ಕನ್ನಡಪ್ರಭ ವಾರ್ತೆ ನಾಗಮಂಗಲ
ಮಹಾ ಶಿವರಾತ್ರಿ ಹಬ್ಬದ ಹಿನ್ನಲೆ ಶ್ರೀ ಮಠದ ಶ್ರೀ ಕಾಲಭೈರವೇಶ್ವರಸ್ವಾಮಿ ಹಾಗೂ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಅಖಂಡ ಭಜನೆಗೆ ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡುವರು. ಕ್ಷೇತ್ರದಲ್ಲಿ ರಾತ್ರಿಯಿಡೀ ಅಖಂಡ ಭಜನೆ, ಶಿವನಾಮ ಸ್ಮರಣೆ ನಡೆಯಲಿವೆ.
ಕ್ಷೇತ್ರದ ಧಾರ್ಮಿಕ ಆಚರಣೆಯಲ್ಲಿ ಪ್ರಮುಖವಾದ ಜ್ವಾಲಾಪೀಠಾರೋಹಣವನ್ನು ಶ್ರೀ ನಿರ್ಮಲಾನಂದನಾಥಸ್ವಾಮಿಜಿ ಶುಕ್ರವಾರ ರಾತ್ರಿ ನೆರವೇರಿಸುವರು. ಸರ್ವಾಲಂಕೃತ ಸಿದ್ಧಸಿಂಹಾಸನದ ಮೇಲೆ ಆಸೀನರಾಗಿ ಶ್ರೀಗಳು ಭಕ್ತರಿಗೆ ದರ್ಶನಾಶೀರ್ವಾದ ನೀಡುವರು. ಈ ವೇಳೆ ಷೋಡಶೋಪಚಾರ ಪೂಜಾ ಕೈಂಕರ್ಯಗಳು ನೆರವೇರಲಿವೆ.ಮಹಾಶಿವರಾತ್ರಿ ಜಾಗರಣೆ ಮುಗಿದ ನಂತರ ಶನಿವಾರ ಬೆಳಗಿನ ಜಾವ ಶ್ರೀಮಠದ ಸಂಪ್ರದಾಯದಂತೆ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದಲ್ಲಿ ಶ್ರೀಗಳು ರಾಶಿ ಪೂಜೆ ಮಾಡುವರು ಎಂದು ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.
ಪಟ್ಟಣದ ಪುರಾಣೇತಿಹಾಸ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಸಂಜೆ 25ನೇ ವರ್ಷದ ವೈಭವದ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಸಂಜೆ 7ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿನ 48ಅಡಿ ಎತ್ತರದ ಗರುಡ ಕಂಭಕ್ಕೆ ದೀಪ ಹಚ್ಚುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಆಚರಣಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ಹರಳಕೆರೆ ಗ್ರಾಮದ ಹೊರವಲಯದ ಶ್ರೀ ಸೀತಾಪತಿ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಜಾತ್ರಾ ಮಹೋತ್ಸವ ಮತ್ತು ಧೂಪಸೇವಾ ಕಾರ್ಯ ನಡೆಯಲಿದೆ.