ಅಕ್ಕಮಹಾದೇವಿ ಸಮಾಜವನ್ನು ಬಡಿದೆಬ್ಬಿಸಿದ ದಿಟ್ಟ ಸ್ತ್ರೀ

KannadaprabhaNewsNetwork | Published : Apr 13, 2025 2:00 AM

ಸಾರಾಂಶ

ಚಾಮರಾಜನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರೇ ಅಭಿನಯಿಸಿದ ಅನುಭವ ಮಂಟಪ ನಾಟಕ ಪ್ರದರ್ಶನಗೊಂಡಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಲೌಕಿಕ ಜಗತ್ತನ್ನು ಧಿಕ್ಕರಿಸಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ತಂದುಕೊಡುವಲ್ಲಿ ಶರಣೆ ಅಕ್ಕಮಹಾದೇವಿ ಪಾತ್ರ ಪ್ರಮುಖವಾಗಿದೆ. ಅವಳೊಬ್ಬ ಸಮಾಜವನ್ನು ಬಡಿದೆಬ್ಬಿಸಿದ ದಿಟ್ಟ ಮಹಿಳೆ ಎಂದು ಮಾಜಿ ಶಾಸಕಿ ಹಾಗೂ ಮಾಜಿ ಅ.ಭಾ.ವೀ.ಲಿಂ. ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷೆ ಪರಿಮಳ ನಾಗಪ್ಪ ಹೇಳಿದರು,

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಹಾಗೂ ಜಿಲ್ಲಾ ಮಹಿಳಾ ಘಟಕ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಕ್ಕ ಮಹಾದೇವಿ ಜಯಂತ್ಯುತ್ಸವ ಮತ್ತು ಮಹಿಳೆಯರೇ ಅಭಿನಯಿಸಿದ ಅನುಭವ ಮಂಟಪ ನಾಟಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಕ್ಕಮಹಾದೇವಿ ಜಗತ್ತಿನ ಮೊಟ್ಟ ಮೊದಲ ಮಹಿಳಾ ಕವಯಿತ್ರಿ. ಅಕ್ಕನ ವಚನದಲ್ಲಿ ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಿದ್ದು ಸಾರ್ವಜನರಿಗೂ ಮಾರ್ಗದರ್ಶಿಯಾಗಿವೆ. ಅಕ್ಕ ಮಹಾದೇವಿ ರಚಿಸಿದ ಅನೇಕ ವಚನಗಳಲ್ಲಿ ಲೋಕಾನುಭವ, ಜ್ಞಾನಸಂಪತ್ತು ಹಾಗೂ ಅಭಿವ್ಯಕ್ತಿತ್ವತೆ ಕಂಡು ಬರುತ್ತದೆ. ಸರ್ವ ಸಮಾನತೆ ಹಾಗೂ ವೈಚಾರಿಕ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಅಂದಿನ ಅನುಭವ ಮಂಟಪಕ್ಕೆ ಆಗಮಿಸಿದ ಅಕ್ಕನ ಹಿರಿಮೆ ಮೆಚ್ಚುವಂಥದ್ದು ಎಂದರು.

ಅಕ್ಕ ಉಟ್ಟ ಬಟ್ಟೆ, ಬಂಗಾರದ ಆಭರಣಗಳನ್ನು ತೆರೆದಿಟ್ಟು ವೈರಾಗಿಯಾಗಿ ತೆರಳಿದ ಸ್ಥಳವೇ ಉಡುತಡಿ, ಇಂತಹ ಸ್ಥಳವನ್ನು ಡಾ.ಲೀಲಾದೇವಿ ಪ್ರಸಾದ್ ಅವರು ಆಭಿವೃದ್ಧಿಗೊಳಿಸುತ್ತಿದ್ದಾರೆ, ಇನ್ನು ಐಕ್ಯ ಸ್ಥಳ ಶ್ರೀಶೈಲ್ಯಕ್ಕೆ ಹೋದರೆ ರೋಮಾಂಚನವಾಗುತ್ತಿದೆ, ಅಕ್ಕ ನಮ್ಮಿಂದ ದೂರೆವಾಗಿ ೮೦೦ ವರ್ಷವಾದರೂ ಅವರ ತೋರಿದ ದಿಟ್ಟತನ, ಆದರ್ಶಗಳನ್ನು ಮರೆಯಲಾಗದು ಎಂದರು.ಇವರಿಗೆ ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಅವಕಾಶ ಕಲ್ಪಿಸಲಾಗಿತ್ತು ಮಹಿಳೆಯರು, ಪ್ರಸ್ತುತ ದಿನಗಳಲ್ಲಿ ರಾಜಕೀಯ ಸೇರಿದಂತೆ ಇನ್ನಿತರ ವಿಚಾರಗಳಿಂದ ದೂರವಾಗುತ್ತಿದ್ದಾರೆ. ಅದನ್ನೆಲ್ಲಾ ಬಿಟ್ಟು ನಮ್ಮ ಸಮಾಜ ಮತ್ತೆ ಗಟ್ಟಿಯಾಗಿ ನಿಲ್ಲಬೇಕು. ಮಠ ಮಾನ್ಯಗಳು ನಮ್ಮ ಸಮುದಾಯದ ಮಕ್ಕಳ ಏಳಿಗೆಗಾಗಿ ಉಚಿತ ವಸತಿ ನಿಲಯಗಳನ್ನು ತೆರೆದು ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ ಎಂದರು.ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಮಾಜಿ ಸಚಿವೆ ಹಾಗೂ ಅಭಾವೀಲಿಂ ಮಹಾಸಭಾ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷೆ ಗೀತಾ ಮಹದೇವಪ್ರಸಾದ್, ೧೨ನೇ ಶತಮಾನದಲ್ಲಿ ಅನಕ್ಷರಸ್ಥರ ಸಂಖ್ಯೆ ಅಧಿಕವಾಗಿದ್ದ ಸಂದರ್ಭದಲ್ಲಿ ಸಾಹಿತ್ಯ ಕೃಷಿ ಮಾಡಿದವರಲ್ಲಿ ಅಕ್ಕಮಹಾದೇವಿಯ ಪಾತ್ರ ಪ್ರಮುಖವಾಗಿದೆ. ಬದುಕನ್ನು ಅಥೈಸಿಕೊಳ್ಳುವ ಹಾಗೂ ನಡೆ-ನುಡಿಗಳ ಅನುಭವದ ಮಾತುಗಳನ್ನು ವಚನ ಸಾಹಿತ್ಯದ ರೂಪದಲ್ಲಿ ಇಡೀ ಜಗತ್ತಿಗೆ ಸಾರಿದ್ದಾರೆ ಎಂದರು. ಅಕ್ಕನ ಆದರ್ಶದ ಗುಣಗಳನ್ನು ಮೈಗೂಡಿಸಿಕೊಂಡಾಗ ಪ್ರತಿಯೊಬ್ಬ ಮಹಿಳೆಯರಲ್ಲೂ ಅಕ್ಕನನ್ನು ಕಾಣಬಹುದು, ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತು ಎಂದರು.

ಅಕ್ಕನ ಜೀವನ ಪ್ರಸ್ತುತ ಮಹಿಳೆಯರಿಗೆ ಆದರ್ಶ:

ಮುಖ್ಯ ಭಾಷಣಕಾರರಾಗಿದ್ದ ನಿವೃತ್ತ ಪ್ರಾಂಶುಪಾಲೆ ಡಾ.ಸುನಂದಾ ಭೂಪಾಲಿ ಮಾತನಾಡಿ, ಅಕ್ಕ ಜಗತ್ತಿನ ಮೊದಲ ಮಹಿಳಾ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಿಳೆ, ೧೨ನೇ ಶತಮಾನದ ಶರಣರು ಮಹಿಳೆಯರಿಗೆ ಸಮಾನ ಅವಾಕಾಶ ಕೊಟ್ಟರು ಎಂದರು. ಅಕ್ಕನ ಜೀವನ ಪ್ರಸ್ತುತ ಮಹಿಳೆಯರಿಗೆ ಆದರ್ಶವಾದ್ದರು, ಮಹಿಳೆಯರಿಗೆ ಸ್ವಾತಂತ್ರ್ಯದ ಕಹಳೆ ಊದಿದ ಧೀಮಂತ ಮಹಿಳೆ, ಪ್ರಪ್ರಥಮ ವಚನಾಗಾರ್ತಿ, ೩೫೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಾ.ಶ್ವೇತಾ ಶ್ರೀಧರ್, ಇದು ನಮ್ಮ ಮೊದಲ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ, ಅರೋಗ್ಯ ಶಿಬಿರ ಇತರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ಮಂಜೇಶ್, ಕೇಂದ್ರ ಸಮಿತಿ ಸದಸ್ಯರಾದ ಮಹದೇವಸ್ವಾಮಿ, ರೂಪಾ ಶೇಖರ್, ಸುಜೇಂದ್ರ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ಡ್ರಾಮಾ ಮಾಸ್ಟರ್‌ಗಳಾದ ಸುತ್ತೂರು ಗುರುಶಾಂತಪ್ಪ ಹಾಗೂ ಮಂಗಲ ಶಿವಣ್ಣ ನಿರ್ದೇಶಿಸಿ, ಮಹಿಳೆಯರೇ ಅಭಿನಯಿಸಿದ ಅನುಭವ ಮಂಟಪ ನಾಟಕ ಪ್ರದರ್ಶನಗೊಂಡಿತು.

Share this article