ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲ್ಲ

KannadaprabhaNewsNetwork | Published : Dec 28, 2024 12:47 AM

ಸಾರಾಂಶ

ದಾಬಸ್‍ಪೇಟೆ: ನೆಲಮಂಗಲ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಿಲ್ಲ, ಈಗಾಗಲೇ ಸಿಎಂ, ಡಿಸಿಎಂ, ಸಚಿವರು ನನಗೆ ಭರವಸೆ ನೀಡಿದ್ದಾರೆ. ಹಾಗಾಗಿ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಶ್ರೀನಿವಾಸ್ ಸ್ಪಷ್ಟನೆ ನೀಡಿದರು.

ದಾಬಸ್‍ಪೇಟೆ: ನೆಲಮಂಗಲ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಿಲ್ಲ, ಈಗಾಗಲೇ ಸಿಎಂ, ಡಿಸಿಎಂ, ಸಚಿವರು ನನಗೆ ಭರವಸೆ ನೀಡಿದ್ದಾರೆ. ಹಾಗಾಗಿ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಶ್ರೀನಿವಾಸ್ ಸ್ಪಷ್ಟನೆ ನೀಡಿದರು.

ಸೋಲದೇವನಹಳ್ಳಿ ಸಮೀಪದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಮೂರು ಗ್ರಾಪಂ ವ್ಯಾಪ್ತಿಯ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ವಿಮಾನ ನಿಲ್ದಾಣ ನಿರ್ಮಾಣ ಕುರಿತ ಸರ್ಕಾರದ ಅನೇಕ ಸಭೆಗಳಲ್ಲಿ ನಾನು ಕೂಡ ಭಾಗವಹಿಸಿದ್ದೇನೆ. ನನ್ನ ಕ್ಷೇತ್ರಕ್ಕೆ ವಿಮಾನ ನಿಲ್ದಾಣ ಬೇಡ, ಅದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂಬುದಾಗಿ ಗಟ್ಟಿ ಧ್ವನಿಯಲ್ಲಿ ಹೇಳಿದ್ದೇನೆ. ಅದಕ್ಕೆ ಸರ್ಕಾರ ಸ್ಪಂದಿಸಿದ್ದು, ನೆಲಮಂಗಲ ಭಾಗದಲ್ಲಿ ವಿಮಾನ ನಿಲ್ದಾಣ ಮಾಡುವುದಿಲ್ಲ ಎಂಬ ಭರವಸೆ ನೀಡಿದೆ. ಅಂತಹ ಸಂದರ್ಭ ಬಂದರೆ ನನ್ನ ಶಾಸಕ ಸ್ಥಾನ ಮುಡಿಪಾಗಿಟ್ಟು ನಾನು ಹೋರಾಟ ಮಾಡುತ್ತೇನೆ. ಈಗಗಾಲೇ ಬೆಂಗಳೂರು ದಕ್ಷಿಣ ಭಾಗದ ಕಡೆ ನಿರ್ಮಿಸುವ ಮಾತುಕತೆಯಾಗಿದೆ. ಕೆಲವೇ ದಿನಗಳಲ್ಲಿ ಘೋಷಣೆ ಆಗಬಹುದು. ನಮ್ಮ ಕ್ಷೇತ್ರದ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ 75ರಿಂದ ಸೋಲದೇವನಹಳ್ಳಿಯವರೆಗೂ ರೈತರು, ರಸ್ತೆ ಪಕ್ಕದ ಮಾಲೀಕರು ಸಹಕರಿಸಿದರೆ ದ್ವಿಪಥ ರಸ್ತೆ ಮಾಡಿಸಲು ನಾನು ಸಿದ್ದನಿದ್ದೇನೆ. ನೀವು ಸಹಕಾರ ನೀಡಿದರೆ ನಿಮ್ಮ ಜಮೀನಿಗೆ ಚಿನ್ನದ ಬೆಲೆ ಬರುವಂತೆ ರಸ್ತೆ ಅಭಿವೃದ್ಧಿ ಮಾಡಿಸಲಾಗುತ್ತದೆ ಎಂದು ಹೇಳಿದರು.

ನಟ ವಿನೋದ್ ರಾಜ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ನಾವೆಲ್ಲಾ ಶಾಸಕರ ಮನೆ ಬಳಿ ಹೋದಾಗಲೂ, ನನ್ನ ಶಾಸಕ ಸ್ಥಾನಕ್ಕೆ ಸಮಸ್ಯೆಯಾದರೂ ವಿಮಾನ ನಿಲ್ದಾಣ ಆಗಲು ಬಿಡಲ್ಲ, ಆಗುವುದೂ ಇಲ್ಲ, ನಾನಿದ್ದೇನೆ ಎಂಬ ಭರವಸೆ ನೀಡಿದ್ದರು. ಈಗಲೂ ಅದೇ ಮಾತಿಗೆ ಬದ್ಧರಾಗಿದ್ದಾರೆ. ಅವರ ಮೇಲೆ ಸಂಪೂರ್ಣ ನಂಬಿಕೆಯಿದೆ. ಆತಂಕ ಪಡುವುದು ಬೇಡ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ.ಗೌಡ ಮಾತನಾಡಿ, ಸೋಲದೇವನಹಳ್ಳಿ, ಯಂಟಗಾನಹಳ್ಳಿ, ಮೋಟಗಾನಹಳ್ಳಿ ಭಾಗದಲ್ಲಿ ವಿಮಾನ ನಿಲ್ದಾಣ ಬರುತ್ತದೆ ಎಂಬ ಆತಂಕದಿಂದ ರೈತರು ಬಹಳಷ್ಟು ಮಾನಸಿಕ ನೋವು ಅನುಭವಿಸುತ್ತಿದ್ದರು. ರೈತರ ಆತಂಕ ಹಾಗೂ ನೋವಿನ ವಿಚಾರಗಳಿಗೆ ಶಾಸಕರು ಸ್ಪಷ್ಟನೆ ನೀಡಿ, ಅವರ ಆತಂಕ ದೂರಗೊಳಿಸಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಗಾಂಧಿಗ್ರಾಮ ವಿಎಸ್‍ಎಸ್‍ಎನ್ ಅಧ್ಯಕ್ಷ ವೀರಮಾರೇಗೌಡ, ಕಾಂಗ್ರೆಸ್ ಯುವ ಮುಖಂಡ ಚಿಕ್ಕಹನುಮೇಗೌಡ, ಗ್ರಾಪಂ ಅಧ್ಯಕ್ಷ ಸಂತೋಷಕುಮಾರ್, ರಾಹುಲ್ ಗೌಡ, ಮಾಜಿ ಅಧ್ಯಕ್ಷ ರುದ್ರಪ್ಪ, ಸದಸ್ಯರಾದ ಶ್ರೀನಿವಾಸ್, ಮುನಿರಾಜು, ಸಂದೀಪ್, ಶಿವಕುಮಾರ್, ಕೃಷ್ಣಪ್ಪ, ಮಹದೇವಪುರ ಚಿಕ್ಕಣ್ಣ, ಪ್ರಸನ್ನಕುಮಾರ್, ಮಂಜುನಾಥಯ್ಯ ಇತರರಿದ್ದರು.

ಪೋಟೋ 8 :

ಸೋಲದೇವನಹಳ್ಳಿ ಸಮೀಪದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಸಭೆಯಲ್ಲಿ ಶಾಸಕ ಶ್ರೀನಿವಾಸ್ ಮಾತನಾಡಿದರು.

Share this article