ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹುಟ್ಟುಹಬ್ಬದ ಅಂಗವಾಗಿ ಜರುಗಿದ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.ಕೆ.ಎಂ.ದೊಡ್ಡಿ ಭಾರತೀ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಯುವಕ- ಯುವತಿಯರು ಆಗಮಿಸಿದ್ದರು. ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಇಂಜಿನಿಯರಿಂಗ್, ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ, ಡಿ-ಫಾರ್ಮ್, ಬಿ-ಪಾರ್ಮಸಿ, ನರ್ಸಿಂಗ್, ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂಎಸ್ಸಿ ವ್ಯಾಸಂಗ ಮಾಡಿರುವವರು ಹಾಗೂ ಅಂತಿಮ ವರ್ಷದಲ್ಲಿ ಓದುತ್ತಿರುವ ನಿರುದ್ಯೋಗಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಸಂದರ್ಶನದಲ್ಲಿ ಅನೇಕರು ಉತ್ತೀರ್ಣರಾಗಿ ಸ್ಥಳದಲ್ಲೇ ಉದ್ಯೋಗ ದಕ್ಕಿಸಿಕೊಂಡರು.
ಉದ್ಯೋಗ ಮೇಳದಲ್ಲಿ ೫೦ ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು. ಕಂಪನಿಯ ಸಿಬ್ಬಂದಿ ಸಂದರ್ಶನ ನಡೆಸುವುದರೊಂದಿಗೆ ತಮ್ಮ ಕಂಪನಿಯ ಮಾಹಿತಿಯನ್ನು ತಿಳಿಸಿ ಹಲವರನ್ನು ಆಯ್ಕೆ ಮಾಡಿಕೊಂಡರು. ಉದ್ಯೋಗ ಮೇಳಕ್ಕೆ ೧೨೫೩ ನಿರುದ್ಯೋಗಿಗಳು ಭಾಗವಹಿಸಿದ್ದು ಅದರಲ್ಲಿ ೮೮೦ ಮಂದಿ ಸ್ಥಳದಲ್ಲೇ ಆಯ್ಕೆಯಾದರೆ ೬೧೨ ಮಂದಿ ಆಯ್ಕೆಯನ್ನು ಕಾಯ್ದಿರಿಸಿದ್ದಾರೆ ಎಂದು ಉದ್ಯೋಗ ಮೇಳದ ಸಂಚಾಲಕ ಪ್ರೊ.ಎಸ್.ಜವರೇಗೌಡ ಮಾಹಿತಿ ನೀಡಿದರು.ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್‌ನ ಅಂಗಸಂಸ್ಥೆ, ಮಧು ಜಿ.ಮಾದೇಗೌಡ ಅಭಿಮಾನಿ ಬಳಗ, ಆಶಯ್ ಮಧು ಅಭಿಮಾನಿ ಬಳಗ, ಎಸ್.ರಿಕ್ರೂಟೆಕ್ ಸಹಯೋಗದಲ್ಲಿ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಬಿಇಟಿ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ. ನಂಜೇಗೌಡ ಚಾಲನೆ ನೀಡಿದರು. ನಂತರ ಮಾತನಾಡಿ, ಹಳ್ಳಿಗಾಡಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರು ಸ್ಥಾಪಿಸಿದ ಭಾರತೀ ವಿದ್ಯಾಸಂಸ್ಥೆ ಶರವೇಗದಲ್ಲಿ ಬೆಳೆಯುತ್ತ ಸಾವಿರಾರು ಮಂದಿಗೆ ದಾರಿದೀಪವಾಗಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ಉದ್ಯೋಗದಲ್ಲಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಎಸ್‌ವಿ ರಿಕ್ರೂಟೆಕ್ ಮುಖ್ಯಸ್ಥ ಎಸ್. ಜೀವನ್ ಉದ್ಯೋಗ ಆಕಾಂಕ್ಷಿಗಳಿಗೆ ಮಾಹಿತಿ ನೀಡಿದರು.ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಎಸ್. ಮಹದೇವಸ್ವಾಮಿ, ಪ್ರೊ.ಎಸ್.ನಾಗರಾಜು, ಡಾ.ಎಸ್.ಎಲ್. ಸುರೇಶ್, ಡಾ. ತಮಿಜ್‌ಮಣಿ, ಪ್ರೊ.ಎಸ್.ಜವರೇಗೌಡ, ಜಿ.ಬಿ. ಪಲ್ಲವಿ, ಬಿ.ಕೆ. ಕೃಷ್ಣ ಇದ್ದರು.