ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕುಡಿಯುವ ನೀರಿನ ಕಾಮಗಾರಿಗಳು ಅತ್ಯಂತ ಕಳಪೆಯಾಗಿರುವ ಬಗ್ಗೆ ಸಂಸದ ಗೋವಿಂದ ಎಂ.ಕಾರಜೋಳ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಈ ಸಂಬಂಧ ಬಿಲ್ ಪಾವತಿಗೆ ತಡೆ ನೀಡುವಂತೆ ಸೂಚಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಜರುಗಿದ ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ (ದಿಶಾ) ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರುಕೇಂದ್ರ ಸರ್ಕಾರ ಯೋಜನೆಯಡಿ ಜಿಲ್ಲೆಗೆ ಎರಡು ಸಾವಿರಾರು ಕೋಟಿ ಅನುದಾನದ ನೀಡಿದೆ. ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರ ಹಣ ಪುೋಲಾಗುವುದ ಸಹಿಸಲು ಆಗುವುದಿಲ್ಲ. ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ನೀಡಬೇಕಿದ್ದ ಬಿಲ್ ಪಾವತಿಯನ್ನು ತಕ್ಷಣವೇ ತಡೆ ಹಿಡಿಯಬೇಕು ಎಂದರು. ಕಾಮಗಾರಿಗಳು ಪೂರ್ಣಗೊಂಡು, ಗುಣಮಟ್ಟದ ಪ್ರಮಾಣಪತ್ರ ದೊರೆಯುವವರೆಗೆ ಕೇಂದ್ರ ಸರ್ಕಾರ ಬಾಕಿ ಇರುವ ರು. 450 ಕೋಟಿ ಅನುದಾನ ನೀಡುವುದಿಲ್ಲ. ಇದರಿಂದ ಯೋಜನೆಗೆ ಅನುದಾನ ಕೊರತೆ ಉಂಟಾಗುತ್ತದೆ. ಕೂಡಲೇ ಲೋಪದೋಷ ಸರಿಪಡಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆಕಾಶ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯ ಒಟ್ಟು 1,500 ಜೆಜೆಎಂ ಕಾಮಗಾರಿಗಳ ಪೈಕಿ ಶೇ.30ರಷ್ಟು ಅಂದರೆ ಸುಮಾರು 500 ಕಾಮಗಾರಿಗಳನ್ನು ತಾಲೂಕು ಮಟ್ಟದ ತಾಂತ್ರಿಕ ತಂಡದಿಂದ ತಪಾಸಣೆ ನಡೆಸಲಾಗಿದೆ. ವರದಿಯಲ್ಲಿ 160 ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿವೆ. ರಸ್ತೆ ಮರುನಿರ್ಮಾಣ, ಪೈಪ್‍ಗಳ ಗುಣಮಟ್ಟ ಮತ್ತು ನೀರಿನ ಒತ್ತಡದ ನಿರ್ವಹಣೆಯಲ್ಲಿ ಲೋಪಗಳು ಕಂಡುಬಂದಿವೆ ಎಂಬುದಾಗಿ ವರದಿ ಸಲ್ಲಿಕೆಯಾಗಿದೆ ಎಂದರು.

ಜಲ ಜೀವನ್ ಮಿಷನ್ ಕಾಮಗಾರಿಗಳ ಬಗ್ಗೆ ಸಾಮಾನ್ಯ ವರದಿಯನ್ನು ಮಾತ್ರ ಪಡೆಯಲಾಗಿದೆ. ಇನ್ನು 15 ದಿನಗಳಲ್ಲಿ ಪೈಪ್ ಗುಣಮಟ್ಟ ಮತ್ತು ನೀರು ಪರೀಕ್ಷೆಯ ತಾಂತ್ರಿಕ ವರದಿ ಪಡೆಯಲಾಗುವುದು. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಇಒ ಡಾ.ಆಕಾಶ್ ತಿಳಿಸಿದರು.


ಜಿಲ್ಲೆಯಲ್ಲಿ ಶೇ.70ರಷ್ಟು ಜನರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಬಡವರಿದ್ದಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಈ ಬಡವರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ. ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿಯಬಾರದು. ಪ್ರಸ್ತುತ ಜಿಲ್ಲೆಯು ಎಸ್.ಎಸ್.ಎಲ್.ಸಿ ಪಲಿತಾಂಶದಲ್ಲಿ ಕೊನೆಯ ಸ್ಥಾನಗಳಲ್ಲಿದೆ. ಶೈಕ್ಷಣಿಕ ಪ್ರಗತಿಯಲ್ಲಿ ಜಿಲ್ಲೆಯನ್ನು ಮೊದಲ 3-4 ಸ್ಥಾನಗಳಿಗೆ ತರಲು ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ಗೋವಿಂದ ಕಾರಜೋಳ ಸೂಚಿಸಿದರು.

ಗಣಿ ಪ್ರದೇಶಗಳಲ್ಲಿ ನಡೆಯುವ ಬ್ಲಾಸ್ಟಿಂಗ್ ಅಬ್ಬರಕ್ಕೆ ಹೆದರಿ ಕರಡಿಗಳು ಸೇರಿದಂತೆ ಹಲವು ವನ್ಯಪ್ರಾಣಿಗಳು ರಸ್ತೆಗೆ ಬಂದು ಅಪಘಾತಕ್ಕೀಡಾಗುತ್ತಿವೆ. ಆದರೆ ಅಕ್ರಮ ಬ್ಲಾಸ್ಟಿಂಗ್ ತಡೆಯಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಕಾರಜೋಳ ಅಸಮಾಧಾನ ಹೊರ ಹಾಕಿದರು. ಜೋಗಿಮಟ್ಟಿ, ಮಾರಿಕಣಿವೆ, ಹಾಗೂ ವಿವಿಧ ಭಾಗದ ಸುಮಾರು 112 ಎಕರೆ ಅರಣ್ಯ ಭೂಮಿಯಲ್ಲಿ ವಿಂಡ್‍ ಫೋರ್ಸ್ ಇಂಡಿಯಾ ಕಂಪನಿ ಗಾಳಿ ಯಂತ್ರಗಳನ್ನು ಅಳವಡಿಸಿದೆ. ವಿಂಡ್‍ ಫೋರ್ಸ್ ನಿಯಮ ಉಲ್ಲಂಘನೆಗಾಗಿ ಕೇಂದ್ರ ಸರ್ಕಾರ ರು.23 ಕೋಟಿ ದಂಡ ವಿಧಿಸಿದೆ. ಕಂಪನಿ ದಂಡ ಪಾವತಿಸಿದ್ದು 20 ವರ್ಷಗಳ ಅವಧಿಗೆ ಗುತ್ತಿಗೆ ಪರವಾನಿಗೆಯನ್ನು ನವೀಕರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿನ ಖಾಸಗಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸ್ಥಳೀಯ ಅಭಿವೃದ್ಧಿ ಮತ್ತು ಅರಣ್ಯ ಸಂರಕ್ಷಣೆಗೆ ಸರಿಯಾಗಿ ಬಳಸುತ್ತಿಲ್ಲ. ಈ ಕುರಿತು ಕಂಪನಿಗಳೊಂದಿಗೆ ಚರ್ಚಿಸುವಂತೆ ಜಿಲ್ಲಾಧಿಕಾರಿಗೆ ಸಂಸದ ಗೋವಿಂದ ಎಂ ಕಾರಜೋಳ ಸೂಚಿಸಿದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹೆಚ್ಚುವರಿ ಪೋಲೀಸ್ ವರಿಷ್ಠಾದಿಕಾರಿ ಶಿವಕುಮಾರ್, ರೈಲ್ವೇ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು, ದಿಶಾ ಸಮಿತಿಯ ಸದಸ್ಯರು ಉಪಸ್ಥಿರಿದ್ದರು.