ಸಕುರ ಪ್ರೋಗ್ರಾಂಗೆ ಆಯ್ಕೆಯಾದ ಆಕಾಶ್ ಹರಿಕಂತ್ರ

KannadaprabhaNewsNetwork |  
Published : Jun 23, 2026, 02:15 AM IST
ಆಕಾಶ್ ಹರಿಕಂತ್ರ | Kannada Prabha

ಸಾರಾಂಶ

ಗ್ರಾಮೀಣ ಪರಿಸರದಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲೂ ಜಾಗತಿಕ ಮಟ್ಟದ ಪ್ರತಿಭೆಗಳು ಅರಳಬಲ್ಲವು ಎನ್ನುವುದಕ್ಕೆ ಜಿಲ್ಲೆಯ ಕುಮಟಾದ ಆಕಾಶ್ ಹರಿಕಂತ್ರ ಸಾಕ್ಷಿಯಾಗಿದ್ದಾರೆ.

ಕನ್ನಡ ಮಾಧ್ಯಮದ ವಿದ್ಯಾರ್ಥಿ ಈಗ ಜಪಾನ್ ಅತಿಥಿ!

ಕನ್ನಡಪ್ರಭ ವಾರ್ತೆ ಕಾರವಾರ

ಗ್ರಾಮೀಣ ಪರಿಸರದಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲೂ ಜಾಗತಿಕ ಮಟ್ಟದ ಪ್ರತಿಭೆಗಳು ಅರಳಬಲ್ಲವು ಎನ್ನುವುದಕ್ಕೆ ಜಿಲ್ಲೆಯ ಕುಮಟಾದ ಆಕಾಶ್ ಹರಿಕಂತ್ರ ಸಾಕ್ಷಿಯಾಗಿದ್ದಾರೆ.

ತಂತ್ರಜ್ಞಾನದ ತವರೂರು ಜಪಾನ್ ಸರ್ಕಾರವು ತನ್ನ ಪ್ರತಿಷ್ಠಿತ ''''''''ಸಕುರ ಸ್ಟೂಡೆಂಟ್ ಎಕ್ಸ್ಚೇಂಜ್ ಪ್ರೋಗ್ರಾಂ'''''''' ಅಡಿಯಲ್ಲಿ ಆಕಾಶ್‌ನನ್ನು ಆಹ್ವಾನಿಸುವ ಮೂಲಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶಕ್ತಿಗೆ ಜಾಗತಿಕ ಮುದ್ರೆ ಒತ್ತಿದೆ.

ಕುಮಟಾ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪಿಯು ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಆಕಾಶ್, ಅಪ್ಪಟ ಕನ್ನಡ ಮಾಧ್ಯಮದ ಕುವರ. ತನ್ನ 1ರಿಂದ 7ನೇ ತರಗತಿಯನ್ನು ಕೊಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ 8ರಿಂದ 10ನೇ ತರಗತಿಯನ್ನು ಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ್ದಾರೆ. 8ನೇ ತರಗತಿಯಲ್ಲಿದ್ದಾಗಲೇ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಈತ, ಎಸ್‌ಎಸ್‌ಎಲ್‌ಸಿಯಲ್ಲಿ 621 ಅಂಕ ಗಳಿಸಿ ಜಿಲ್ಲೆಯ ಗಮನ ಸೆಳೆದಿದ್ದ. ಈ ಶೈಕ್ಷಣಿಕ ಸಾಧನೆಯೇ ಆತನಿಗೆ ಜಪಾನ್ ವಿಮಾನ ಏರಲು ರಹದಾರಿಯಾಯಿತು.

ಜಪಾನ್ ಸರ್ಕಾರದ ಸಂಪೂರ್ಣ ಪ್ರಾಯೋಜಕತ್ವದಲ್ಲಿ ಮೇ 23ರಿಂದ 30ರವರೆಗೆ ನಡೆದ ಈ ಶೈಕ್ಷಣಿಕ ಪ್ರವಾಸದಲ್ಲಿ ಆಕಾಶ್ ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ಅನುಭವ ಪಡೆದರು. ಜಪಾನ್‌ನ ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಗಳಾದ ರಿಕೆನ್ ಮತ್ತು ಮಿರಾಕನ್ ಸೇರಿದಂತೆ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡುವ ಅವಕಾಶ ಲಭಿಸಿತು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಭವಿಷ್ಯದ ಅದ್ಭುತ ತಂತ್ರಜ್ಞಾನವಾದ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ಕಣ್ಣಾರೆ ವೀಕ್ಷಿಸಿ ಆಕಾಶ್ ರೋಮಾಂಚನಗೊಂಡಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳ ಪೈಕಿ ಕೇವಲ ನಾಲ್ವರು ಮಾತ್ರ ಈ ಪ್ರತಿಷ್ಠಿತ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಆ ಪೈಕಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಆಕಾಶ್‌ಗೆ ವಿಶೇಷ ವೀಸಾ ವ್ಯವಸ್ಥೆ ಮತ್ತು ಪ್ರವಾಸದ ಸಮಸ್ತ ವೆಚ್ಚವನ್ನು ಜಪಾನ್ ಸರ್ಕಾರವೇ ಭರಿಸಿದೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮತ್ತು ಅಂತಾರಾಷ್ಟ್ರೀಯ ಸಂವಹನ ಉತ್ತೇಜಿಸಲು ಈ ಸಕುರಾ ಸೈನ್ಸ್ ಎಕ್ಸ್ಚೇಂಜ್ ಪ್ರೋಗ್ರಾಂ ಹಮ್ಮಿಕೊಳ್ಳಲಾಗುತ್ತದೆ.

ಆಕಾಶ್ ಅವರ ಈ ಸಾಧನೆ ಕುಮಟಾ ಮಾತ್ರವಲ್ಲದೆ ಇಡೀ ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಜಾಗತಿಕ ದೃಷ್ಟಿಕೋನವನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ನಮ್ಮ ಹಳ್ಳಿ ಹೈದರ ಯೋಚನಾ ಲಹರಿಯನ್ನೇ ಬದಲಿಸುತ್ತವೆ ಎನ್ನುವುದಕ್ಕೆ ಈ ಪ್ರವಾಸವೇ ಸಾಕ್ಷಿ.ಜಪಾನ್ ಜನತೆ ಅತ್ಯಾಧುನಿಕತೆಯ ನಡುವೆಯೂ ತಮ್ಮ ಮೂಲ ಸಂಸ್ಕೃತಿಯನ್ನು ಮರೆತಿಲ್ಲ. ಈ 7 ದಿನಗಳ ಅನುಭವ ನನ್ನ ಯೋಚನಾ ಲಹರಿಯನ್ನೇ ಬದಲಿಸಿದೆ. ಈ ಜ್ಞಾನವನ್ನು ನನ್ನ ಮುಂದಿನ ವಿದ್ಯಾಭ್ಯಾಸ ಹಾಗೂ ದೇಶದ ಪ್ರಗತಿಗೆ ಬಳಸಿಕೊಳ್ಳುತ್ತೇನೆ ಎನ್ನುತ್ತಾರೆ ಪ್ರತಿಭಾನ್ವಿತ ವಿದ್ಯಾರ್ಥಿ ಆಕಾಶ್ ಹರಿಕಂತ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೂ. 25ರಂದು ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಲೋಕಾರ್ಪಣೆ, ಅಚ್ಚುಕಟ್ಟು ವ್ಯವಸ್ಥೆಗೆ ಸೂಚನೆ
ಬಸವ ಕಲ್ಯಾಣದಲ್ಲಿ ಕನ್ಹೇರಿ ಮಠದ ಸ್ವಾಮೀಜಿ ಕಾರ್ಯಕ್ರಮ ಬೇಡ: ಮನವಿ