ವಾಯುಮಾಲಿನ್ಯ ಇಡೀ ವಿಶ್ವವನ್ನೇ ಆವರಿಸಿಕೊಂಡಿದೆ : ಪ್ರಹ್ಲಾದ್

KannadaprabhaNewsNetwork | Published : Nov 20, 2023 12:45 AM

ಸಾರಾಂಶ

ವಾಯುಮಾಲಿನ್ಯ ಇಡೀ ವಿಶ್ವವನ್ನೇ ಆವರಿಸಿಕೊಂಡಿದೆ : ಪ್ರಹ್ಲಾದ್

ಪ್ರಾದೇಶಿಕ ಸಾರಿಗೆ ಇಲಾಖೆಯ ಸಹಯೋಗದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಾಯುಮಾಲಿನ್ಯ ಕೇವಲ ರಾಜ್ಯ, ದೇಶವ್ನಲ್ಲದೇ ಇಡೀ ವಿಶ್ವವನ್ನೇ ಆವರಿಸಿಕೊಂಡು ಕಲುಷಿತಗೊಳಿಸಿದ್ದು ಇದರಿಂದ ಮಾನವನಿಗೆ ಆಮ್ಲಜನಕ ಕೊರತೆಯುಂಟಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಮುಖ್ಯ ಅಧೀಕ್ಷಕ ಪ್ರಹ್ಲಾದ್ ಹೇಳಿದರು. ನಗರದ ಎಂಇಎಸ್‌ಎಸ್‌ಎಸ್‌ಆರ್ ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಇತ್ತೀಚಿನ ದಿನಗಳಲ್ಲಿ ವಾಹನ ಹಾಗೂ ಕಾರ್ಖಾನೆಗಳಿಂದ ಹೆಚ್ಚು ವಾಯುಮಾಲಿನ್ಯ ಉಂಟಾಗಿ ಸಾರ್ವಜನಿಕರು ಅಸ್ತಮಾ, ಕೆಮ್ಮು ಸೇರಿದಂತೆ ಇನ್ನಿತರೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರ್‌ಟಿಒ ಇಲಾಖೆ ಕಲಬೆರಕೆ ಇಂಧನ ತಡೆಗಟ್ಟುವಿಕೆ, ಸುಸ್ಥಿರ ವಾಹನಗಳ ಸಂಚಾರ ಹಾಗೂ ಸಕಾಲಕ್ಕೆ ವಾಹನಗಳ ತಪಾಸಣೆ ಮಾಡಿಸುವ ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಜನಸಂಖ್ಯೆ ಹೆಚ್ಚಳವಾದಂತೆ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಪರಿಣಾಮ ವಾಯುಮಾಲಿನ್ಯವೂ ಹೆಚ್ಚಿದೆ. ಪ್ರತಿ ವಾಹನಕ್ಕೂ ಹೊಗೆ ತಪಾಸಣೆ ಕಡ್ಡಾಯ. ಇದರಿಂದ ಸ್ವಲ್ಪ ಮಟ್ಟಿಗಾದರೂ ಮಾಲಿನ್ಯದಿಂದ ತಪ್ಪಿಸಿಕೊಳ್ಳಬಹುದು. ಹಾಗಾಗಿ ಸಾರ್ವಜನಿಕರು ಒಂದೊಂದೇ ವಾಹನದಲ್ಲಿ ಸಂಚರಿಸುವ ಬದಲು ಬಸ್‌ಗಳಲ್ಲಿ ಸಂಚರಿಸಿದರೆ ಮಾಲಿನ್ಯ ಕಡಿಮೆಯಾಗಲಿದೆ ಎಂದು ಸಲಹೆ ಮಾಡಿದರು. ಶಿಕ್ಷಕ ಚಂದ್ರಪ್ಪ, ಮಾತನಾಡಿ ಪರಿಸರ ಸಂರಕ್ಷಿಸುವುದು ವಿಶ್ವದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನಿರ್ಲಕ್ಷ್ಯವಹಿಸಿದರೆ ಮುಂದೆ ದೊಡ್ಡಮಟ್ಟದ ಅನಾಹುತ ಸಂಭವಿಸಿ ಜೀವರಾಶಿಗಳು ತೊಂದರೆಗೆ ಸಿಲುಕಲಿವೆ. ಮನುಷ್ಯ ನೀರಿಲ್ಲದಿದ್ದರೂ ಬದುಕಬಹುದು. ಗಾಳಿ ಇಲ್ಲವಾದರೆ ಜೀವಿಸಲು ಅಸಾಧ್ಯ. ಆ ನಿಟ್ಟಿನಲ್ಲಿ ಪರಿಸರ ಪೋಷಿಸುವುದು, ರಕ್ಷಿಸುವುದು ಮುಖ್ಯ ಎಂದರು. ಪ್ರಾಯೋಗಿಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕೌಸರ್ ಫಾತಿಮಾ ಮಾತನಾಡಿ, ವಾಯುಮಾಲಿನ್ಯ ಕುರಿತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ನೀಡುತ್ತಿರುವುದು ಖಷಿಯ ಸಂಗತಿ. ಮಕ್ಕಳು ತರಬೇತಿ ಮಾಹಿತಿ ಪಡೆದುಕೊಂಡು ಪರಿಸರ ಉಳಿಸುವ ಕೆಲಸದಲ್ಲಿ ತೊಡಗಬೇಕು ಎಂದು ಸಲಹೆ ಮಾಡಿದರು. ಇದೇ ವೇಳೆ ವಾಯುಮಾಲಿನ್ಯ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸ್ಥಾನಗಳಿಸಿದ ಪ್ರಾಯೋಗಿಕ ಪ್ರೌಢಶಾಲೆಯ ಐದು ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಬಿ.ಕೆ.ಸದಾಶಿವಮೂರ್ತಿ, ಎಂ.ಸಿ.ಸುನೀತಾ, ಟಿ.ಜೆ.ಯಶೋಧ, ಆರ್.ಟಿ.ಒ. ತಾಂತ್ರಿಕ ಸಲಹೆಗಾರ ಸಂತೋಷ್, ಕಚೇರಿ ಸಹಾಯಕಿ ರಮ್ಯ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹರ್ಷಿಕಾ ಉಪಸ್ಥಿತರಿದ್ದರು.

19 ಕೆಸಿಕೆಎಂ 4ಚಿಕ್ಕಮಗಳೂರಿನ ಎಂಇಎಸ್‌ಎಸ್‌ಎಸ್‌ಆರ್ ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಮಾತನಾಡಿದರು.

Share this article