ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಸುದೀರ್ಘ ಹೋರಾಟದ ಫಲವಾಗಿ ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿಯಲ್ಲಿ ಹಲವು ಸುತ್ತಿನ ಚರ್ಚೆ ಬಳಿಕ ರಾಜ್ಯ ಸರ್ಕಾರ ಮೇ.22 2026ರಂದು 81 ನಿಗದಿತ ಉದ್ಯೋಗಗಳಿಗೆ ಪರಿಷ್ಕೃತ ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದರೆ, ಇದೀಗ ಸರ್ಕಾರವೇ ವೇತನ ಜಾರಿಯನ್ನು ತಡೆಹಿಡಿದು ಸಂಪುಟ ಉಪಸಮಿತಿ ರಚಿಸಿರುವುದು ಕಾರ್ಮಿಕ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು.
ಈ ಪರಿಷ್ಕರಣೆ ಒಂಬತ್ತು ವರ್ಷಗಳ ಬಳಿಕ ನಡೆದಿದ್ದು, ಕೆಲವು ಸರ್ಕಾರಿ ಇಲಾಖೆಗಳು, ನಿಗಮ-ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳು ಪರಿಷ್ಕೃತ ವೇತನದಂತೆ ಒಂದು-ಎರಡು ತಿಂಗಳ ವೇತನವನ್ನೂ ಪಾವತಿಸಿವೆ. ಉದ್ಯಮಪತಿಗಳು ವೇತನ ಹೆಚ್ಚಳ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರೂ, ಇದುವರೆಗೆ ತಡೆಯಾಜ್ಞೆ ದೊರೆತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವ ಸಂದರ್ಭದಲ್ಲಿ ಸರ್ಕಾರ ತನ್ನ ಅಧಿಸೂಚನೆಯನ್ನು ಜಾರಿಗೊಳಿಸುವ ಬದಲು ತಡೆಹಿಡಿದಿರುವುದು ಅಸಮಂಜಸ ಎಂದು ಹೇಳಿದರು.ಕನಿಷ್ಠ ವೇತನ ಸಲಹಾ ಮಂಡಳಿಯಲ್ಲಿ ಕಾರ್ಮಿಕ, ಉದ್ಯಮ, ಕಾರ್ಮಿಕ ಇಲಾಖೆ, ಆರ್ಥಿಕ ಇಲಾಖೆ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿ ಚರ್ಚಿಸಿದ ಬಳಿಕವೇ ವೇತನ ಪರಿಷ್ಕರಣೆ ಶಿಫಾರಸು ಮಾಡಲಾಗಿತ್ತು. ಹೀಗಾಗಿ, ಈಗ ಮರುಪರಿಶೀಲನೆ ಹೆಸರಿನಲ್ಲಿ ಜಾರಿ ತಡೆಹಿಡಿಯುವ ಅಗತ್ಯವಿಲ್ಲ ಎಂದು ಚಂದ್ರಶೇಖರ ಮೇಟಿ ಹೇಳಿದರು.
ಮೇ 22ರ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಜಾರಿಗೊಳಿಸಬೇಕು. ವೇತನ ಜಾರಿ ತಡೆಹಿಡಿಯುವ ಉದ್ದೇಶದಿಂದ ರಚಿಸಿರುವ ಸಚಿವ ಸಂಪುಟ ಉಪಸಮಿತಿಯನ್ನು ರದ್ದುಗೊಳಿಸಬೇಕು. ಕಾರ್ಮಿಕರಿಗೆ ಬಾಕಿ ಇರುವ ವೇತನ ವ್ಯತ್ಯಾಸದ (ಅರಿಯರ್ಸ್) ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗೀತಾ ರಾಯಗೋಳ, ಸುಜಾತಾ ಕಾದಮಠ, ಸುನೀಲ ಜುಂಜವಾಡ್ಕರ್, ಅಮರದಾಸ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.