ಅಜಲಾಪುರ: ಸಂಭ್ರಮದ ಬಲಭೀಮಸೇನ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Mar 22, 2024, 02:16 AM IST
ಗುರುಮಠಕಲ್ ತಾಲೂಕಿನ ಅಜಲಾಪುರ ಗ್ರಾಮದಲ್ಲಿ ಬಲಭೀಮಸೇನ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ನೇರಡಗಂ ಶ್ರೀಮಠದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಗುರುವಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಗುರುಮಠಕಲ್ ತಾಲೂಕಿನ ಅಜಲಾಪುರ ಗ್ರಾಮದಲ್ಲಿ ಬಲಭೀಮಸೇನ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ನೇರಡಗಂ ಶ್ರೀಮಠದ ಪಂಚಮ ಸಿದ್ಧಲಿಂಗ ಮಹಾಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಜಗತ್ತಿನ ಇತರ ಎಲ್ಲಾ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾಗಿದ್ದು, ಇದಕ್ಕಾಗಿ ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ಸಾಗಬೇಕು. ಸದ್ಗುರುವಿನ ಆರಾಧನೆಯಿಂದ ಜೀವನ ಪಾವನವಾಗಲಿದೆ ಎಂದು ನೇರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ತಾಲೂಕಿನ ಅಜಲಾಪುರ ಗ್ರಾಮದಲ್ಲಿ ಗುರುವಾರ ನಡೆದ ಲಿಂಗೈಕ್ಯ ದ್ವಾರಕಮ್ಮ ಪಾಂಡುರಂಗ ತಾತನವರ 7ನೇ ವರ್ಷದ ಪುಣ್ಯಸ್ಮರಣೆ ಹಾಗೂ ಬಲಭೀಮಸೇನ ರಥೋತ್ಸವ ಕಾರ್ಯಕ್ರಮದ ನಂತರ ಜರುಗಿದ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡವರು ಸಮಾಜದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ತಾನು ತನ್ನ ಕುಟುಂಬ ಎಂದು ಸ್ವಾರ್ಥ ಜೀವನ ನಡೆಸಿದವರ ಹೆಸರು ಸಮಾಜದಲ್ಲಿ ಬೇಗನೆ ಅಳಿಸಿ ಹೋಗುತ್ತದೆ. ನಾವು ಎಷ್ಟು ದಿನ ಜೀವಂತವಾಗಿ ಇದ್ದೇವೆ ಎನ್ನುವುದಕ್ಕಿಂತ ಜೀವನದಲ್ಲಿ ಎಷ್ಟು ಪುಣ್ಯದ ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ ಎಂದರು.

ನಮಗಿರುವ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ದೇವರ ಆರಾಧನೆ ಮಾಡಬೇಕು. ಶ್ರದ್ಧೆ, ನಂಬಿಕೆ ಮತ್ತು ಭಕ್ತಿಯಿಂದ ಬೇಡಿಕೊಂಡಲ್ಲಿ ದೇವರು ಖಂಡಿತವಾಗಿಯೂ ನಮಗೆ ಒಳಿತು ಮಾಡುತ್ತಾನೆ ಎಂಬ ಅಚಲ ನಂಬಿಕೆ ಪ್ರತಿಯೊಬ್ಬರಲ್ಲಿ ಇರಲಿ ಎಂದು ಕರೆ ನೀಡಿದರು.

ಶಂಕರಪ್ಪ ತಾತನವರ ನೇತೃತ್ವದಲ್ಲಿ ಜರುಗುತ್ತಿರುವ ಜಾತ್ರಾ ಮಹೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಭಕ್ತರು ಸೇರುತ್ತಿರುವುದು ಅತ್ಯಂತ ಖುಷಿ ವಿಚಾರ. ಭಕ್ತರ ಭಕ್ತಿಯೇ ಗುರುವಿನ ಶಕ್ತಿಯಾಗಿದ್ದು, ಭಗವಂತ ನಿಮ್ಮೆಲ್ಲರ ಕಷ್ಟ ಇತ್ಯರ್ಥ ಮಾಡುವ ಶಕ್ತಿ ನೀಡಲಿ ಎಂದು ಆಶಿಸಿದರು.

ಹನುಮಾನ ಆರಾಧಕ ರಾಘವೇಂದ್ರರಾವ್ ಕುಲಕರ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂದೆ ತಾಯಿ ಗೌರವಿಸುವುದು ತೀರಾ ವಿರಳ. ಆದರೆ ನಮ್ಮೂರಿನ ಶಂಕರಪ್ಪ ತಾತನವರು ಕಳೆದ 7 ವರ್ಷಗಳಿಂದ ತಮ್ಮ ಮಾತಾ ಪಿತೃಗಳ ಪುಣ್ಯಸ್ಮರಣೆಯನ್ನು ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜಾತ್ರಾ ಮಹೋತ್ಸವದ ರೂವಾರಿ ಶಂಕರಪ್ಪ ತಾತಾ, ಎ. ರಾಘವೇಂದ್ರರಾವ್ ಕುಲಕರ್ಣಿ, ಮಹೇಶ ಮುತ್ಯಾಜಿ ಬೇನಕನಹಳ್ಳಿ, ಲಿಂಗಪ್ಪ ತಾತ ಗುರ್ಲಪಲ್ಲಿ, ಬುಸ್ಸಣ್ಣ ತಾತಾ ಬೈರಂಪಲ್ಲಿ, ದೇವಪ್ಪಗೌಡ ಗುತ್ತೇದಾರ ರಾಚನಹಳ್ಳಿ, ಸೈದಪ್ಪ ಗುತ್ತೇದಾರ, ಕಿಷ್ಟಪ್ಪ ಪೂಜಾರಿ, ಹಬೀಬ್ ಸಾಬ್, ಬನ್ನಯ್ಯ ಮುತ್ಯಾ ಜೋಳದಡಗಿ, ದಿನೇಶ ಸ್ವಾಮಿ ನಾರಾಯಣಪೇಟ, ಶಿವರಾಮಪ್ಪ ತಾತ ಕುಣ್ಸಿ, ನರಸಪ್ಪ ತಾತ ಬಳಿಚಕ್ರ, ಸುದರ್ಶನ್ ಜೈಗ್ರಾಮ, ಮಹೇಂದ್ರ ಅನಪೂರ, ಚಂದ್ರಕಾಂತ ಕಟ್ಟಿಮನಿ, ಅಂಜಪ್ಪ ಮೌಲಾಲಿ ಆರಾಧಕರು, ಚಂದ್ರಶೇಖರ್ ಶಟ್ಟಿ, ನಾಗರೆಡ್ಡಿ, ಬಾಲಾಜಿ, ಶಿವುಕುಮಾರ ಆವಂಟಿ ಸೇರಿದಂತೆ ಇತರರಿದ್ದರು. ಇಮ್ರಾನ್ ಅಜಲಾಪುರ ಅವರು ಸ್ವಾಗತಿಸಿ, ನಿರೂಪಿಸಿದರು.

ಜಗತ್ತಿನಲ್ಲೇ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಪ್ರತಿಯೊಬ್ಬರು ಸಂವಿಧಾನದತ್ತವಾಗಿ ತಮಗೆ ಬಂದಿರುವ ಮತ ಹಾಕಬೇಕು. ಮತದಾನ ಅತಿ ದೊಡ್ಡ ಶಕ್ತಿಯಾಗಿದ್ದು ನಾಗರಿಕರು ತಮ್ಮ ಇಚ್ಛಾನುಸಾರ ಯಾರನ್ನಾದರೂ ಬೆಂಬಲಿಸಿ ಆದರೆ ಮತ ಹಾಕುವುದನ್ನು ಮಾತ್ರ ತಪ್ಪಿಸಬಾರದು.

ಪಂಚಮ ಸಿದ್ಧಲಿಂಗ ಮಹಾಸ್ವಾಮೀಜಿ, ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠ ನೇರಡಗಂ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ