ಶೂನ್ಯ ಬಂಡವಾಳದೊಂದಿಗೆ ₹30 ಕೋಟಿ ಗಳಿಸಲು ಹೊರಟ ತೆಂಗಿನ ನಾರಿನ ನಿಗಮ

KannadaprabhaNewsNetwork |  
Published : May 17, 2026, 01:45 AM IST
ಶೋ ರೂಂ ಉದ್ಘಾಟನೆ | Kannada Prabha

ಸಾರಾಂಶ

ರೋಗಗ್ರಸ್ತವಾಗಿರುವ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವನ್ನು ಶೂನ್ಯ ಬಂಡವಾಳದಲ್ಲಿ ಅಭಿವೃದ್ಧಿ ಪಥದತ್ತ ತಿರುಗಿಸಿದ್ದಾರೆ ನಿಗಮದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು. ಇದೀಗ ನಿಗಮದ ತೆಂಗಿನ ನಾರಿನ ಉತ್ಪನ್ನಗಳು ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೋಗಗ್ರಸ್ತವಾಗಿರುವ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವನ್ನು ಶೂನ್ಯ ಬಂಡವಾಳದಲ್ಲಿ ಅಭಿವೃದ್ಧಿ ಪಥದತ್ತ ತಿರುಗಿಸಿದ್ದಾರೆ ನಿಗಮದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು. ಇದೀಗ ನಿಗಮದ ತೆಂಗಿನ ನಾರಿನ ಉತ್ಪನ್ನಗಳು ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿವೆ.

ದೆಹಲಿ ಮತ್ತು ರಾಜಸ್ಥಾನದಲ್ಲೂ ಮಾರಾಟ ಮಾಡುವ ಸಲುವಾಗಿ ರಾಜ್ಯ ತೆಂಗಿನ ನಾರಿನ ಉತ್ಪನ್ನಗಳನ್ನು ಹೊತ್ತ ವಾಹನಕ್ಕೆ ಖುದ್ದು ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳು ಚಾಲನೆ ನೀಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ತೆಂಗು ಬೆಳೆಯುವ 13 ಜಿಲ್ಲೆಗಳಲ್ಲಿ 35 ತೆಂಗಿನ ನಾರಿನ ಉತ್ಪನ್ನಗಳ ಉತ್ಪಾದನಾ ಘಟಕಗಳಿವೆ. 50 ಎಕರೆಯಷ್ಟು ಸ್ವಂತ ಜಾಗವನ್ನು ಹೊಂದಿವೆ. ಆದರೆ, ಸರಿಯಾದ ನಿರ್ವಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೋಗಗ್ರಸ್ತವಾಗಿವೆ. ಹೀಗಾಗಿ ಅದರಿಂದ ಉದ್ಯೋಗ ಪಡೆದಿದ್ದ ಸಾವಿರಕ್ಕೂ ಹೆಚ್ಚು ಮಹಿಳೆಯರು ಅತಂತ್ರರಾಗಿದ್ದರು. ಇದರ ಪುನಶ್ಚೇತನಕ್ಕೆ 10 ಕೋಟಿ ರು.ಗೂ ಹೆಚ್ಚು ಹಣದ ಅವಶ್ಯಕತೆ ಇತ್ತು. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ನಿಗಮವು ಸರ್ಕಾರದ ನೆರವಿಗೆ ಕಾಯುತ್ತಾ ಕೂರುವ ಬದಲು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕೆಲಸಕ್ಕೆ ಕೈ ಹಾಕಿ ಯಶಸ್ವಿಯಾಗಿದೆ.

ಮಹಿಳೆಯರ ಕಂಪನಿಗೆ ಹೊಣೆ:

ಮಹಿಳೆಯರೇ ನಡೆಸುತ್ತಿರುವ ವಿಎನ್ಆರ್ ಇನ್ಫ್ರಾ ಎಂಬ ಖಾಸಗಿ ಕಂಪನಿಗೆ ಪ್ರಯೋಗಾರ್ಥವಾಗಿ ಚನ್ನಪಟ್ಟಣದ ಕುಂತೂರುದೊಡ್ಡಿ ಘಟಕವನ್ನು ನಿರ್ವಹಣೆಗೆ ವಹಿಸಲಾಯಿತು. ಅಲ್ಲೀಗ 32 ಮಹಿಳೆಯರಿಗೆ ಉದ್ಯೋಗ ದೊರೆತಿದ್ದು ತೆಂಗಿನ ನಾರಿನ ಉತ್ಪಾದನೆ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆ. ವಿಎನ್ಆರ್ ಇನ್ಫ್ರಾ ಕಂಪನಿಯು ಉತ್ಪಾದಿಸುವ ಉತ್ಪನ್ನಗಳ ಪೈಕಿ ಶೇ. 30ರಷ್ಟನ್ನು ನಿಗಮಕ್ಕೆ ಕಡ್ಡಾಯವಾಗಿ ನೀಡಬೇಕು ಎಂಬ ನಿಯಮದೊಂದಿಗೆ ಪ್ರಯೋಗಾರ್ಥ ವ್ಯವಸ್ಥೆಯು ಯಶಸ್ವಿಯಾಗಿದೆ.

ಈಗ ಉಳಿದ 34 ಕೇಂದ್ರಗಳನ್ನೂ ಇದೇ ರೀತಿ ಬಳಸಿಕೊಂಡು ತೆಂಗಿನ ನಾರಿನ ಉತ್ಪನ್ನಗಳ ಉತ್ಪಾದನೆಗೆ ಕಂಪನಿಗಳು, ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದಿವೆ. ಯಾವುದೇ ಬಂಡವಾಳ ಇಲ್ಲದೇ ಈ ವ್ಯವಸ್ಥೆ ಜಾರಿ ಬಂದರೆ 3 ತಿಂಗಳಲ್ಲಿ 560 ಮಹಿಳೆಯರು ಉದ್ಯೋಗ ಪಡೆಯಲಿದ್ದಾರೆ. ಜೊತೆಗೆ ಒಂದು ವರ್ಷದಲ್ಲಿ ಹೆಚ್ಚುವರಿಯಾಗಿ 30 ಕೋಟಿ ರುಪಾಯಿ ವಹಿವಾಟು ನಡೆಸುವ ಗುರಿಯೊಂದಿಗೆ ಮುನ್ನಡೆದಿದ್ದೇವೆ ಎಂದು ತೆಂಗಿನ ನಾರಿನ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ‘ಕನ್ನಡಪ್ರಭ’ಕ್ಕೆ ವಿವರಿಸಿದರು.

ಕಲ್ಪಕೃತಿ ಬ್ರ್ಯಾಂಡ್‌ ಅಡಿ ಮಾರಾಟ:

ನಿಗಮದ ಉತ್ಪನ್ನಗಳು ಈಗಾಗಲೇ ರಾಜ್ಯದ ನಾಲ್ಕು ಕಡೆ ಕಲ್ಪಕೃತಿ ಬ್ರ್ಯಾಂಡಿನ ಅಡಿ ಮಾರಾಟ ಆಗುತ್ತಿವೆ. ಉತ್ಪಾದನೆ ಹೆಚ್ಚಿಸುವ ಜೊತೆಗೆ ಮಾರುಕಟ್ಟೆಯನ್ನೂ ವಿಸ್ತರಿಸುವ ಉದ್ದೇಶದೊಂದಿಗೆ ಹೊರ ರಾಜ್ಯಗಳ ವ್ಯಾಪಾರಿಗಳನ್ನು ಸಂಪರ್ಕಿಸಲಾಯಿತು. ದೆಹಲಿಗೆ ಒಂದು ಲೋಡ್ ಉತ್ಪನ್ನಗಳು ಹೋಗಿವೆ. ರಾಜಸ್ಥಾನದಲ್ಲಿ ಶೋ ರೂಂ ಅನ್ನು ಬಗಾಯತ್ ವೆಂಚರ್ಸ್ ಶುರು ಮಾಡಿದೆ. ಸರ್ಕಾರದ ವಿವಿಧ ವಿಭಾಗಗಳಿಂದ ನಿಗಮಕ್ಕೆ 6 ಕೋಟಿ ರುಪಾಯಿಯಷ್ಟು ಹಣ ಬಾಕಿ ಬರುವುದಿದೆ. ಅದನ್ನು ಕೊಡಿಸುವುದಾಗಿ ಮುಖ್ಯ ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ. ಆ ಹಣ ಬಂದರೆ ತೆಂಗಿನ ನಾರಿನ ಹುರಿ ಮಾಡುವ ಯಂತ್ರಗಳನ್ನು ಹಾಕುವ ಉದ್ದೇಶವಿದೆ. ಅದು ಸಾಧ್ಯವಾದರೆ ಇನ್ನಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಎಂಡಿ ಸಿ.ಎನ್. ಶಿವಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು.

ಡಚ್ ಮ್ಯಾಟ್, ಫ್ಲೋರ್‌ ಮ್ಯಾಟ್‌ಗಳಿಗೆ ತುಂಬಾ ಬೇಡಿಕೆ ಇದೆ. ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆ ವಿಸ್ತರಣೆಯನ್ನು ಜೊತೆ ಜೊತೆಗೇ ಮಾಡಲು ಕ್ರಮ ಕೈಗೊಂಡಿದ್ದೇವೆ. ಕರ್ನಾಟಕದ ತೆಂಗಿನ ನಾರಿನ ಕಚ್ಚಾ ಪದಾರ್ಥವು ತಮಿಳುನಾಡು, ಕೇರಳಕ್ಕೆ ಹೋಗುತ್ತಿತ್ತು. ಅಲ್ಲಿನವರಿಗೆ ಉದ್ಯೋಗ ಸಿಗುತ್ತಿತ್ತು. ಅದನ್ನು ಇಲ್ಲೇ ಬಳಸಿ ನಮ್ಮವರಿಗೆ 1 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ತೆಂಗಿನ ನಾರಿನ ನಿಗಮದ ಅಧ್ಯಕ್ಷ ನಟರಾಜ್ ಜಾನಕಿರಾಮ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬಾಕ್ಸ್…ರಾಜಸ್ಥಾನದಲ್ಲಿ ಕಲ್ಪಕೃತಿ ಶೋ ರೂಂ

ರಾಜಸ್ಥಾನದ ರಾಜಧಾನಿ ಜೈಪುರದ ರಾಜಪಥ ರಸ್ತೆಯಲ್ಲಿ ರಾಜ್ಯ ತೆಂಗಿನ ನಾರಿನ ಉತ್ಪನ್ನಗಳ ಕಲ್ಪಕೃತಿ ಶೋ ರೂಂ ಸಹ ವಾರದ ಹಿಂದೆ ಆರಂಭವಾಗಿದೆ. ಬಗಾಯತ್ ವೆಂಚರ್ಸ್ ಸಹಯೋಗದಲ್ಲಿ ಶುರುವಾಗಿರುವ ಈ ಶೋಂ ರೂಂ ಅನ್ನು ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಟರಾಜ್ ಜಾನಕಿರಾಂ ಉದ್ಘಾಟಿಸಿದ್ದಾರೆ. ಕನ್ನಡಿಗರಾದ ರಾಜಸ್ಥಾನದ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಆರ್. ಸುಹಾಸ್ ಹಾಗೂ ರಾಜಸ್ಥಾನ ಭಯೋತ್ಪಾದನಾ ನಿಗ್ರಹ ಪಡೆಯ ಎಡಿಜಿಪಿ ಎಂ.ಎನ್. ದಿನೇಶ್ ಸಹ ಈ ಸಂಭ್ರಮಕ್ಕೆ ಕೈ ಜೋಡಿಸಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್, ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಮುದ್ದುಗಂಗಾಧರ್ ಸಹ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುವಾದಿ ರಾಷ್ಟ್ರ ನಿರ್ಮಾಣಕ್ಕೆ ಯತ್ನ: ಸನತ್‌ಕುಮಾರ ಬೆಳಗಲಿ
ಟೌನ್‌ಶಿಪ್‌ ಹೆಸರಲ್ಲಿ ಜಮೀನು ಕಬಳಿಕೆ: ಎಚ್‌ಡಿಡಿ