ಬಿಜೆಪಿ ಬೆಂಬಲದೊಂದಿಗೆ ಮತ್ತೆರಾಜ್ಯಸಭೆಗೆ ದೇವೇಗೌಡ ಆಯ್ಕೆ?

KannadaprabhaNewsNetwork |  
Published : May 17, 2026, 01:45 AM IST
HD Devegowda

ಸಾರಾಂಶ

ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಬರುವ ಜೂ.25ಕ್ಕೆ ಮುಕ್ತಾಯವಾಗುವುದರಿಂದ ಮತ್ತೊಮ್ಮೆ ರಾಜ್ಯಸಭೆ ಪ್ರವೇಶಿಸಲು ಮಿತ್ರಪಕ್ಷ ಬಿಜೆಪಿ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

 ಬೆಂಗಳೂರು:  ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಬರುವ ಜೂ.25ಕ್ಕೆ ಮುಕ್ತಾಯವಾಗುವುದರಿಂದ ಮತ್ತೊಮ್ಮೆ ರಾಜ್ಯಸಭೆ ಪ್ರವೇಶಿಸಲು ಮಿತ್ರಪಕ್ಷ ಬಿಜೆಪಿ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

ಆದರೆ, ಈ ಬಗ್ಗೆ ಈವರೆಗೆ ರಾಜ್ಯ ಬಿಜೆಪಿ ನಾಯಕರು ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿ ಎಂಬ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ.

ಮತ್ತೊಮ್ಮೆ ರಾಜ್ಯಸಭೆ ಪ್ರವೇಶಿಸಲು 93 ವರ್ಷದ ದೇವೇಗೌಡರು ಎಷ್ಟರಮಟ್ಟಿಗೆ ಆಸಕ್ತರಾಗಿದ್ದಾರೆ ಎನ್ನುವುದು ಸ್ಪಷ್ಟವಾಗದೇ ಇದ್ದರೂ ಪಕ್ಷದ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಅತೀವ ಆಸೆ ಇದೆ.

ಒಟ್ಟು ನಾಲ್ಕು ಸ್ಥಾನಗಳು ತೆರವಾಗಿದೆ

ಒಟ್ಟು ನಾಲ್ಕು ಸ್ಥಾನಗಳು ತೆರವಾಗಿ ಚುನಾವಣೆ ನಡೆಯುವುದರಿಂದ ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮೂರು ಸ್ಥಾನಗಳು ಲಭಿಸಲಿವೆ.

ಆದರೆ, ಜೆಡಿಎಸ್‌ಗೆ ಸಂಖ್ಯಾಬಲದ ಕೊರತೆ ಇರುವುದರಿಂದ ಮಿತ್ರಪಕ್ಷ ಬಿಜೆಪಿಯ ಬೆಂಬಲ ಅತ್ಯಗತ್ಯವಾಗಿದೆ. ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ 46 ಮತಗಳು ಬೇಕಾಗಲಿವೆ. ಕಾಂಗ್ರೆಸ್‌ಗೆ ಮೂರು ಸ್ಥಾನಗಳು ಅನಾಯಾಸವಾಗಿ ಸಿಗುವ ಸಾಧ್ಯತೆ ಇದೆ. ಪ್ರಮುಖ ಪ್ರತಿಪಕ್ಷ ಬಿಜೆಪಿಗೆ ಒಂದು ಸ್ಥಾನ ಮಾತ್ರ ಲಭಿಸಲಿದೆ. ಬಿಜೆಪಿಗೆ ಸಿಗುವ ಈ ಒಂದು ಸ್ಥಾನದ ಮೇಲೆ ಜೆಡಿಎಸ್‌ ಕಣ್ಣಿಟ್ಟಿದೆ.

ಎಚ್.ಡಿ.ಕುಮಾರಸ್ವಾಮಿ ಆಸಕ್ತ

ತಮ್ಮ ತಂದೆ ದೇವೇಗೌಡರನ್ನು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಕಳುಹಿಸುವ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆಸಕ್ತರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಬಿಜೆಪಿ ಹೈಕಮಾಂಡ್‌ ಮೂಲಕವೇ ಗೌಡರ ಹೆಸರು ಅಂತಿಮಗೊಳಿಸಲು ಅವರು ದೆಹಲಿಯಲ್ಲಿ ಸರ್ಕಸ್‌ ಆರಂಭಿಸಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬೀನ್‌ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟ ಹಾಗೂ ರಾಜ್ಯಸಭಾ ಚುನಾವಣೆಯ ಮೈತ್ರಿ ಕಾರ್ಯತಂತ್ರದ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ರಾಜ್ಯ ಬಿಜೆಪಿ ನಾಯಕರು ಈವರೆಗೂ ದೇವೇಗೌಡರ ಆಯ್ಕೆ ಕುರಿತು ಸ್ಪಷ್ಟ ಅಭಿಪ್ರಾಯ ನೀಡಿಲ್ಲ. ತಮ್ಮದೇ ಪಕ್ಷದ ಮತ್ತೊಬ್ಬ ನಾಯಕನಿಗೆ ಅವಕಾಶ ನೀಡುವಂತೆ ಹೈಕಮಾಂಡ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನದತ್ತ ಎಲ್ಲರ ಚಿತ್ತ ಹರಿದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ತಿಂಗಳ ಮೊದಲ, 3ನೇ ಶನಿವಾರ ಪ್ರಜಾಸೇವೆ
ಮಾಲೀಕನಿದ್ದರೂ ಬೇರೊಬ್ಬರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿ