ಅಕ್ಕನ ಜೀವನ ಪುರುಷರಿಗೂ ಸ್ಫೂರ್ತಿ, ಆದರ್ಶ

KannadaprabhaNewsNetwork | Published : Apr 13, 2025 2:00 AM

ಸಾರಾಂಶ

ಜಗತ್ತಿನ ಪ್ರಥಮ ಸ್ತ್ರೀವಾದಿ ಚಿಂತಕಿ 12ನೇ ಶತಮಾನದ ಶಿವಶರಣೆ ಅಕ್ಕ ಮಹಾದೇವಿ ಆಗಿದ್ದಾರೆ. ಬಸವಣ್ಣನವರು ಸ್ತ್ರೀಯರಿಗೆ ಸರ್ವಸಮಾನತೆ ನೀಡಿ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿದರು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದಿದ್ದಾರೆ.

- ವಿರಕ್ತ ಮಠದ ಡಾ.ಬಸವಪ್ರಭು ಶ್ರೀ ಅಭಿಮತ । ಅಕ್ಕ ಮಹಾದೇವಿ ಜಯಂತ್ಯುತ್ಸವ, ವಚನೋತ್ಸವ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಜಗತ್ತಿನ ಪ್ರಥಮ ಸ್ತ್ರೀವಾದಿ ಚಿಂತಕಿ 12ನೇ ಶತಮಾನದ ಶಿವಶರಣೆ ಅಕ್ಕ ಮಹಾದೇವಿ ಆಗಿದ್ದಾರೆ. ಬಸವಣ್ಣನವರು ಸ್ತ್ರೀಯರಿಗೆ ಸರ್ವಸಮಾನತೆ ನೀಡಿ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿದರು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ಪಿ.ಜೆ. ಬಡಾವಣೆಯಲ್ಲಿರುವ ಅಕ್ಕ ಮಹಾದೇವಿ ರಸ್ತೆಯಲ್ಲಿರುವ ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಅಕ್ಕಮಹಾದೇವಿ ಸಮಾಜದಿಂದ ಆಯೋಜಿಸಿದ್ದ ಶ್ರೀ ಅಕ್ಕ ಮಹಾದೇವಿ ಜಯಂತ್ಯುತ್ಸವ, ವಚನೋತ್ಸವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಕ್ಕ ಮಹಾದೇವಿ ಅನುಭವ ಮಂಟಪದ ಮೊದಲ ವಚನಗಾರ್ತಿಯಾಗಿ, ಕನ್ನಡ ನಾಡಿನ ಮೊದಲ ಕವಿಯತ್ರಿಯಾಗಿ ಸಾಧನೆ ಮಾಡಿ ತೋರಿಸಿದ್ದಾರೆ. ಅಕ್ಕನ ಜೀವನ ಕೇವಲ ಮಹಿಳೆಯರಿಗೆ ಮಾತ್ರವೇ ಅಲ್ಲ, ಪುರುಷರಿಗೂ ಸ್ಫೂರ್ತಿ, ಆದರ್ಶವಾಗಿದೆ. ನಾನು ನೋಡಲು ಹೆಣ್ಣುರೂಪದಲ್ಲಿ ಜಗತ್ತಿಗೆ ಕಂಡರೂ ಭಾವಿಸಲು ಗಂಡುರೂಪವಾಗಿ ಜೀವಿಸುತ್ತೇನೆ ಎಂದು ಅಕ್ಕ ತಮ್ಮ ವಚನದಲ್ಲಿ ಹೇಳಿದ್ದಾರೆ ಎಂದರು.

ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ, ಸಂತಳಾಗಿ ಬೆಳೆದು ಜಗತ್ತಿಗೆ ಅಕ್ಕ ಎಂದು ಪ್ರಸಿದ್ಧರಾಗಿದ್ದಾರೆ. ಮನೆಯಲ್ಲಿ, ಸಮಾಜದಲ್ಲಿ ಜನ ನಮ್ಮನ್ನು ನಿಂದನೆ ಮಾಡಿದರೆ ನಾವು ಹೆದರಬಾರದು ಎಂಬ ಆತ್ಮಸ್ಥೈರ್ಯವನ್ನು ಆಕೆ ತುಂಬಿದ್ದಾರೆ. ಅಕ್ಕ ಮಹಾದೇವಿಯ ವ್ಯಕ್ತಿತ್ವ ಇಡೀ ಮಹಿಳಾ ಕುಲದ ಸ್ವಾತಂತ್ರ‍್ಯ, ಸ್ವಾಭಿಮಾನ, ನಿಷ್ಠುರತೆ, ಸತ್ಯಸಂದತೆ, ಸದಾಚಾರ, ಸದ್ಭಕ್ತಿ ಮುಂತಾದ ಶ್ರೇಷ್ಠ ಮೌಲ್ಯಗಳ ಪ್ರತಿರೂಪವಾಗಿದ್ದಾರೆ ಎಂದು ನುಡಿದರು.

ವಚನಗಳಲ್ಲಿ ಅಕ್ಕ ಜೀವಂತ:

ಆದ್ಯರ 60 ವಚನಕ್ಕೆ ಬಸವಣ್ಣನವರ 20 ವಚನ ಸಮ, ಬಸವಣ್ಣನವರ 20 ವಚನಕ್ಕೆ ಪ್ರಭುದೇವರ 10 ವಚನ ಸಮ, ಪ್ರಭುದೇವರ ವಚನಕ್ಕೆ ಅಜಗಣ್ಣನ 5 ವಚನ ಸಮ, ಅಜಗಣ್ಣನ 5 ವಚನಕ್ಕೆ ಅಕ್ಕನ ಒಂದು ವಚನ ಸಮ ಎಂದು ಚೆನ್ನಬಸವಣ್ಣ ಹೇಳಿದ್ದಾರೆ. ಇದರಿಂದ ಅಕ್ಕನ ವ್ಯಕ್ತಿತ್ವ, ಅಧ್ಯಾತ್ಮ ಸಾಧನೆ ಎಷ್ಟು ದೊಡ್ಡದು ಎಂಬುದು ತಿಳಿಯುತ್ತದೆ. ಅಕ್ಕನ ವಚನ ತತ್ವಗಳನ್ನು ಪಾಲನೆ ಮಾಡಿದರೆ ಶಾಂತಿ, ಸಮಾಧಾನ ಸಿಗುತ್ತದೆ. ಬದುಕಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನೊಂದವರಿಗೆ ಸಾಂತ್ವನ ಸಿಗುತ್ತದೆ. ಅಷ್ಟೇ ಅಲ್ಲದೇ, ಮಾನವ ಜೀವನ ಸಾರ್ಥಕತೆಯಾಗಲು ಅಕ್ಕನ ವಚನ ನಮಗೆ ಬೇಕು. ತನ್ನ ಅರಿವಿನ ಬೆಳಕಿನಿಂದ ಇವತ್ತಿಗೂ ವಚನಗಳಲ್ಲಿ ಅಕ್ಕ ಜೀವಂತವಾಗಿದ್ದಾರೆ ಎಂದರು.

ಅಕ್ಕ ಮಹಾದೇವಿ ಸಮಾಜದ ಅಧ್ಯಕ್ಷೆ ಕಂಚಿಕೆರೆ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಬಿ.ಜಿ.ಸಿದ್ದಲಿಂಗಮ್ಮ, ಸೌಭಾಗ್ಯ ಹಿರೇಮಠ, ದೊಗ್ಗಳ್ಳಿ ಸುವರ್ಣಮ್ಮ, ನೀಲಗುಂದ ಜಯಮ್ಮ, ಬಿ.ಟಿ.ಜಯದೇವಮ್ಮ, ವಿಜಯ ಬಸವರಾಜ, ಸುಧಾ ಅಜ್ಜಂಪುರ, ಮಂಜುಳಾ ಕಾಯಿ, ಪುಷ್ಪಾ ಐನಳ್ಳಿ ಸೇರಿದಂತೆ ಸಮಾಜದ ಹಿರಿಯ, ಕಿರಿಯ ಸದಸ್ಯರು ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಅಕ್ಕಮಹಾದೇವಿ ವಧು- ವರಾನ್ವೇಷಣಾ ಕೇಂದ್ರ ಅಧ್ಯಕ್ಷೆ ಶಾಂತಾ ಯಾವಗಲ್ ಅವರಿಗೆ ಅಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕ್ಕಮಹಾದೇವಿ ಸಮಾಜದ ಸದಸ್ಯರು ಪ್ರಾರ್ಥಿಸಿದರು. ವೇಷಭೂಷಣ ಸ್ಪರ್ಧೆ ವಿಜೇತರಿಗೆ ಶ್ರೀ ಅಕ್ಕಮಹಾದೇವಿ ಶಿಶುಪಾಲನಾ ಕೇಂದ್ರ ಮತ್ತು ಅಕ್ಕ ಮಹಾದೇವಿ ನರ್ಸರಿ ಶಾಲೆ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

- - -

-12ಕೆಡಿವಿಜಿ31.ಜೆಪಿಜಿ:

ದಾವಣಗೆರೆಯಲ್ಲಿ ಶ್ರೀ ಅಕ್ಕ ಮಹಾದೇವಿ ಜಯಂತ್ಯುತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಂತಾ ಯಾವಗಲ್ ಅವರಿಗೆ ಅಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

Share this article