ಹಾವೇರಿ: ವಿವಿಧ ಇಲಾಖೆಗಳ ನೇರ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳು ದುರವಸ್ಥೆಯಿಂದ ಕೂಡಿವೆ. ಸಮರ್ಪಕ ಆಹಾರ ನೀಡುತ್ತಿಲ್ಲ, ಆಹಾರದ ಗುಣಮಟ್ಟ ಕಳಪೆಯಾಗಿದೆ. ಅದೇ ರೀತಿ ವಿದ್ಯಾರ್ಥಿ ವೇತನಗಳು ಬಿಡುಗಡೆ ಆಗುತ್ತಿಲ್ಲ ಎಂದು ದೂರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ನಗರ ಶಾಖೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್‌ಗಳ ವಿವಿಧ ಸಮಸ್ಯೆ ಬಗೆಹರಿಸುವಂತೆ ಹಾಗೂ ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ ಪದಾಧಿಕಾರಿಗಳು ನಗರದ ಹುಕ್ಕೇರಿಮಠದಿಂದ ಜಾಥಾ ಪ್ರಾರಂಭಿಸಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡ್ಡಮನಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ 1,258 ಹಾಸ್ಟೆಲ್‌ಗಳಿದ್ದು, 1,68,833 ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ವಾಸವಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 1972 ವಸತಿ ನಿಲಯಗಳಿದ್ದು, 1,87,200 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಉಳಿಯಲು ಅವಕಾಶ ನೀಡಬಹುದಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಹಿಂದಿನ 3 ವರ್ಷಗಳ ಸರ್ಕಾರದ ವರದಿ ಪ್ರಕಾರ ಅರ್ಜಿ ಸಲ್ಲಿಸಿದ 100 ವಿದ್ಯಾರ್ಥಿಗಳಲ್ಲಿ 40ರಿಂದ 50 ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯಗಳಲ್ಲಿ ಅವಕಾಶ ಸಿಗುತ್ತಿದೆ. ಇನ್ನುಳಿದ ವಿದ್ಯಾರ್ಥಿಗಳು ವಸತಿ ನಿಲಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಹೊಸ ವಸತಿ ನಿಲಯ ಘೋಷಣೆ ಮಾಡಬೇಕೆಂದು ಅಖಿಲ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ನೀಡುತ್ತಿದ್ದ ಕಿಟ್‌ಗಳು ತಲುಪುತ್ತಿಲ್ಲ. 40- 50ವಿದ್ಯಾರ್ಥಿಗಳಿಗೆ ಸೇರಿ 2-3 ಶೌಚಾಲಯಗಳಿವೆ. 100 ವಿದ್ಯಾರ್ಥಿಗಳು ಇರಬೇಕಾದ ವಸತಿ ನಿಲಯಗಳಲ್ಲಿ 140- 150 ವಿದ್ಯಾರ್ಥಿಗಳನ್ನು ಇರಿಸುವಂತಾಗಿದೆ. ಪ್ರತಿ ತಿಂಗಳು ಊಟದ ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಗೆ ₹1,850 ಮಾತ್ರ ನೀಡಲಾಗುತ್ತಿದೆ. ಈ ಹಣದಲ್ಲಿ ಡಯಟ್ ಚಾರ್ಟನಲ್ಲಿ ಇರುವಂತೆ ಸರಿಯಾದ ಆಹಾರ ನೀಡಲು ಆಗುವುದಿಲ್ಲ. ಕಾರಣ ಸರ್ಕಾರ ಈ ಹಣ ಹೆಚ್ಚಳ ಮಾಡಬೇಕು. ಈ ರೀತಿ ಹಲವಾರು ಸಮಸ್ಯೆಗಳು ರಾಜ್ಯದ ವಸತಿ ನಿಲಯಗಳಲ್ಲಿದ್ದು ರಾಜ್ಯ ಸರ್ಕಾರ ತಕ್ಷಣವೇ ಹಾಸ್ಟೆಲ್‌ಗಳ ಮೂಲಭೂತ ಸೌಲಭ್ಯಕ್ಕೆ ವಿಶೇಷ ಅನುದಾನ ಒದಗಿಸಬೇಕೆಂದು ಆಗ್ರಹಿಸಿದರು.ಲಕ್ಷಾಂತರ ಬಡಮಕ್ಕಳು ವಿದ್ಯಾರ್ಥಿ ವೇತನ ನಂಬಿ ಶಿಕ್ಷಣ ಪಡೆಯುತ್ತಿದ್ದಾರೆ. ತಮ್ಮ ಶಿಕ್ಷಣಕ್ಕೆ ಸರ್ಕಾರ ನೀಡುವ ವಿದ್ಯಾರ್ಥಿವೇತನ ಸಹಕಾರಿ ಎಂದು ಅರ್ಜಿ ಸಲ್ಲಿಸಿದ ಲಕ್ಷಾಂತರ ಮಕ್ಕಳಿಗೆ ವಿದ್ಯಾರ್ಥಿವೇತನ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತ, ವಿದ್ಯಾಸಿರಿ ವಿದ್ಯಾರ್ಥಿ ವೇತನ ಜಮೆಯಾಗುತ್ತಿಲ್ಲ. ರೈತ ವಿದ್ಯಾನಿಧಿ ರದ್ಧತಿ ಸೇರಿದಂತೆ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಕೂಡಲೇ ಎಲ್ಲ ವಿದ್ಯಾರ್ಥಿವೇತನ ಪಾವತಿಗೆ ಕ್ರಮ ವಹಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ತಾಲೂಕು ಸಂಚಾಲಕ ನವೀನ ಜಿ.ಕೆ, ಅಪರ್ಣ ಕುಲಕರ್ಣಿ, ಈಶ್ವರಿ ಬಡಿಗೇರ, ಕಾರ್ತಿಕ ಕೆ, ಸಂಜೀವ ಎಚ್, ಲಕ್ಷ್ಮೀ, ದಾನೇಶ್ವರಿ, ರೂಪಾ, ಶಿವು ಎಂ ಸೇರಿದಂತೆ ಹಲವು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.