ಅಸ್ತಿತ್ವಕ್ಕಾಗಿ ಬಿಜೆಪಿಯಿಂದ ಜನಾಕ್ರೋಶ ರ್‍ಯಾಲಿ: ಸೌಮ್ಯಾ ರೆಡ್ಡಿ

KannadaprabhaNewsNetwork | Published : Apr 13, 2025 2:00 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆ ಜಾರಿಗೊಳಿಸಿದೆ. ಇದರಿಂದ ಬಿಜೆಪಿ ನಾಯಕರಿಗೆ ಅಸೂಯೆ ಉಂಟಾಗಿದೆ. ಹೀಗಾಗಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸರ್ಕಾರದ ವಿರುದ್ಧ ಜನಾಕ್ರೋಶ ರ್ಯಾಮಲಿ ಮಾಡುತ್ತಿದ್ದಾರೆ ಎಂದು ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.

ಹುಬ್ಬಳ್ಳಿ: ರಾಜ್ಯದ ಮಹಿಳೆಯರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆ ಜಾರಿಗೊಳಿಸಿದೆ. ಇದರಿಂದ ಬಿಜೆಪಿ ನಾಯಕರಿಗೆ ಅಸೂಯೆ ಉಂಟಾಗಿದೆ. ಹೀಗಾಗಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸರ್ಕಾರದ ವಿರುದ್ಧ ಜನಾಕ್ರೋಶ ರ್‍ಯಾಲಿ ಮಾಡುತ್ತಿದ್ದಾರೆ ಎಂದು ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.

ಇಲ್ಲಿಯ ಕಾರವಾರ ರಸ್ತೆಯ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ನಾಯಕರಿಗೆ ತಮ್ಮ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಈಗಾಗಲೇ ಜಾತಿ, ಧರ್ಮದ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಿರುವ ಬಿಜೆಪಿಗರು, ಇದೀಗ ರ್‍ಯಾಲಿ ನಡೆಸುವ ಮೂಲಕ ಇದು ಜನಾಕ್ರೋಶ ಎಂದು ಬಿಂಬಿಸಲು ಹೊರಟಿದೆ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗ್ಯಾಸ್‌ ಸಿಲಿಂಡರ್‌ ದರ ಹೆಚ್ಚಳ ಮಾಡಿದೆಯಲ್ಲದೇ, ಪೆಟ್ರೋಲ್‌, ಡೀಸೆಲ್‌ ದರವನ್ನು ಕೂಡ ಹೆಚ್ಚಿಸುವ ಮೂಲಕ ಜನರ ಮೇಲೆ ಹೊರೆ ಹಾಕಿದೆ. ಇನ್ನೊಂದೆಡೆ ನಮ್ಮಿಂದಲೇ ಪೆಟ್ರೋಲ್‌, ಡೀಸೆಲ್‌ ಖರೀದಿಸುವ ನೆರೆ ರಾಷ್ಟ್ರ ಬೂತಾನ್‌ ₹65 ಡೀಸೆಲ್‌ ಹಾಗೂ ₹70 ಪೆಟ್ರೋಲ್‌ ಮಾರುತ್ತಿದೆ. ಆದರೆ, ನಮ್ಮ ದೇಶದಲ್ಲಿ ಸರ್ಕಾರ ಕಡಿಮೆ ದರದಲ್ಲಿ ಕಚ್ಚಾ ತೈಲ ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ಜನರ ಮೇಲೆ ಹಾಗೂ ಮಹಿಳೆಯ ಮೇಲೆ ಕಾಳಜಿ ಇಲ್ಲ. ಈ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್‌ ವತಿಯಿಂದ ಇಡೀ ದೇಶಾದ್ಯಂತ ಮಹಿಳಾಕ್ರೋಶ ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹಿಳೆಯರಿಗೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ರಾಜ್ಯ ಬಿಜೆಪಿಗರಿಗೆ ಜನಪರ ಕಾಳಜಿ ಇದ್ದರೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದರು.

ಕರ್ನಾಟಕ ದೇಶದ ಜಿಡಿಪಿ ಹಾಗೂ ತೆರಿಗೆಯನ್ನು ಕಟ್ಟುವಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ, ನಮಗೆ ನೂರು ರುಪಾಯಿಯಲ್ಲಿ ಕೇವಲ 13 ಪೈಸೆ ಮಾತ್ರ ಮರಳಿ ಬರುತ್ತಿದೆ. ಹೀಗಾಗಿ, ನಾವು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಜನರ ಮೇಲೆ ತೆರಿಗೆ ಹಾಕಿ, ಶ್ರೀಮಂತ ಉದ್ದಿಮೆದಾರರನ್ನು ಮತ್ತಷ್ಟು ಶ್ರೀಮಂತ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ಎಲ್ಲರಿಗೂ ಸಮಾನ ಅವಕಾಶ

ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿ ಎಲ್ಲ ಜಾತಿ ವರ್ಗದವರಿಗೂ ಸಮಾನ ಅವಕಾಶ ನೀಡಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಜಾತಿ ಗಣತಿ ವರದಿಯಲ್ಲಿ ಯಾವುದೇ ಸೋರಿಕೆಯಾಗಿಲ್ಲ. ಎಷ್ಟೋ ದಿನಗಳ ಹಿಂದೆಯೇ ಜಾತಿ ಗಣತಿ ವರದಿ ಜಾರಿಗೆ ಬರಬೇಕಿತ್ತು. ಇದೀಗ ವರದಿ ಬಿಡುಗಡೆಗೆ ಕಾಲ ಕೂಡಿ ಬಂದಿದ್ದು, ನಾವು ಸ್ವಾಗತಿಸುತ್ತೇವೆ ಎಂದು ಸೌಮ್ಯಾ ರೆಡ್ಡಿ ಹೇಳಿದರು.

ಸಿಲಿಂಡರ್‌ ದರ ಹೆಚ್ಚಳ: ರಸ್ತೆಯಲ್ಲಿ ಚಪಾತಿ ಮಾಡಿ ಪ್ರತಿಭಟನೆ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಬೆಲೆ ಏರಿಕೆ ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ರಸ್ತೆಯ ಮಧ್ಯೆ ಕಟ್ಟಿಗೆ ಒಲೆ ಹೂಡಿ ಚಪಾತಿ ಮಾಡುವ ಮೂಲಕ ಶನಿವಾರ ಪ್ರತಿಭಟನೆ ನಡೆಸಿದರು.ಇಲ್ಲಿಯ ಕಾರವಾರ ರಸ್ತೆಯ ಮಧ್ಯೆದಲ್ಲಿ ಒಲೆ ಹೂಡಿದ ಕಾಂಗ್ರೆಸ್‌ ಕಾರ್ಯಕರ್ತೆಯರು, ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಕಟ್ಟಿಗೆ ಒಲೆಯ ಮೇಲೆ ಚಪಾತಿ ಬೇಯಿಸುವ ಮೂಲಕ ಬೆಲೆ ಏರಿಕೆ ಖಂಡಿಸಿದರು.ಇದೇ ವೇಳೆ ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲಿಸಿದರು. ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ದೀಪಾ ಗೌರಿ, ಮಾಜಿ ಶಾಸಕಿ ಕುಸುಮಾ ಶಿವಳ್ಳಿ, ಚೇತನಾ ಲಿಂಗದಾಳ, ಬಾಳಮ್ಮ ಜಂಗೀನವರ, ಕಲಾವತಿ ಲದ್ವಾಡ, ಗೀತಾ ಪಾಟೀಲ, ಬಸಂತಿ ಹಪ್ಪಳದ, ನಾಗರತ್ನಾ ಶೀಗಿಹಳ್ಳಿ, ಗಂಗಮ್ಮ ಬಾಗೇವಾಡಿ, ಆಯೇಶಾ ಬೇಗಂ ಸೇರಿದಂತೆ ಇತರರು ಇದ್ದರು.

Share this article