ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದು ಸೇರಿ ಶೇ.90ರಷ್ಟು ಎಲ್ಲ ಭೌತಿಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ವಿಮಾನಗಳ ಹಾರಾಟ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕಾಮಗಾರಿಗಳ ಪರಿಶೀಲನೆ ನಡೆಸಿ ಟರ್ಮಿನಲ್ ಕಟ್ಟಡ, ನಿಲ್ದಾಣದ ರನ್ ವೇ, ಟ್ಯಾಕ್ಸಿ ವೇ, ಬ್ಯಾಗೇಜ್ ಹ್ಯಾಂಡಲಿಂಗ್ ವ್ಯವಸ್ಥೆ, ಸೆಕ್ಯುರಿಟಿ ಸ್ಕ್ಯಾನರ್ ಸೇರಿದಂತೆ ಭದ್ರತಾ ಉಪಕರಣಗಳು ಸೇರಿದಂತೆ ಬಾಕಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿಯಲ್ಲಿ ನಾಗರಿಕ ವಿಮಾನಯಾನ ಪ್ರಾಧಿಕಾರದವರು (ಡಿಜಿಸಿಎ) ಆಗಮಿಸಿ ಪರಿವೀಕ್ಷಣೆ ನಡೆಸಿದ ಬಳಿಕ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಸೇರಿದಂತೆ ಬಾಕಿ ಇರುವ ಎಲ್ಲ ಲೋಕೋಪಯೋಗಿ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಲು ಸೂಚಿಸಲಾಗಿದೆ. ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದ್ದು, ವಿಮಾನಗಳ ಹಾರಾಟದಿಂದ ಸಮಯದ ಉಳಿತಾಯದೊಂದಿಗೆ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ರಫ್ತಿಗೂ ಅನುಕೂಲವಾಗಲಿದೆ. ವ್ಯಾಪಾರ ವಹಿವಾಟಕ್ಕೂ ಉತ್ತೇಜನ ದೊರೆಯಲಿದ್ದು, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.ಎರಡನೇ ಹಂತದ ₹ 125 ಕೋಟಿ ಪುನಃ ಎರಡು ಉಪ ಕಾಮಗಾರಿಗಳಾಗಿ ವಿಂಗಡಿಸಲಾಗಿದೆ. ಸಿವಿಲ್ ಕಾಮಗಾರಿಗಾಗಿ ₹ 105.60 ಕೋಟಿ ಹಾಗೂ ಏವಿಯೋನಿಕ್ಸ್/ಸೆಕ್ಯೂರಿಟಿ ಉಪಕರಣಳ ಕಾಮಗಾರಿಗಾಗಿ ₹ 19.40 ಕೋಟಿ ನಿಗದಿಪಡಿಸಲಾಗಿದೆ. ಈ ಸಿವಿಲ್ ಕಾಮಗಾರಿಯು ₹ 105.60 ಕೋಟಿ, ₹ 86.20 ಕೋಟಿ ಮೊತ್ತದಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ.ಎಫ್.ಆರ್. ಕಟ್ಟಡ, ಕಾಂಪೌಂಡ್ ಗೋಡೆ ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದವರು ಹೇಳಿದರು.
ಸಿವಿಲ್ ಉಪಕಾಮಗಾರಿಗಳಲ್ಲಿ ಉಳಿದ ಮೊತ್ತ ₹ 19.40 ಕೋಟಿಗಳಲ್ಲಿ ವಿವಿಧ ಉಪಕಾಮಗಾರಿಗಳಿದ್ದು, ಮೊದಲನೇಯದಾಗಿ ₹ 1.39 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಆವರಣದಲ್ಲಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರ ಕಾಮಗಾರಿ ಪೂರ್ಣಗೊಂಡಿದೆ. ₹ 5.93 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣಕ್ಕೆ 24ಷ7 ನೀರು ಸರಬರಾಜು ಕಾಮಗಾರಿ ಪೂರ್ಣಗೊಂಡಿದೆ. ₹ 3.65 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣಕ್ಕೆ 2000 ಕಿ.ಲೋ.ವ್ಯಾಟ್ ನಿರಂತರ ವಿದ್ಯುತ್ ಸರಬರಾಜು ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ ಮೊತ್ತದ ಕಾಮಗಾರಿಯ ಮೇಲ್ವಿಚಾರಣೆ ಮಾಡುವ ತಾಂತ್ರಿಕ ಸಂಸ್ಥೆಗೆ ಶುಲ್ಕ ಪಾವತಿ ಮಾಡುವುದು ಹಾಗೂ ಇತರೆ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಅಶೋಕ ಮನಗೂಳಿ, ಮಾಜಿ ಶಾಸಕ ರಾಜು ಆಲಗೂರ, ಲೋಕೋಪಯೋಗಿ ಇಲಾಖೆಯ ಧಾರವಾಡ ಉತ್ತರ ವಲಯದ ಮುಖ್ಯ ಅಭಿಯಂತರ ಎಚ್.ಸುರೇಶ, ವಿಜಯಪುರ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಕಾರ್ಯನಿರ್ವಾಹಕ ಅಭಿಯಂತರ ರಾಜುಕೃಷ್ಣ ಮುಜುಮದಾರ, ಗುತ್ತಿಗೆದಾರ ಎಸ್.ಎಸ್.ಆಲೂರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಂ.ಪಾಟೀಲ ಸೇರಿದಂತೆ ಮುಂತಾದವರು ಇದ್ದರು.