- ಅನುದಾನ ತಡೆಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣ: ರವಿಕುಮಾರ ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕ್ರಿಯಾತ್ಮಕ, ಜನಹಿತ ತತ್ವಗಳನ್ನು ಆಧರಿಸಿರುವ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ, ಯೋಜನೆಗಳು ಸಿಕ್ಕಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಕೆಲ ಅನುದಾನಗಳನ್ನು ಸಹ ತಡೆಹಿಡಿಯಲಾಗಿದೆ ಎಂದು ವಿಧಾನ ಪರಿಷತ್ತು ಸದಸ್ಯ ಎನ್.ರವಿಕುಮಾರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹53,47,315 ಕೋಟಿ ಗಾತ್ರದ ಬಜೆಟ್ ಆತ್ಮನಿರ್ಭರತೆ ಮತ್ತು ವಿಕಸಿತ ಭಾರತವನ್ನು ಗುರಿಯಾಗಿಟ್ಟುಕೊಂಡಿದೆ. ಉದ್ಯೋಗ ಸೃಷ್ಟಿ, ಕೃಷಿ ಉತ್ಪಾದಕತೆ ಮತ್ತು ನಾಗರಿಕರ ಖರೀದಿ ಶಕ್ತಿ ಹೆಚ್ಚಿಸಲು ಬಜೆಟ್ ಒತ್ತು ನೀಡಿದೆ. ಜಲಮಾರ್ಗ, ಸೆಮಿ ಕಂಡಕ್ಟರ್ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳಡಿ ಕರ್ನಾಟಕ ರಾಜ್ಯಕ್ಕೆ ವಿಶೇಷ ಲಾಭವಾಗಲಿದೆ. ಆರ್ಥಿಕ ಬೆಳವಣಿಗೆ ವೇಗಗೊಳಿಸುವುದು, ನಾಗರೀಕರ ಆಶಯ ಈಡೇರಿಸುವುದು ಮತ್ತು ಆಡಳಿತದಲ್ಲಿ ಎಐ ನಂತಹ ಸುಧಾರಿತ ತಂತ್ರಜ್ಞಾನ ಬಳಕೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದರು.


ಕಳೆದ ಬಜೆಟ್‌ಗಳಲ್ಲಿ ರಾಜ್ಯಕ್ಕೆ ಘೋಷಣೆಯಾಗಿದ್ದ ಅನುದಾನದಲ್ಲಿ ಸುಮಾರು ₹63 ಸಾವಿರ ಕೋಟಿ ಬಾಕಿ ಇದೆ. ಮೇಕೆದಾಟು, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ಮುಂದಿನ ಹಂತಗಳಲ್ಲಿ ಕೈಗೆತ್ತುಕೊಳ್ಳುವ ನಿರೀಕ್ಷೆ ಇದೆ. ಆದರೆ, ಈ ಬಜೆಟ್ ನಲ್ಲಿ ಅನುದಾನ ನಿಂತಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಕಳಪೆ ಕಾಮಗಾರಿ ಕಾರಣಕ್ಕೆ ಅಧಿಕಾರಿಗಳ ವರದಿ ಆಧರಿಸಿ ಜಲಜೀವನ ಮಿಷನ್ ಯೋಜನೆ ಅನುದಾನ ತಡೆಹಿಡಿಯಲಾಗಿದೆ. ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನುದಾನ ಕಡಿಮೆ ಆಗಿದ್ದರೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ರಾಜ್ಯದಲ್ಲಿ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬೆಲೆ ಏರಿಕೆ ಅತಿಯಾಗಿದೆ. ಆದರೆ ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತದ ಅಭಿವೃದ್ಧಿ ವೇಗ ಇಡೀ ಪ್ರಪಂಚದಲ್ಲಿ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ, ಮುಖಂಡರಾದ ಬಿ.ಎಂ.ಸತೀಶ, ಬಿ.ಜಿ.ಅಜಯಕುಮಾರ, ಎಚ್.ಪಿ.ವಿಶ್ವಾಸ್, ಗೌತಮ್ ಜೈನ್, ಆನಂದ ಜಿರ್ಲಿ, ಸುರೇಶ, ಹೊನ್ನೂರು ರವಿ ಇದ್ದರು.

- - -

(ಬಾಕ್ಸ್‌) * ಕಾಂಗ್ರೆಸ್ ಆರೋಪ ನಿರಾಧಾರ: ಎಂಎಲ್‌ಸಿ

ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಜೀವಿಕಾ ಮಿಷನ್ ಗ್ರಾಮೀಣ ಕಾಯ್ದೆಯಲ್ಲಿ ಪಂಚಾಯಿತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪ ನಿರಾಧಾರ. ಹಿಂದಿನ ಮನರೇಗಾ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರವಾಗುತ್ತಿತ್ತು. ಕೆಲಸವೇ ಆಗದೇ ಬಿಲ್ ಪಡೆಯುವಂತಹ ಉದಾಹರಣೆಗಳಿದ್ದವು. ಇಂತಹದಕ್ಕೆಲ್ಲಾ ಕಡಿವಾಣ ಹಾಕಲು ಹೊಸ ಯೋಜನೆ ತರಲಾಗಿದೆ. ಮಾನವ ದಿನ ಹಾಗೂ ಕೂಲಿ ಹೆಚ್ಚಿಸಲಾಗಿದೆ. ವಿಶೇಷವಾಗಿ ಆಸ್ತಿ ಸೃಜನೆಗೆ ಒತ್ತು ನೀಡಲಾಗಿದೆ. 2047ರ ಹೊತ್ತಿಗೆ ದೇಶದ ಪ್ರತಿಯೊಂದು ಗ್ರಾಮಕ್ಕೂ ಮೂಲ ಸೌಕರ್ಯ ಒದಗಿಸಲು ಸಂಕಲ್ಪಿಸಲಾಗಿದೆ ಎಂದು ಎಂಎಲ್‌ಸಿ ರವಿಕುಮಾರ್‌ ಹೇಳಿದರು.

- - -

-7ಕೆಡಿವಿಜಿ38: ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಎನ್.ರವಿಕುಮಾರ ಮಾತನಾಡಿದರು.