ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆದ ಬಿಐಎಎಲ್ ಆಡಳಿತ ಮಂಡಳಿಯ 2025-26ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಐಎಎಲ್‌ನ ಹೊಸ ಮೈಲಿಗಲ್ಲು ಬಗ್ಗೆ ವರದಿ ಮಂಡಿಸಲಾಗಿದೆ.
ಈ ವೇಳೆ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ದಿನದಿಂದ (2008) ಈವರೆಗೆ 40 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ಸಾಧನೆ ಮಾಡಿದೆ. ಜತೆಗೆ, ವೈಮಾನಿಕ ಕ್ಷೇತ್ರದಲ್ಲಿನ ಸವಾಲುಗಳ ನಡುವೆಯೂ 2025-26ನೇ ಸಾಲಿನಲ್ಲಿ 44.47 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡಿದ್ದು, 5.32 ಲಕ್ಷ ಟನ್ ಕಾರ್ಗೊ ಸೇವೆ ಮೂಲಕ ರಫ್ತಾಗಿದೆ. ವರ್ಷದಿಂದ ವರ್ಷಕ್ಕೆ ಸರಾಸರಿ ಶೇ.6.2ರಷ್ಟು ಪ್ರಗತಿ ಸಾಗಿಸುತ್ತಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಮಾಣದಲ್ಲಿ ಶೇ.23.9 ರಷ್ಟು ಭಾರಿ ಏರಿಕೆಯಾಗಿದೆ ಎಂದು ಶಾಲಿನಿ ರಜನೀಶ್ ಅವರು ಮಂಡಳಿಗೆ ಅಭಿನಂದನೆ ಸಲ್ಲಿಸಿದರು ಬಿಐಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.ಸರಕು ಸಾಗಣೆಯಲ್ಲಿ ಮುಂಚೂಣಿ:
ವಿಮಾನ ನಿಲ್ದಾಣದ ಪ್ರಯಾಣಿಕರ ಅನುಭವ, ತಂತ್ರಜ್ಞಾನ, ಸುರಕ್ಷತೆ, ಅತ್ಯುತ್ತಮ ವಿನ್ಯಾಸ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಯಾಣಿಕರಲ್ಲಿ ಗಣನೀಯ ವೃದ್ಧಿ ಹಣಕಾಸು ವರ್ಷ 2025-26ರಲ್ಲಿ ವಿಮಾನ ನಿಲ್ದಾಣವು ಒಟ್ಟು 44.47 ಮಿಲಿಯನ್ ಪ್ರಯಾಣಿಕರನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಶೇ.6.2ರಷ್ಟು ಬೆಳವಣಿಗೆ ಕಂಡಿದ್ದು, 7.23 ದಶಲಕ್ಷ ಅಂತಾರಾಷ್ಟ್ರೀಯ ಪ್ರಮಾಣಿಕರ ಮೂಲಕ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಶೇ.23.9ರಷ್ಟು ಬೆಳವಣಿಗೆ ಆಗಿದೆ. ದೇಶೀಯ ಸಂಚಾರ ಶೇ.3.3ರಷ್ಟು ಹೆಚ್ಚಾಗಿದ್ದು, 37.24 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಒಂದೇ ದಿನದಲ್ಲಿ ಗರಿಷ್ಠ 1.39 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ವಿಮಾನ ನಿಲ್ದಾಣವು ಹೊಸ ದಾಖಲೆ ಬರೆದಿದೆ. ಪ್ರಸ್ತುತ ನಿಲ್ದಾಣವು 78 ದೇಶೀಯ ಮತ್ತು 34 ಅಂತಾರಾಷ್ಟ್ರೀಯ ಸ್ಥಳಗಳಿಗೆ ನೇರ ಸಂಪರ್ಕ ಕಲ್ಪಿಸುತ್ತಿದೆ.