ವಾಯು, ಜಲ, ಶಬ್ದ ಮಾಲಿನ್ಯದಿಂದ ಪರಿಸರಕ್ಕೆ ಹಲವು ರೀತಿಯಲ್ಲಿ ಹಾನಿ: ಡಾ.ಎನ್.ಕಾಂತರಾಜ್

KannadaprabhaNewsNetwork | Published : Feb 14, 2025 12:33 AM

ಸಾರಾಂಶ

ವಿಪತ್ತು ಅಪಾಯವನ್ನು ಕಡಿತ ಮಾಡುವುದು ಮತ್ತು ಹವಾಮಾನ ಬದಲಾವಣೆಯಿಂದಾಗುವ ಅಪಾಯವನ್ನು ತಗ್ಗಿಸುವಿಕೆ ಮತ್ತು ಹೊಂದಾಣಿಕೆ ಮೂಲಕ ಸ್ಥಿತಿ ಸ್ಥಾಪಕ ಸಮುದಾಯಗಳನ್ನು ರೂಪಿಸುವುದು ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಆಚರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನಗರೀಕರಣ, ಕೈಗಾರಿಕರಣಗಳ ಕ್ಷಿಪ್ರ ಗತಿಯ ಪ್ರಗತಿಯಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯದಿಂದ ಪರಿಸರಕ್ಕೆ ಹಲವು ರೀತಿಯಲ್ಲಿ ಹಾನಿ ಉಂಟಾಗುತ್ತಿದೆ. ಯುವಜನತೆಯ ಮುಂದಿನ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಎನ್.ಕಾಂತರಾಜ್ ಹೇಳಿದರು.

ಪಟ್ಟಣದ ಓಂ ಶ್ರೀನಿಕೇತನ ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಮಂಡ್ಯ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ರಾಷ್ಟ್ರೀಯ ಹವಾಮಾನ ಬದಲಾವಣೆ ಹಾಗೂ ಮಾನವ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ವಿಶ್ವ ಪರಿಸರ ಆರೋಗ್ಯ ದಿನಾಚರಣೆ ಅಂಗವಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಪತ್ತು ಅಪಾಯವನ್ನು ಕಡಿತ ಮಾಡುವುದು ಮತ್ತು ಹವಾಮಾನ ಬದಲಾವಣೆಯಿಂದಾಗುವ ಅಪಾಯವನ್ನು ತಗ್ಗಿಸುವಿಕೆ ಮತ್ತು ಹೊಂದಾಣಿಕೆ ಮೂಲಕ ಸ್ಥಿತಿ ಸ್ಥಾಪಕ ಸಮುದಾಯಗಳನ್ನು ರೂಪಿಸುವುದು ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.

ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾಲಿನ್ಯದಿಂದಾಗಿ ಜನರಿಗೆ ಉಸಿರಾಟ ತೊಂದರೆ, ಹೃದ್ರೋಗ, ಚರ್ಮ ಸಂಬಂಧಿ ಕಾಯಿಲೆಗಳು ಸೇರಿದಂತೆ ಜನರನ್ನು ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವುದು ಅನಿವಾರ್ಯವಾಗಿದೆ ಎಂದರು.

ಓಂ ಶ್ರೀನಿಕೇತನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂಜಯ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಕಾಲೇಜು ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂದಿಸಿದ ಘೋಷಣೆಯೊಂದಿಗೆ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಈ ವೇಳೆ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಪಿ.ಮಾರುತಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್, ದೈಹಿಕ ಶಿಕ್ಷಕ ಜಯಕುಮಾರ್, ಡಿಎಂಒ ಕಚೇರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ್, ಎಂ.ಸಿ.ಚಂದನ್, ಕಾಲೇಜಿನ ಉಪನ್ಯಾಸಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.

Share this article