಿ ಕ್ಲಿನಿಕಲ್ ತರಬೇತಿ ಪಡೆಯುವ ಅವಕಾಶ ಹೊಂದಿದ್ದಾರೆ.ಡಾ. ತುಂಬೆ ಮೊಯ್ದೀನ್ ಅವರಿಗೆ 2024ರ ಅಕ್ಟೋಬರ್‌ನಲ್ಲಿ ಕರ್ನಾಟಕದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ. 2026ರ ಜನವರಿಯಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ‘ನ್ಯೂ ಇಯರ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಮೂರು ಖಂಡಗಳ ವಿಶ್ವವಿದ್ಯಾಲಯಗಳಿಂದ ಐದು ಗೌರವ ಡಾಕ್ಟರೇಟ್‌ಗಳನ್ನೂ ಅವರು ಪಡೆದಿದ್ದಾರೆ.ಸಂಸ್ಥೆಯ ಮುಖ್ಯಾಂಶಗಳು: 26 ಬ್ರ್ಯಾಂಡ್‌ಗಳು, 15 ಕ್ಷೇತ್ರಗಳಲ್ಲಿ ಕಾರ್ಯಾಚರಣೆ, 1.9 ಕೋಟಿಗೂ ಅಧಿಕ ರೋಗಿಗಳಿಗೆ ಚಿಕಿತ್ಸೆ, 7 ಶೈಕ್ಷಣಿಕ ಆಸ್ಪತ್ರೆಗಳು, 46 ಔಷಧಾಲಯಗಳು, 1 ಲಕ್ಷಕ್ಕೂ ಅಧಿಕ ಹೆರಿಗೆಗಳು, 350 ಹಾಸಿಗೆಗಳ ತುಂಬೆ ಯುನಿವರ್ಸಿಟಿ ಹಾಸ್ಪಿಟಲ್, 5,000 ವಿದ್ಯಾರ್ಥಿಗಳು, 7 ಕಾಲೇಜುಗಳು, 50ಕ್ಕೂ ಅಧಿಕ ಶೈಕ್ಷಣಿಕ ಕಾರ್ಯಕ್ರಮಗಳು, 111ಕ್ಕೂ ಅಧಿಕ ರಾಷ್ಟ್ರಗಳ ವಿದ್ಯಾರ್ಥಿಗಳು ಹಾಗೂ ಸುಮಾರು 4,000 ಉದ್ಯೋಗಿಗಳು. ಸಂಶೋಧನಾ ಅನುದಾನಕ್ಕೆ ವಾರ್ಷಿಕ ಸುಮಾರು 1 ಕೋಟಿ ದಿರ್ಹಂ ಮತ್ತು ‘ಕೇರ್ ಆ್ಯಂಡ್ ಶೇರ್’ ವಿದ್ಯಾರ್ಥಿವೇತನ ಯೋಜನೆಗೆ 6 ಕೋಟಿ ದಿರ್ಹಂಗೂ ಅಧಿಕ ಮೊತ್ತವನ್ನು ಸಂಸ್ಥೆ ಮೀಸಲಿರಿಸಿದೆ.
ಕಳೆದ 30 ವರ್ಷಗಳ ಅನುಭವದಲ್ಲಿ ನಾನೊಬ್ಬ ಬಿಸಿನೆಸ್‌ಮೆನ್. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಇನ್ನೂ ಮಾಡಬೇಕು ಎಂಬ ಅಭಿಲಾಷೆ ಇದೆ. ಈಗಾಗಲೇ ಯುಎಇಯಲ್ಲಿ ಸುಸಜ್ಜಿತ ವೆಟರ್ನರಿ ಮೆಡಿಕಲ್ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಇವನ್ನೆಲ್ಲ ಸಾಧಿಸುವುದು ಸುಲಭವಲ್ಲ, ಇಷ್ಟೆಲ್ಲ ಸಾಧನೆಗೆ ದೃಢವಾದ ಸಂಕಲ್ಪ ಬೇಕು. ಅದುವೇ ಚಾಲೆಂಜಿಂಗ್. ನನ್ನ ಈ ಸಾಧನೆಗೆ ದೇವರ ಆಶೀರ್ವಾದ, ಕುಟುಂಬದ ಬೆಂಬಲ, ಸಹೋದ್ಯೋಗಿಗಳ ಶ್ರಮ ಎಲ್ಲವೂ ಬೆನ್ನೆಲುಬಾಗಿದೆ ಎಂದರು.