ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಇರುವ ಆದಾಯ ಮಿತಿ ಹೆಚ್ಚಳಕ್ಕೆ ಪ್ರಸ್ತಾವನೆಯಿದ್ದು, ಶೀಘ್ರ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಾಗೆಯೇ, ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರನ್ನು ಎಪಿಎಲ್‌ಗೆ ಸೇರಿಸಿ ಪರಿಷ್ಕರಣೆ ಕಾರ್ಯಕ್ಕೂ ವೇಗ ನೀಡಲಾಗುವುದು

ಬೆಂಗಳೂರು : ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಇರುವ ಆದಾಯ ಮಿತಿ ಹೆಚ್ಚಳಕ್ಕೆ ಪ್ರಸ್ತಾವನೆಯಿದ್ದು, ಶೀಘ್ರ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಾಗೆಯೇ, ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರನ್ನು ಎಪಿಎಲ್‌ಗೆ ಸೇರಿಸಿ ಪರಿಷ್ಕರಣೆ ಕಾರ್ಯಕ್ಕೂ ವೇಗ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ಆಹಾರ ನಿಗಮಕ್ಕೆ ನೂತನವಾಗಿ ನೇಮಕವಾಗಿರುವ 376 ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿಯಪ್ಪ, ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಇರುವ ಆದಾಯ ಮಿತಿ ಬದಲಾವಣೆಗೆ ಹಲವು ವರ್ಷಗಳಿಂದ ಬೇಡಿಕೆಯಿದೆ. ಅಲ್ಲದೆ, ರಾಜ್ಯ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲೂ ಈ ಕುರಿತು ಶಿಫಾರಸು ಮಾಡಲಾಗಿದೆ. ಹೀಗಾಗಿ ಆದಾಯ ಮಿತಿ ಹೆಚ್ಚಳಕ್ಕೆ ಸಂಬಂಧಿಸಿ ಚರ್ಚೆ ಮಾಡಲಾಗುತ್ತಿದ್ದು, ಶೀಘ್ರ ಈ ಕುರಿತು ನಿರ್ಧರಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ರಾಜ್ಯದ 7.76 ಲಕ್ಷ ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ಗುರುತು ಮಾಡಿದ್ದು, ಅವುಗಳಲ್ಲಿ ಈಗಾಗಲೇ ಶೇ.50ರಷ್ಟನ್ನು ಪರಿಷ್ಕರಿಸಲಾಗಿದೆ. 4.32 ಲಕ್ಷ ಬಿಪಿಎಲ್‌ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಉಳಿದ ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನೂ ಎಪಿಎಲ್‌ಗೆ ಪರಿವರ್ತಿಸಲಾಗುವುದು. ಉಳಿದಂತೆ ರಾಜ್ಯದಲ್ಲಿ 1.25 ಕೋಟಿ ಅಂತ್ಯೋದಯ, ಬಿಪಿಎಲ್‌ ಸೇರಿ ಇನ್ನಿತರ ಪಡಿತರ ಚೀಟಿಗಳ 4.45 ಕೋಟಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ಸೌಲಭ್ಯ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸ್ಮಾರ್ಟ್‌ ಪಿಡಿಎಸ್‌:

ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವನ್ನಾಗಿಸಲು ಸ್ಮಾರ್ಟ್‌ ಪಿಡಿಎಸ್‌ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅದರಡಿ ಇ-ಪಾಸ್‌ ಯಂತ್ರಗಳು ಮತ್ತು ಎಲೆಕ್ಟ್ರಾನಿಕ್‌ ತೂಕ ಯಂತ್ರಗಳ ಅಳವಡಿಕೆಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ. ಯೋಜನೆಯಿಂದ ಫಲಾನುಭವಿಗಳಿಗೆ ವೇಗವಾಗಿ, ನಿಖರ ಸೇವೆ ದೊರೆಯಲಿದೆ ಎಂದರು.

2025-26ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 5.69 ಲಕ್ಷ ಮೆಟ್ರಿಕ್‌ ಟನ್‌ ರಾಗಿ, 2.21 ಲಕ್ಷ ಮೆಟ್ರಿಕ್‌ ಟನ್‌ ಜೋಳ ಸೇರಿ ಭತ್ತವನ್ನು ರೈತರಿಂದ ಖರೀದಿಸಲಾಗಿದೆ. 4422.17 ಕೋಟಿ ರು. ಮೊತ್ತದ ಧಾನ್ಯ ಖರೀದಿಸಲಾಗಿದ್ದು ಅದರಿಂದ 2.89 ಲಕ್ಷ ರೈತರಿಗೆ ಅನುಕೂಲವಾಗಿದೆ. 2026-27ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್‌ ರಾಗಿಗೆ 5205 ರು., ಜೋಳಕ್ಕೆ 4023 ರು., ಭತ್ತಕ್ಕೆ 2461 ರು.ಗಳನ್ನು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತ ರವಿಕುಮಾರ್‌, ಆಹಾರ ನಿಗಮದ ನಿರ್ದೇಶಕ ಜಗದೀಶ್‌ ಇತರರಿದ್ದರು.

376 ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ:

ಕಾರ್ಯಕ್ರಮದಲ್ಲಿ ಆಹಾರ ನಿಗಮದ ವಿವಿಧ ಹುದ್ದೆಗಳಿಗೆ ನೂತನವಾಗಿ ನೇಮಕವಾಗಿರುವ 376 ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಅದರ ಜತೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಗ್ರಾಹಕರ ಹಿತರಕ್ಷಣೆಗಾಗಿ ತಪಾಸಣೆ ನಡೆಸಲು ಅನುಕೂಲವಾಗುವಂತೆ 17 ವಾಹನಗಳಿಗೆ ಮುನಿಯಪ್ಪ ಹಸಿರು ನಿಶಾನೆ ತೋರಿಸಿದರು.