- ಎಲ್ಲೆಲ್ಲೂ ವಾಯುಪುತ್ರ ಹನುಮನಿಗೆ ಮೊಳಗಿದ ಉದ್ಘೋಷ
- ಆಂಜನೇಯನ ವಿವಿಧ ರೂಪಗಳನ್ನು ನೋಡಿ ಬೆರಗಾದ ಯುವ ಸಮೂಹ- ಶಾಂತಿಯುತವಾಗಿ ಸಂಪನ್ನಗೊಂಡ ಭವ್ಯ ಮೆರವಣಿಗೆ------
ಕನ್ನಡಪ್ರಭ ವಾರ್ತೆ ಹುಣಸೂರುಎಲ್ಲೆಲ್ಲೂ ವಾಯುಪುತ್ರ ಹನುಮನಿಗೆ ಮೊಳಗಿದ ಉದ್ಘೋಷ.., ಆಂಜನೇಯನ ವಿವಿಧ ರೂಪಗಳನ್ನು ನೋಡಿ ಬೆರಗಾದ ಯುವ ಸಮೂಹ..ಅಂಜನಸುತನ ಕುರಿತಾದ ಹಾಡಿಗೆ ಹುಚ್ಚೆದ್ದು ಕುಣಿದ ಯುವಸಮೂಹ..ಶಾಂತಿಯುತವಾಗಿ ಸಂಪನ್ನಗೊಂಡ ಭವ್ಯ ಮೆರವಣಿಗೆ.
ಹುಣಸೂರಿನಲ್ಲಿ ಮಂಗಳವಾರ ಆಯೋಜನೆಗೊಂಡಿದ್ದ 29ನೇ ವರ್ಷದ ಹನುಮಜಯಂತಿಯ ಭವ್ಯ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು. 15 ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಒಟ್ಟಾಗಿ ಸೇರಿ ಇಡೀ ಪಟ್ಟಣವನ್ನು ಕೇಸರಿಮಯವಾಗಿಸಿದರು. ರಾಮಪುತ್ರನ ಬಾವುಟವನ್ನು ಹೊಂದಿದ ಕೇಸರಿಧ್ವಜಗಳು ರಾರಾಜಿಸಿದವು.ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಚಾಲನೆ- ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಲ್ಲಿ ವಾಡಿಕೆಯಂತೆ ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶೀ ನಟರಾಜ ಸ್ವಾಮೀಜಿ ಮತ್ತು ಮಾದಳ್ಳಿ ಉಕ್ಕಿನಕಂತ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಶಾಸಕ ಜಿ.ಡಿ. ಹರೀಶ್ ಗೌಡ, ಸಂಸದ ಪ್ರತಾಪ್ ಸಿಂಹ, ಮಾಜಿ ಸದಸ್ಯ ಎಚ್.ಪಿ. ಮಂಜುನಾಥ್ ಮತ್ತಿತರ ಗಣ್ಯರು ಶ್ರೀರಾಮ, ಸೀತಾಮಾತೆ, ಲಕ್ಷ್ಮಣರನ್ನೊಳಗೊಂಡು ಆಂಜನೇಯನ ಮೂರ್ತಿಗೆ ಸ್ವಾಮಿಗಳಿಂದ ಪೂಜೆ ಸಲ್ಲಿಸಿದ ನಂತರ ಎತ್ತರದ ವಾಹನದಲ್ಲಿ ಎಲ್ಲ ಗಣ್ಯರೂ ನಿಂತು ಆಂಜನೇಯನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆ ಆರಂಭಗೊಂಡಿತು.
ದಾರಿಯುದ್ದಕ್ಕೂ ಕೇಸರಿ ಕಲರವ- ರಂಗನಾಥ ಬಡಾವಣೆಯಿಂದ ಹೊರಟ ಮೆರವಣಿಗೆ ಕಲ್ಕುಣಿಕೆ ವೃತ್ತವನ್ನು ಹಾದು, ಶಬರಿಪ್ರಸಾದ್, ಸೇತುವೆಯ ಮೂಲಕ ಸಂವಿಧಾನ ವೃತ್ತವನ್ನು ತಲುಪಿತು. ಈ ಹೊತ್ತಿಗಾಗಲೇ ರಸ್ತೆಯುದ್ದಕ್ಕೂ ಯುವಕರು ಕೇಸರಿ ಬಾವುಟವನ್ನು ಹಿಡಿದು ಶ್ರಿರಾಮ, ಆಂಜನೇಯನ ಘೋಷಣೆಗಳನ್ನು ಕೂಗುತ್ತಾ ಸಾಗಲು ಆರಂಭಿಸಿದರು. ಕ್ಷಣಕ್ಷಣಕ್ಕೂ ವಾಯುಪುತ್ರನ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ರಸ್ತೆ ಮಧ್ಯೆ ಅಲ್ಲಲ್ಲಿ ಮಜ್ಜಿಗೆ, ಪಾನಕಗಳನ್ನು ಆಂಜನೇಯ ಭಕ್ತರು ನೀಡುತ್ತಿದ್ದರು. ಜೆಎಲ್ ಬಿ ರಸ್ತೆಯಲ್ಲಿ ಸಾಗುವ ವೇಳೆ ಬಾಲಕಿಯರು, ಮಹಿಳೆಯರು ಮೆರವಣಿಗೆಯಲ್ಲಿ ಸೇರಿಕೊಂಡು ನರ್ತಿಸಿ ಸಂಭ್ರಮಿಸಿದರು. ನಾವಲ್ಲೆ ಹಿಂದೂ ನಾವೆಲ್ಲ ಒಂದು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ಸಂಜೆ ನಾಲ್ಕರ ವೇಳೆಗೆ ಹೈವೋಲ್ಟೇಜ್ ರಸ್ತೆಯಾದ ಬಜಾರ್ ರಸ್ತೆಯಲ್ಲಿ ಮಾರುತಿ ಭಕ್ತರು ಉದ್ಘೋಷಗಳನ್ನು ಮೊಳಗಿಸಿದರು. ಪೊಲೀಸರು ಮೆರವಣಿಗೆ ಎಲ್ಲೂ ನಿಲ್ಲದಂತೆ ಕ್ರಮವಹಿಸಿ ಶೀಘ್ರ ಮುನ್ನಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಮೆರವಣಿಗೆಯು ಅಕ್ಷಯ ಭಂಡಾರ್ ಮೂಲಕ, ಬಸ್ ನಿಲ್ದಾಣದ ಹಾದು ಮೈಸೂರು-ಹುಣಸೂರು ಮುಖ್ಯರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಆವರಣ ತಲುಪುವ ಮೂಲಕ ಮೆರವಣಿಗೆ ಶಾಂತಿಯುತವಾಗಿ ಸಂಪನ್ನಗೊಂಡಿತು.ಚಾಲನೆ ವೇಳೆ ತಾಲೂಕು ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್. ದಾಸ್, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಮುಖಂಡರಾದ ಬಿ.ಎಸ್. ಯೋಗಾನಂದಕುಮಾರ್, ರಮೇಶ್ ಕುಮಾರ್, ಗಣೇಶ್ ಕುಮಾರಸ್ವಾಮಿ, ನಾಗರಾಜ ಮಲ್ಲಾಡಿ, ಹನಗೋಡು ಮಂಜುನಾಥ್, ಎಸ್ಪಿ ಸೀಮಾ ಲಾಟ್ಕರ್ ಇತರರು ಭಾಗವಹಿಸಿದ್ದರು.
ಪವನಸುತನ ಸ್ಮರಣೆಯಲ್ಲಿ ಧನ್ಯತೆ ಪಡೆದರುಮೆರವಣಿಗೆಯುದ್ದಕ್ಕೂ ಯುವಪಡೆ ಶ್ರೀರಾಮಚಂದ್ರ, ಆಂಜನೇಯರ ಗುಣಗಾನ ಮಾಡುತ್ತಲೇ ಸಾಗಿದರು. ರಸ್ತೆಯ ಇಕ್ಕೆಲಗಳಲ್ಲು ಸ್ಥಳೀಯ ಜನರು ಆಸಕ್ತಿಯಿಂದ ಕೇಸರಿ ಬಂಟಿಂಗ್ಸ್‌ಗಳನ್ನು, ಪವನಸುತ ವಿವಿಧ ಭಂಗಿಗಳ ಭಾವಚಿತ್ರವನ್ನು ಅಳವಡಿಸಿದ್ದರು. ಪಡ್ಡೆ ಹುಡುಗರು ಬೈಕ್ ನಲ್ಲಿ ಬಾವುಟ ಕಟ್ಟಿಕೊಂಡು ಹೆಮ್ಮೆಯಿಂದ ಅತ್ತಿಂದಿತ್ತ ಓಡಾಡಿದರು. ಮೆರವಣಿಗೆಯಲ್ಲಿ 10ಕ್ಕೂ ಹೆಚ್ಚು ಶ್ರೀ ಆಂಜನೇಯನ ಮೂರ್ತಿಗಳು ಪಾಲ್ಗೊಂಡಿದ್ದವು. ಝಾನ್ಸಿ ಲಕ್ಷ್ಮೀ ಬಾಯಿ ಜಾಗೃತ ನಾಗರಿಕರ ವೇದಿಕೆ ವತಿಯಿಂದ ಕೃಷ್ಣಸುಂದರನಾದ ಆಂಜನೇಯ ಎಲ್ಲರ ಗಮನ ಸೆಳಯಿತು. ಕಲ್ಕುಣಿಕೆಯ ಯುವಕರ ಸಂಘ ಫಿಕ್ಷನ್ ಫಾರ್ಮರ್ಸ್ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಿದ್ದ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪಂಚಲೋಹದಿಂದ 5 ಅಡಿ ಎತ್ತರದ ತಯಾರಿಸಿದ ಪವನಸುತನ ಮೂರ್ತಿ, 15 ಅಡಿ ಎತ್ತರದ ಬೃಹತ್ ಮೂರ್ತಿಗಳು ಎಲ್ಲರಲ್ಲೂ ಭಕ್ತಿಯ ಪರಾಕಾಷ್ಠೆಯನ್ನು ತಲುಪುವಂತೆ ಮಾಡಿದವು, ಶಿವಜ್ಯೋತಿ ನಗರದ ಗರಡಿಮನೆ, ಕಲ್ಕುಣಿಕೆ ನಾಯಕರ ಗರಡಿಮನೆ, ಮುತ್ತುಮಾರಮ್ಮ ಗರಡಿಮನೆಯ ಆಂಜನೇಯಮೂರ್ತಿಗಳು, ದತ್ತಾತ್ರೇಯ ಮೂರ್ತಿ ಮುಂತಾದವುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಜಾನಪದ ಕಲೆಗಳ ಅನಾವರಣಮೆರವಣಿಗೆಯಲ್ಲಿ ಗಾವಡಗೆರೆಯ ಯುವಕ ತಂಡದಿಂದ ತಮಟೆ ವಾದನ, ಪಟ್ಟಣದ ಸರಸ್ವತಿಪುರಂನ ಡೊಳ್ಳುಕುಣಿತ, ವೀರಗಾಸೆಕುಣಿತ, ಹುಲಿ ವೇಷ ಕುಣಿತ, ಕೀಲುಕುದುರೆಗಳು, ಮಂಗಳವಾದ್ಯ ಮೆರವಣಿಗೆಯ ಅಂದವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಸಫಲವಾದವು.
ಭಕ್ತರೊಂದಿಗೆ ನಡೆದುಬಂದ ಶಾಸಕ: ಮೆರವಣಿಗೆ ಆರಂಭಗೊಂಡ ಸ್ಥಳದಲ್ಲಿ ಜನಪ್ರತಿನಿಧಿಗಳಿಗಾಗಿ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕ್ರಮವಹಿಸಲಾಗಿತ್ತು. ಶಾಸಕ ಜಿ.ಡಿ. ಹರೀಶ್ ಗೌಡ, ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ವಾಹನದ ಮೇಲೆ ಹತ್ತಿದರು. ಸ್ವಲ್ಪ ಸಮಯದ ನಂತರ ಮಾಜಿ ಶಾಸಕ ಮಂಜುನಾಥ್ ಮತ್ತು ಸಂಸದ ಪ್ರತಾಪ್ ಸಿಂಹ ತುರ್ತು ಕಾರ್ಯದ ನಿಮಿತ್ತ ವಾಹನದಿಂದ ಇಳಿದು ಮೈಸೂರಿಗೆ ತೆರಳಿದರು. ಕೂಡಲೇ ಶಾಸಕ ಹರೀಶ್ ಗೌಡ ತಾವು ವಾಹನದಿಂದ ಇಳಿದು ಹನುಮಭಕ್ತರೊಂದಿಗೆ ನಡೆದುಕೊಂಡೇ ಬರುತ್ತೇನೆಂದು ತಿಳಿಸಿ ಮೆರವಣಿಗೆಯ ಅಂತಿಮ ಕ್ಷಣದವರೆಗೂ ಸಾಗಿ ಬಂದರು.ಮಿಂಚಿದ ಗೋಕುಲ ರಸ್ತೆ: ಈ ಬಾರಿಯ ಹನುಮಜಯಂತಿ ಅಂಗವಾಗಿ ಪಟ್ಟಣದ ಎಲ್ಲಡೆ ಕೇಸರಿ ಬಾವುಟಗಳು, ಬಂಟಿಂಗ್ಸ್ ರಾರಾಜಿಸಿದ್ದರೂ, ಹಳೆ ಬಸ್ ನಿಲ್ದಾಣದ ಮುಂಭಾಗದ ಗೋಕುಲ ರಸ್ತೆ ಭರ್ಜರಿಯಾಗಿ ಸಿಂಗಾರಗೊಂಡು ಎಲ್ಲರ ಗಮನ ಸೆಳೆಯಿತು. ಸ್ಟುಡಿಯೋ ರಾಮಣ್ಣ, ಗೋವಿಂದೇಗೌಡ, ನಗರಸಭಾ ಸದಸ್ಯ ವಿವೇಕ್, ವರ್ತಕರು ಮತ್ತು ನಿವಾಸಿಗಳ ಸಹಯೋಗದಲ್ಲಿ ಇಡೀ ರಸ್ತೆ ದೀಪಾಲಂಕಾರ ಮತ್ತು ಕೇಸರಿಮಯದಿಂದ ಕಂಗೊಳಿಸಿತು. ರಸ್ತೆಯಲ್ಲಿನ ಮುಸ್ಲಿಂ ಬಾಂಧವರೂ ಕೂಡ ದೇಣಿಗೆ ನೀಡಿ ಸೌಹಾರ್ದತೆ ಮೆರೆದುದು ವಿಶೇಷವಾಗಿತ್ತು. ಮಧ್ಯಾಹ್ನ ನಾಲ್ಕು ಗಂಟೆಯವರೆಗೆ ಅನ್ನಸಂತರ್ಪಣೆ ನಡೆಸಲಾಯಿತು. ಅಂತೆಯೇ ಬಜಾರ್ ರಸ್ತೆಯಲ್ಲಿ ಸಿರ್ವಿ ಸಮಾಜ ಸೇವಾ ಟ್ರಸ್ಟ್ ಮತ್ತು ಜೆಎಲ್ ಬಿ ರಸ್ತೆಯ ಚರ್ಚ್ ಕಾಂಪ್ಲೆಕ್ಸ್ ಬಳಿಯೂ ಅನ್ನ ಸಂತರ್ಪಣೆ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪ್ರೋತ್ಸಾಹ ನೀಡಲಾಯಿತು.