ಸರ್ಕಾರಕ್ಕೆ ಸೇರಿದ ದೇವಸ್ಥಾನ ಆಸ್ತಿಯನ್ನು ರಕ್ಷಿಸಿ: ಬಿಜೆಪಿ ಹಿರಿಯ ಮುಖಂಡ ಅಪ್ಪಾಜಿಗೌಡ

KannadaprabhaNewsNetwork | Published : Dec 27, 2023 1:31 AM

ಸಾರಾಂಶ

ಆಂಜನೇಯಸ್ವಾಮಿ ದೇಗುಲ ಎಲ್ಲ ಸಮುದಾಯಕ್ಕೆ ಸೇರಿದ್ದು, ಅದು ಸಾರ್ವಜನಿಕರ ಸ್ವತ್ತು. ಕೆಲವರು ಅಕ್ರಮವಾಗಿ ದೇವಸ್ಥಾನದ ಆಸ್ತಿಯನ್ನು ಟ್ರಸ್ಟ್ ಹೆಸರಿಗೆ ಮಾಡಿಸಿಕೊಂಡು ಸ್ವಾರ್ಥಕ್ಕಾಗಿ ವಾಣಿಜ್ಯ ಮಳಿಗೆ ಕಟ್ಟಲು ಮುಂದಾಗುತ್ತಿದ್ದಾರೆ. ಆಸ್ತಿ ರಕ್ಷಣೆಗಾಗಿ ಎಲ್ಲ ಪಕ್ಷದ ಮುಖಂಡರು ಹಾಗೂ ಸಮುದಾಯದವರು ಕಾನೂನು ಹೋರಾಟ ಮಾಡುತ್ತಿದ್ದೇವೆ. ಶಾಸಕ ಪಿ.ಎಂ ನರೇಂದ್ರಸ್ವಾಮಿಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಎದುರಿನ ಆಂಜನೇಯಸ್ವಾಮಿ ದೇವಸ್ಥಾನವನ್ನು 1901ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮುಜರಾಯಿ ಇಲಾಖೆಗೆ ಸೇರಿಸಿದ್ದಾರೆ. ಸರ್ಕಾರಕ್ಕೆ ಸೇರಿದ ದೇವಸ್ಥಾನದ ಆಸ್ತಿಯನ್ನು ರಕ್ಷಿಸಿ ಭಕ್ತರ ಸೇವೆಗೆ ಅನುಕೂಲ ಮಾಡಿಕೊಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಅಪ್ಪಾಜಿಗೌಡ ತಿಳಿಸಿದರು.

ಪಟ್ಟಣದ ರಾಮಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಜನೇಯಸ್ವಾಮಿ ದೇವಸ್ಥಾನವು ಎಲ್ಲ ಸಮುದಾಯಕ್ಕೆ ಸೇರಿದ್ದಾಗಿದೆ. ಅದು ಸಾರ್ವಜನಿಕರ ಸ್ವತ್ತು. ಕೆಲವರು ಅಕ್ರಮವಾಗಿ ದೇವಸ್ಥಾನದ ಆಸ್ತಿಯನ್ನು ಟ್ರಸ್ಟ್ ಹೆಸರಿಗೆ ಮಾಡಿಸಿಕೊಂಡು ಸ್ವಾರ್ಥಕ್ಕಾಗಿ ವಾಣಿಜ್ಯ ಮಳಿಗೆ ಕಟ್ಟಲು ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ದೇವಸ್ಥಾನದ ಆಸ್ತಿ ರಕ್ಷಣೆಗಾಗಿ ಎಲ್ಲ ಪಕ್ಷದ ಮುಖಂಡರು ಹಾಗೂ ಸಮುದಾಯದವರು ಕಾನೂನು ಹೋರಾಟ ಮಾಡುತ್ತಿದ್ದೇವೆ ಹೊರತು ಶಾಸಕ ಪಿ.ಎಂ ನರೇಂದ್ರಸ್ವಾಮಿಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಕೋಟೆ ಮುಖಂಡ ಚಿಕ್ಕಮೊಗಣ್ಣ ದೇವಸ್ಥಾನದ ವಿಚಾರದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೆಸರನ್ನು ಬಳಸುವುದು ಖಂಡನೀಯ.

ದೇವಸ್ಥಾನದ ಜಾಗದಲ್ಲಿ ಅಂಗಡಿ ಮಳಿಗೆ ನಿರ್ಮಾಣ ಮಾಡದಂತೆ ಸಾರ್ವಜನಿಕರು ವಿರೋಧಿಸುತ್ತಿದ್ದಾರೆ ಹೊರತು ನರೇಂದ್ರಸ್ವಾಮಿ ಮತ್ತು ಮಲ್ಲಣ್ಣ ಅವರನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಸರಿಯಲ್ಲ ಎಂದರು.

ಅಂಗಡಿ ಮಳಿಗೆ ಕಾಮಗಾರಿ ಮುಂದುವರೆಸದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕೂಡ ರಜೆ ಇದ್ದ ವೇಳೆ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು.

ಮುಖಂಡ ಎಂ.ಮಾದಯ್ಯ ಉ.ಮಲ್ಲಣ್ಣ ಮಾತನಾಡಿ, ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ ಟ್ರಸ್ಟ್ ಹೆಸರಿಗೆ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಆಸ್ತಿ ಬರೆಸಿಕೊಳ್ಳಲಾಗಿದೆ. ತಹಸೀಲ್ದಾರ್ ಮುಜಾರಾಯಿ ಇಲಾಖೆಗೆ ಸೇರಿದ ಆಸ್ತಿ ಎಂದು ದಾಖಲೆ ನೀಡಿದ್ದಾರೆ ಎಂದರು.

ಪುರಸಭೆ ಮುಖ್ಯಾಧಿಕಾರಿಗಳು ನಕಲಿ ದಾಖಲೆಯಲ್ಲಿ ಮಾಡಲಾಗಿದ್ದ ಇ-ಸ್ವತ್ತು ರದ್ದುಪಡಿಸಿದ್ದಾರೆ. ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಅಂಗಡಿ ಮಳಿಗೆ ನಿರ್ಮಿಸಲು ಹೊರಟ್ಟಿದ್ದಾರೆ. ಸಾರ್ವಜನಿಕರ ಆಸ್ತಿ ರಕ್ಷಣೆ ಮಾಡಬೇಕೆಂದು ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಎಲ್ಲ ಮಾಹಿತಿಯನ್ನು ನ್ಯಾಯಾಲಯಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಸದ್ಯದಲ್ಲಿಯೇ ಅಂತಿಮ ವರದಿ ಹೊರ ಬೀಳಲಿದ ಎಂದರು.

ಯುವ ಮುಖಂಡ ನಂದೀಶ್ ಮಾತನಾಡಿ, ಈ ಹಿಂದೆ ಮಾಜಿ ಶಾಸಕರು ಅಕ್ರಮ ಅಂಗಡಿ ಮಳಿಗೆ ನಿರ್ಮಾಣಕ್ಕೆ ಕಡಿವಾಣ ಹಾಕಿದ್ದರೆ ಈ ಸಮಸ್ಯೆ ಆಗುತ್ತಿರಲ್ಲಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಅನ್ನದಾನಿ ಅವರೇ ಮೂಲ ಕಾರಣ. ಪ್ರಾರಂಭದಲ್ಲಿಯೇ ಅಂಗಳಿ ಮಳಿಗೆ ನಿರ್ಮಿಸದಂತೆ ಮನವಿ ಮಾಡಿಕೊಂಡರೂ ಕ್ಯಾರೇ ಎನ್ನಲ್ಲಿಲ್ಲ ಎಂದು ಆರೋಪಿಸಿದರು.

ದೇವಸ್ಥಾನದ ಆಸ್ತಿ ಸಂರಕ್ಷಣೆ ಮಾಡಲು ದೇವಸ್ಥಾನಕ್ಕೆ ಸಂಬಂಧ ಪಟ್ಟವರು ಹೋರಾಟ ಮಾಡುತ್ತಿದ್ದೇವೆ. ಈ ಸಂಬಂಧ ಶಾಸಕ ನರೇಂದ್ರಸ್ವಾಮಿ ಅವರ ಹೆಸರನ್ನು ಬಳಸುತ್ತಿರುವುದು ಅಪ್ರಸ್ತುತ. ದೇವಸ್ಥಾನದ ಆಸ್ತಿ ಉಳಿಸಲು ಹೋರಾಟ ಮುಂದುವರೆಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಲಿಂಗಪ್ಪ, ಬೊಕ್ಕಳೇಗೌಡ, ಶಿವರಾಜು, ಲೋಕೇಶ್, ಮಾದಯ್ಯಣ್ಣ, , ಮಹದೇವಸ್ವಾಮಿ ಸೇರಿದಂತೆ ಹಲವು ಮುಖಂಡರು ಇದ್ದರು.

Share this article