ಜ. 15ರಿಂದ ನವಗ್ರಹ ತೀರ್ಥದಲ್ಲಿ ಮಹಾಮಸ್ತಕಾಭಿಷೇಕ

KannadaprabhaNewsNetwork |  
Published : Dec 28, 2024, 12:47 AM IST
ನವಗ್ರಹ ತೀರ್ಥ | Kannada Prabha

ಸಾರಾಂಶ

ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಜ. 15ರಿಂದ 26ರ ವರೆಗೆ ಮಹಾಮಸ್ತಕಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಚಾಲನೆ ನೀಡಿದ್ದಾರೆ.

ಹುಬ್ಬಳ್ಳಿ:

ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಜ. 15ರಿಂದ 26ರ ವರೆಗೆ ಮಹಾಮಸ್ತಕಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹನ್ನೆರಡು ವರ್ಷದ ಬಳಿಕ ನಡೆಯುತ್ತಿರುವ ಎರಡನೇ ಮಹಾಮಸ್ತಕಾಭಿಷೇಕ ಇದಾಗಿದ್ದು, ಶ್ರವಣಬೆಳಗೊಳ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ ಮಾದರಿಯಲ್ಲಿ ಇಲ್ಲಿಯೂ ಮಹಾಮಸ್ತಕಾಭಿಷೇಕ ಮಾಡಲಾಗುತ್ತಿದೆ ಎಂದರು.

ತಮಿಳುನಾಡು, ರಾಜಸ್ಥಾನ, ಗುಜರಾತ, ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯಗಳಿಂದ ಜ.1ರಿಂದ ನವಗ್ರಹ ಕ್ಷೇತ್ರಕ್ಕೆ ಜೈನ ಸಮಾಜದ ಮುನಿಗಳು ಆಗಮಿಸಲಿದ್ದಾರೆ. ಅಮೆರಿಕ, ಪ್ರಾನ್ಸ್, ಜರ್ಮನ್ ಹಾಗೂ ಇನ್ನಿತರ ದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಆಚಾರ್ಯ ಶ್ರೀಗಳಾದ ಕುಂತುಸಾಗರ, ಪದ್ಮನಂದಿ ಮಹಾರಾಜ್‌, ದೇವನಂದಿ ಮಹಾರಾಜ್‌, ಸೂರ್ಯಸಾಗರ ಮಹಾರಾಜ್‌, ಗುಪ್ತ್‌ನಂದಿ ಮಹಾರಾಜ ಸೇರಿದಂತೆ ಇತರ ಮಹಾರಾಜರು, ಪೇಜಾವರ ಶ್ರೀ, ಆದಿಚುಂಚನಗಿರಿ ಮಠದ ಸ್ವಾಮೀಜಿ ಸೇರಿದಂತೆ ಇತರ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

61 ಅಡಿ ಎತ್ತರದ ಭಗವಾನ ಶ್ರೀ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚ ಕಲ್ಯಾಣ ಮಹಾಮಹೋತ್ಸವ ನಡೆಯಲಿದೆ. ಸರ್ವಧರ್ಮದವರೂ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಜ. 15ರಿಂದ 20ರ ವರೆಗೆ ನಡೆಯಲಿದೆ. ಜ. 15 ಹಾಗೂ 16ರಂದು ಭಗವಾನ ಪಾರ್ಶ್ವನಾಥ ತೀರ್ಥಂಕರ ಗರ್ಭಕಲ್ಯಾಣ ಮಹೋತ್ಸವ, 17ರಂದು ಭಗವಾನ ಪಾರ್ಶ್ವನಾಥರ ರಾಜ್ಯಾಭಿಷೇಕ, 19ರಂದು ಕೇವಲ ಜ್ಞಾನ, 20ರಂದು ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.

ನವಗ್ರಹದ ತೀರ್ಥಂಕರ ಮೂತಿರ್ಗಳಿಗೆ ಜ. 20ರ ನಂತರ ನಿತ್ಯ ಅಭಿಷೇಕ ನಡೆಯಲಿದೆ. 9 ತೀರ್ಥಂಕರರ ಮೂರ್ತಿಗಳಿಗೆ ಜ. 21ರಂದು ನವಗ್ರಹ ಕ್ಷೇತ್ರದಲ್ಲಿನ ಜನಸಾಮಾನ್ಯರಿಂದ ಜಲಾಭಿಷೇಕ ನಡೆಯಲಿದೆ. ಜ. 22ರಂದು ಮೂರ್ತಿಗಳ ದಾನಿಗಳಿಂದ, ಜ. 25ರಂದು ಇಂದ್ರ-ಇಂದ್ರಾಣಿಯರಿಂದ ಮಹಾಮಸ್ತಕಾಭಿಷೇಕ ಜರುಗಲಿದೆ ಎಂದು ಹೇಳಿದರು.

22, 23 ಹಾಗೂ 24ರಂದು ಹೆಲಿಕಾಪ್ಟರ್‌ನಿಂದ ನವಗ್ರಹ ತೀರ್ಥಂಕರರ ಮೇಲೆ ಪುಷ್ಪವೃಷ್ಟಿ ನೆರವೇರಲಿದೆ. 23ರಂದು ಮುಂಜಿ ಬಂಧನ, ವ್ರತ ಸಂಸ್ಕಾರ ಆಯೋಜಿಸಲಾಗಿದೆ. ಮಂತ್ರ ಸಂಸ್ಕಾರಕ್ಕೆ ಹೆಣ್ಣುಮಕ್ಕಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡರ ಜ. 20ರಂದು, 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ವಿ. ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಕೇಂದ್ರ, ರಾಜ್ಯಗಳ ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳುವರು. 22ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮಂಗೇಶ ಭೇಂಡೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

15ರಂದು ರಾಜ್ಯಪಾಲ ಥಾವರ್‌ಚಾಂದ್‌ ಗೆಹಲೋತ್‌ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. 16ರಂದು ಉಪರಾಷ್ಟ್ರಪತಿ ಜಗದೀಪ ಧನಕರ್‌ ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಗೂ ಮೊದಲು ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಮಾತನಾಡಿ, ವರೂರು ಕ್ಷೇತ್ರದಲ್ಲಿ ಕಳೆದ ಎಂಟು ತಿಂಗಳಿನಿಂದ ತಯಾರಿ ನಡೆದಿದೆ. ಧರ್ಮ ಕಾರ್ಯವಾಗಿದ್ದು, ಅಹಂಕಾರ ಬಿಟ್ಟು, ಎಲ್ಲರೂ ಸಮಾನವಾಗಿ ಕೆಲಸ ಮಾಡಬೇಕು. ಶ್ರದ್ಧಾ ಭಕ್ತಿಯಿಂದ ಸೇವೆ ಮಾಡೋಣ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.17ಕ್ಕೆ ವಿಜಯಪ್ರಕಾಶ , ಅನುರಾಧಾ ಭಟ್, 20ಕ್ಕೆ ಅರ್ಜುನ ಜನ್ಯ, ಅನುಶ್ರೀ, 22ರಂದು ರಾಜೇಶ ಕೃಷ್ಣನ್ , 23ಕ್ಕೆ ಸಾಧುಕೋಕಿಲ, 24ಕ್ಕೆ ಚಿತ್ರನಟ ರವಿಚಂದ್ರನ್‌, ತರುಣ ಸುಧೀರ ಭಾಗವಹಿಸುವರು, ಕವಿಗಳು, ಸಾಹಿತಿಗಳು, ಜೈನ ಧರ್ಮದ ಗೀತೆ ಹಾಡಿದ ಗಾಯಕರು ಸಹ ಭಾಗವಹಿಸಲಿದ್ದಾರೆ ಎಂದು ಗುಣಧರನಂದಿ ಮಹರಾಜರು ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ