ಪರಂಪರೆಯ ಅನನ್ಯತೆಯೊಂದಿಗೆ ಭವಿಷ್ಯದ ಕಾಳಜಿ ಮುಖ್ಯ: ಕೆ.ರಾಜ್‌ಕುಮಾರ್‌

KannadaprabhaNewsNetwork | Published : Apr 13, 2025 2:00 AM

ಸಾರಾಂಶ

ಕನ್ನಡ ನೆಲದ ಶ್ರೇಷ್ಠತೆಯ ಬಗ್ಗೆ ಎಲ್ಲ ಕನ್ನಡಿಗರೂ ಹೆಮ್ಮೆ ಪಡಬೇಕು. ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಭಿನ್ನ ನೆಲೆಗಳಲ್ಲಿ ಕನ್ನಡ ತನ್ನದೇ ಆದ ಮಹತ್ವ ಹೊಂದಿದೆ ಎಂದು ಕನ್ನಡಪರ ಚಿಂತಕ ಕೆ.ರಾಜ್‌ಕುಮಾರ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕನ್ನಡ ನೆಲದ ಶ್ರೇಷ್ಠತೆಯ ಬಗ್ಗೆ ಎಲ್ಲ ಕನ್ನಡಿಗರೂ ಹೆಮ್ಮೆ ಪಡಬೇಕು. ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಭಿನ್ನ ನೆಲೆಗಳಲ್ಲಿ ಕನ್ನಡ ತನ್ನದೇ ಆದ ಮಹತ್ವ ಹೊಂದಿದೆ ಎಂದು ಕನ್ನಡಪರ ಚಿಂತಕ ಕೆ.ರಾಜ್‌ಕುಮಾರ್‌ ಅಭಿಪ್ರಾಯಪಟ್ಟರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ, ಕನ್ನಡಿಗ, ಕರ್ನಾಟಕ ಕುರಿತ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು, ಕನ್ನಡದ ಅರಿವು ಮತ್ತು ಅಭಿಮಾನ ವಿಚಾರ ಕುರಿತು ಮಾತನಾಡಿದರು.

ಕರ್ನಾಟಕದಲ್ಲಿ ಈವರೆಗೆ ಆಳ್ವಿಕೆ ನಡೆಸಿರುವ ಎಲ್ಲ ಸರ್ಕಾರಗಳು ಕನ್ನಡ ಅಸ್ಮಿತೆಯ ಉಳಿವಿಗಾಗಿ ಮತ್ತು ನಾಡು-ನುಡಿ ಸಂರಕ್ಷಣೆ, ಭಾಷಾ ಅಭಿವೃದ್ಧಿ ವಿಚಾರದಲ್ಲಿ ಇತರ ರಾಜ್ಯಗಳಿಗಿಂತಲೂ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಿವೆ ಎಂಬುದು ಸತ್ಯ. ಕನ್ನಡ ಪರಂಪರೆಯನ್ನು ಅರಿತುಕೊಳ್ಳುವ ಮೂಲಕ ಭವಿಷ್ಯತ್ತಿನ ಬಗ್ಗೆ ಚಿಂತಿಸಬೇಕು. ಇಂದು ಇಡೀ ದೇಶದಲ್ಲಿ ಅತಿಹೆಚ್ಚಿನ ಚಲನಚಿತ್ರಗಳು ನಿರ್ಮಾಣವಾಗುತ್ತಿರುವುದು ಕನ್ನಡದಲ್ಲಿ. ಜಾಗತಿಕವಾಗಿ ಕನ್ನಡ ಅತಿ ಹೆಚ್ಚು ಜನ ಬಳಕೆಯ ಭಾಷೆಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ ಎಂದರು.

ದೊಡ್ಡಬಳ್ಳಾಪುರದ ಡಾ.ಡಿ.ಎಸ್‌.ಶಿವಪ್ಪ ಕಳೆದ 50 ವರ್ಷಗಳಷ್ಟು ಹಿಂದೆಯೇ ಕನ್ನಡ ನುಡಿಯ ನಾಳೆಗಳ ಬಗ್ಗೆ ಚಿಂತಿಸಿ, ವೈದ್ಯಕೀಯ ಪದಕೋಶವನ್ನು ರಚಿಸಿದ್ದರು. ಅದನ್ನು ಒತ್ತಾಸೆಯಾಗಿಟ್ಟುಕೊಂಡು ಹಿಂದಿಯಲ್ಲೂ ವೈದ್ಯಕೀಯ ಪದಕೋಶ ರಚನೆಗೆ ಕೇಂದ್ರ ಸರ್ಕಾರ 6 ಜನರ ತಂಡವನ್ನು ನೇಮಿಸಿತ್ತು. ಆದರೆ ಹಿಂದಿಯಲ್ಲಿ ಪದಕೋಶದ ಅಧಿಕೃತ ಪ್ರಕಟಣೆ ಸಾಧ್ಯವಾಗಲೇ ಇಲ್ಲ. ಕನ್ನಡ ಜಗತ್ತಿನ ಅತಿಶ್ರೇಷ್ಠ ಭಾಷೆಗಳಲ್ಲಿ ಒಂದು. ನುಡಿದಂತೆ ಬರೆಯುವ, ಬರೆದಂತೆ ಮಾತನಾಡುವ ಭಾಷೆ ಇದು ಎಂದರು.

ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಕನ್ನಡ ಚಳವಳಿಗೆ ದೊಡ್ಡ ಪರಂಪರೆ ಇದೆ. ನಾಡು-ನುಡಿಯ ಚಿಂತನೆಗಳು ಹೊಸಪೀಳಿಗೆಗೆ ಒತ್ತಾಸೆ ನೀಡುವ ಶಕ್ತಿ ಹೊಂದಿರಬೇಕು. ಸಾಹಿತ್ಯ ಸಮ್ಮೇಳನಗಳು ಕನ್ನಡದ ಅಸ್ಮಿತೆಯ ರಕ್ಷಣೆಗೆ ಪೂರಕವಾಗಿರಬೇಕು ಎಂದರು.

ದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ, ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಪತ್ರಕರ್ತ ವಿಜಯಕುಮಾರ್‌, ನೆಲಮಂಗಲ ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ಕುಮಾರ್‌, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್, ಕನ್ನಡ ಸಂಘಟನೆಗಳ ಒಕ್ಕೂಟದ ಅಗ್ನಿ ವೆಂಕಟೇಶ್, ಕನ್ನಡ ಹೋರಾಟಗಾರ ಗುರುರಾಜಪ್ಪ, ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜ್, ಕರವೇ ಪ್ರವೀಣ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹಮಾಮ್‌ ವೆಂಕಟೇಶ್, ನೆಲಮಂಗಲ ತಾ.ಕಸಾಪ ಕಾರ್ಯದರ್ಶಿ ಸದಾನಂದ ಆರಾಧ್ಯ, ವೀರಸಾಗರ ಭಾನುಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Share this article