ಸಮಾಜಸೇವೆ ಮೂಲಕ ಹೃದಯದಲ್ಲಿ ನೆಲೆಸಿದ ಸುಧಾಕರ್‌

KannadaprabhaNewsNetwork |  
Published : May 17, 2026, 01:30 AM IST
ಚಿತ್ರದುರ್ಗ  | Kannada Prabha

ಸಾರಾಂಶ

ಚಳ್ಳಕೆರೆ ನಗರದ ಶಾಸಕರ ಭವನದ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಡಿ.ಸುಧಾಕರ್ ನುಡಿ ನಮನ ಕಾರ್ಯಕ್ರಮದಲ್ಲಿ ಸುಧಾಕರ್ ಭಾವಚಿತ್ರಕ್ಕೆ ಶಾಸಕ ರಘುಮೂರ್ತಿ ಪುಷ್ಪನಮನ ಸಲ್ಲಿಸಿದರು. ಮಾಜಿ ಸಚಿವ ಎಚ್. ಆಂಜನೇಯ, ಎಂ.ಕೆ. ತಾಜ್ ಪೀರ್ ಇನ್ನಿತರರು ಇದ್ದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಬಣ್ಣನೆ । ಶಾಸಕರ ಭವನದ ಮುಂಭಾಗದಲ್ಲಿ ಡಿ.ಸುಧಾಕರ್‌ಗೆ ನುಡಿನಮನಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಮಾಜದಲ್ಲಿ ತನ್ನದೇ ಸಮಾಜಸೇವೆ ಮೂಲಕ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಹೃದಯವಂತ ರಾಜಕಾರಣಿಯಾಗಿ ಇಡೀ ಜಿಲ್ಲೆಯಲ್ಲಿ ಹೆಸರು ಮಾಡಿರುವವರು ಡಿ.ಸುಧಾಕರ್ ಎಂದು ಶಾಸಕ ಟಿ.ರಘುಮೂರ್ತಿ ಬಣ್ಣಿಸಿದರು.

ಚಳ್ಳಕೆರೆ ನಗರದ ಶಾಸಕರ ಭವನದ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಡಿ.ಸುಧಾಕರ್ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರಂಭದಲ್ಲಿ ನಾನು ರಾಜಕಾರಣಕ್ಕೆ ಬರಬೇಕು ಎಂಬ ನಿರ್ಧಾರಕ್ಕೆ ಬಂದು ಕ್ಷೇತ್ರದಲ್ಲಿ ಓಡಾಡುವಾಗ ಸುಧಾಕರ್ ಅವರ ಒಡನಾಟ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೂ ಅವರ ನನ್ನ ಸಂಬಂಧ ಸಹೋದರರ ರೀತಿಯಂತಿತ್ತು.

ಅವರ ರಾಜಕೀಯ ಚಾಣಾಕ್ಷತನದಿಂದಲೇ ರಾಜಕಾರಣದಲ್ಲಿ ಬೆಳೆದು ಬಂದವರು. ಅವರ ಹಾಸ್ಯದ ಮಾತುಗಳು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದ್ದವು. ಅವರ ಅನಾರೋಗ್ಯ ಸಂಬಂಧ ಸದಾ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಅವರ ಆರೋಗ್ಯ ಸುಧಾರಣೆಗೆ ಶ್ರಮಿಸಿದ್ದೇವೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಬದುಕಿಸಲು ವೈದ್ಯರು ಹರಸಾಹಸಪಟ್ಟರು ಎಂದು ವಿವರಿಸಿದರು.

ಅವರ ಮತ್ತು ನನ್ನ ನಡುವೆ ಕೆಲವು ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಇದ್ದರೂ ನನಗೆ ಮತ್ತೆ ನಗಿಸುತ್ತಿದ್ದರು ಎಂದು ಗದ್ಗದಿತರಾದರು. ರಾಜಕಾರಣದಲ್ಲಿ ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂಬ ಮಾತಿಗೆ ಸುಧಾಕರ್ ರಾಜಕೀಯದಲ್ಲಿ ಮಾಡಿದ ಕೆಲಸಗಳು ಅಚ್ಚಳಿಯದೇ ಉಳಿಯಲಿವೆ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸುಧಾಕರ್ ಜನಸೇವಕನಾಗಿ ಜನರಿಗೆ ಹೇಗೆ ಉಪಯೋಗ ಮಾಡಬೇಕು ಎಂಬುದನ್ನು ಅರಿತವರು. ಚಿಕ್ಕಪ್ಪನವರ ಗರಡಿಯಲ್ಲಿ ಬೆಳೆದು ಈ ಮಟ್ಟಕ್ಕೆ ಬಂದವರು. ದೇವರಾಜು ಅರಸು ಅವರ ಅಭಿಮಾನಿಯಾಗಿ ಸಾಮಾಜಿಕ ನ್ಯಾಯದ ಪರವಾಗಿದ್ದವರು. ಅದಕ್ಕಾಗಿಯೇ ಅವರು ಸಮಾಜದಲ್ಲಿ ನಾಯಕರಾಗಿ ಹೊರಹೊಮ್ಮಿದ್ದರು.

ಜಾತಿಬಲ, ತೋಳ್ಬಲ ಇಲ್ಲದ ವ್ಯಕ್ತಿ ನಾಲ್ಕು ಬಾರಿ ಶಾಸಕರಾಗಿ ಮಂತ್ರಿಯಾಗಿದ್ದು ಸುಲಭವಲ್ಲ. ಮಹಿಳಾ ಸಬಲೀಕರಣದ ಬಗ್ಗೆ ಅವರಿಗೆ ಒಲವಿತ್ತು. ಮಹಿಳಾ ಸಂಘಗಳಿಗೆ, ಬಡವರಿಗೆ ಸಹಾಯಧನ ಮಾಡುತ್ತಿದ್ದರು.

ಮಹಿಳಾ ಮತಗಳನ್ನು ಮತಬ್ಯಾಂಕ್ ಮಾಡಿಕೊಂಡಿದ್ದು ರಾಜಕೀಯವಾಗಿ ಬೆಳೆಯಲು ಕಾರಣವಾಗಿತ್ತು ಎಂದರು.

ರಾಜಕೀಯ ಚಾಣಾಕ್ಷತನದಿಂದಲೇ ಗಮನ ಸೆಳೆದವರು. ತಾನೂ ಬೆಳೆದು ತನ್ನವರನ್ನೂ ಬೆಳೆಸುವ ಗುಣ ಅವರಲ್ಲಿತ್ತು. ಸುಧಾಕರ್ ಅವರ ಆರೋಗ್ಯ ಸುಧಾರಣೆಗೆ ಸರ್ಕಾರ ಶ್ರಮಿಸಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲರೂ ಶ್ರಮಿಸಿದ್ದಾರೆ ಎಂದರು.

ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಸುಧಾಕರ್ ಕುಟುಂಬಕ್ಕೂ ನಮಗೂ ಮೂವತ್ತು ವರ್ಷಗಳ ಅನುಬಂಧ ಇತ್ತು. ಮಂತ್ರಿಯಾಗಿದ್ದಾಗ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಗುಣ ಅವರು ಹೊಂದಿದ್ದರು. ಸುಧಾಕರ್ ಕುಟುಂಬದ ಸದಸ್ಯರು ಹಿರಿಯೂರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ, ನಾವೆಲ್ಲಾ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಕಷ್ಟ ಎಂದು ಮನೆಬಾಗಿಲಿಗೆ ಬಂದವರಿಗೆ ಬರಿಕೈಲಿ ಕಳಿಸದವರಲ್ಲ. ಅಂತಹ ಸೇವಾ ಮನೋಭಾವ ಅವರಲ್ಲಿತ್ತು. ಭದ್ರಾ ನೀರನ್ನು ದುರ್ಗಕ್ಕೆ ಹರಿಸಬೇಕು ಎಂಬ ಕನಸು ಕಂಡವರು ಸುಧಾಕರ್. ಮುಂದಿನ ಹಿರಿಯೂರು ಉಪಚುನಾವಣೆ ಬಹಳ ಮುಖ್ಯವಾಗಿದೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದರು.

ಕಾಂಗ್ರೆಸ್ ಮುಖಂಡ ಟಿ.ಪ್ರಭುದೇವ್ ಮಾತನಾಡಿ, ಪ್ರತಿಯೊಂದು ಜನಾಂಗವನ್ನು ತೆಕ್ಕೆಯಲ್ಲಿಟ್ಟುಕೊಂಡು ರಾಜಕಾರಣ ಮಾಡಿದವರು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಮಾತನಾಡಿ, ಇಷ್ಟುಬೇಗ ನಮ್ಮನ್ನೆಲ್ಲಾ ಅಗಲಿ ಹೋಗುತ್ತಾರೆ ಎಂದು ಕೊಂಡಿರಲಿಲ್ಲ. ಪ್ರತಿ ಸಂದರ್ಭದಲ್ಲಿ ನಗಿಸುತ್ತಿದ್ದರು. ಏಪ್ರಿಲ್ ತಿಂಗಳಲ್ಲಿ ಭದ್ರೆ ನೀರು ಜಿಲ್ಲೆಗೆ ಹರಿಸುವ ಆಲೋಚನೆ ಅವರಲ್ಲಿತ್ತು ಎಂದರು.

ಕಾಂಗ್ರೆಸ್ ಮುಖಂಡ ಸಿ.ವೀರಭದ್ರಬಾಬು, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ರಾಜ್ಯ ಕಾಂಗ್ರೆಸ್ ಕುಶಲಕರ್ಮಿಗಳ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಜಿ.ಟಿ. ಬಾಬು ರೆಡ್ಡಿ, ಗದ್ದಿಗೆ ತಿಪ್ಪೇಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತಾಬಾಯಿ ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ಎಚ್.ಎಸ್. ಸೈಯ್ಯದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ಕೆಡಿಪಿ ಸದಸ್ಯ ರಂಗಸ್ವಾಮಿ, ಸಂಪತ್ ಕುಮಾರ್, ಮಹಡಿ ಶಿವಮೂರ್ತಿ, ಪರಶುರಾಂಪುರ ನಾಗರಾಜ್, ಜಯವೀರಾಚಾರಿ, ಟಿ.ರವಿಕುಮಾರ್, ಡಿ.ಎನ್. ಮೈಲಾರಪ್ಪ ಸೇರಿದಂತೆ ಸುಧಾಕರ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು. ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಜಿ.ಟಿ. ಶಶಿಧರ್ ಕಾರ್ಯಕ್ರಮ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಗಟೇರಿ ಆಸ್ಪತ್ರೆಗೆ ಸಂಸದೆ ದಿಢೀರ್ ಭೇಟಿ
ಮೀಸಲಾತಿ ಬೇಡಿಕೆ ಈಡೇರದಿದ್ದರೆ ಹೋರಾಟ ಎಂದ ಉಗ್ರಪ್ಪ