। ಖಾಸಗಿ ವಾಹನ ಚಾಲಕರಿಗೆ ಭರವಸೆ ಮೂಡಿಸಿದ ಸಂಸದ ಡಾ.ಕೆ.ಸುಧಾಕರ್ ಸಂಧಾನ ಸಭೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಮೊದಲಿನಂತೆಯೇ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು, ಅದಕ್ಕೆ ಪೂರಕವಾಗಿ ನಿಯಮ ರೂಪಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟ್ಯಾಕ್ಸಿ ಚಾಲಕರ ಸಂಘದ ಮನವಿಯ ಮೇರೆಗೆ ಮಂಗಳವಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಯಲ್ಲಿ ಅವರು ಚಾಲಕರು ಹಾಗೂ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಟ್ಯಾಕ್ಸಿ ಚಾಲಕರು ಹಾಗೂ ಪ್ರಾಧಿಕಾರದ ನಡುವಿನ ಸಂಧಾನ ಸಭೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಸುಮಾರು 500 ಮೀಟರ್ ದೂರದಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ವಿಮಾನದಿಂದ ಇಳಿದು ಬಂದ ಪ್ರಯಾಣಿಕರು ನಡೆದುಕೊಂಡು ಹೋಗಿ ಟ್ಯಾಕ್ಸಿ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಾಧಿಕಾರದ ಈ ಹೊಸ ಪಾರ್ಕಿಂಗ್ ನಿಯಮದ ವಿರುದ್ಧ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದ್ದರು.
ಸಂಧಾನ ಸಭೆಯಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ಒಂದು ವಾರದಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ. ಖಾಸಗಿ ಟ್ಯಾಕ್ಸಿ ಚಾಲಕರಲ್ಲಿ ಎಲ್ಲರೂ ಕನ್ನಡಿಗರು ಹಾಗೂ ಸ್ಥಳೀಯ ನಿವಾಸಿಗಳು ಆಗಿದ್ದಾರೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಾಲಕರೇ ಇಲ್ಲಿದ್ದಾರೆ. ಇವರಲ್ಲಿ ಬಹಳಷ್ಟು ಜನರು ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ್ದಾರೆ. ಆದ್ದರಿಂದ ಪ್ರಾಧಿಕಾರವು ಚಾಲಕರ ಜೊತೆ ಸಮನ್ವಯದಿಂದ ವರ್ತಿಸಬೇಕು. ಚಾಲಕರಿಗೆ ತೊಂದರೆಯಾಗದಂತೆ ಮೂರು ನಾಲ್ಕು ದಿನಗಳಲ್ಲಿ ಒಂದು ಪರಿಹಾರ ಕಂಡುಕೊಳ್ಳಬೇಕಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ಸಭೆ ಮಾಡಲಿದ್ದಾರೆ. ನಾನು ಸಹ ಅವರೊಂದಿಗೆ ಖುದ್ದಾಗಿ ಮಾತನಾಡುತ್ತೇನೆ. ಅಗತ್ಯವಿದ್ದರೆ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೆ ಮಾಹಿತಿ ನೀಡಿ ಈ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸೇರಿದಂತೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, ಟ್ಯಾಕ್ಸಿ ಚಾಲಕ ಸಂಘದ ಮುಖಂಡರು ಉಪಸ್ಥಿತರಿದ್ದರು.--------6ಕೆಡಿಬಿಪಿ1-
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಸದ ಡಾ.ಕೆ.ಸುಧಾಕರ್ ಚರ್ಚೆ ನಡೆಸಿದರು.