ಕನ್ನಡಪ್ರಭ ವಾರ್ತೆ ಹೊಸಪೇಟೆ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಂಜುಮನ್ ಕಮಿಟಿ ನೇತೃತ್ವದಲ್ಲಿ ನಗರದಲ್ಲಿ ಮುಸ್ಲಿಂ ಸಮಾಜದಿಂದ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರದ ಈದ್ಗಾ ಮೈದಾನದಿಂದ ಆರಂಭಗೊಂಡ ಮೆರವಣಿಗೆ ತಹಸೀಲ್ದಾರ ಕಚೇರಿ ಎದುರು ಬೃಹತ್ ಪ್ರತಿಭಟನೆಯಾಗಿ ಮಾರ್ಪಟ್ಟಿತು.
ಅಂಜುಮನ್ ಕಮಿಟಿ ಜಿಲ್ಲಾಧ್ಯಕ್ಷ ಎಚ್‌ಎನ್‌ಎಫ್ ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಕಾಯ್ದೆ ಅಲ್ಪಸಂಖ್ಯಾತರನ್ನು ಅವಮಾನಿಸುವುದಾಗಿದೆ. ಈ ಕಾಯ್ದೆ ಸಂವಿಧಾನದ ಮೇಲಿನ ದಾಳಿಯೂ ಆಗಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡುವ ಹುನ್ನಾರ ಈ ಕಾಯ್ದೆ ಹಿಂದೆ ಅಡಗಿದೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಯಾಗದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.ಬಿಜೆಪಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳ್ತಾರೆ. ಆದರೆ, ಒಂದು ಸಮುದಾಯ ಗುರಿಯಾಗಿಸಿ ತಾರತಮ್ಯ ಮಾಡಲಾಗುತ್ತಿದೆ. ಸಂವಿಧಾನದ ಮೂಲ ಆಶಯದ ವಿರುದ್ಧ ಆಗಿರುವ ಕಾಯ್ದೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದರು.
ಮುಖಂಡ ಎಚ್.ಜಿ. ಗುರುದತ್ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆ ಕಾಯ್ದೆಯಿಂದ ಮುಸ್ಲಿಂ ಸಮಾಜಕ್ಕೆ ತೊಂದರೆ ಆಗಲಿದೆ. ತಮ್ಮ ಹೋರಾಟಕ್ಕೆ ನಾವು ಸದಾ ಬೆಂಬಲ ನೀಡುತ್ತೇವೆ. ಕಾಂಗ್ರೆಸ್ ಯಾವತ್ತೂ ನಿಮ್ಮ ಜೊತೆಗೆ ಇರಲಿದೆ ಎಂದರು.ವಕೀಲ ಎ. ಕರುಣಾನಿಧಿ ಮಾತನಾಡಿ, ಈಗಾಗಲೇ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ದೇಶದ ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಂ ಸಮಾಜಕ್ಕೆ ವಿರೋಧ ಆಗಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಾಪಾಸ್ ಪಡೆಯಬೇಕು. ಈ ಕಾಯ್ದೆ ಸಂವಿಧಾನದ ಮೂಲ ಆಶಯಕ್ಕೆ ಹೊಡೆತ ನೀಡಲಿದೆ ಎಂದರು.
ವಕೀಲ ಮೋಸಿನ್ ಕೋತ್ವಾಲ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಸಮಾಜದವರು ಹೋರಾಟ ಮಾಡಿದ್ದಾರೆ. ಎದೆಗೆ ಗುಂಡು ಹೊಡೆಸಿಕೊಂಡಿದ್ದಾರೆ. ತ್ಯಾಗ, ಬಲಿದಾನ ನೀಡಿರುವ ಈ ಸಮಾಜವನ್ನು ದೇಶದಿಂದ ಪ್ರತ್ಯೇಕಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ತಹಸೀಲ್ದಾರ ಕಚೇರಿ ಅಧಿಕಾರಿಗಳ ಮೂಲಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ರವಾನಿಸಲಾಯಿತು.
ಮುಖಂಡರಾದ ಮೈನುದ್ದೀನ್ ದರ್ವೇಶ್, ಕೆ.ಬಡಾವಲಿ ಫಿರೋಜ್ ಖಾನ್, ಸದ್ದಾಂ ಹುಸೇನ್, ಖಾದರ್, ಖಾಜಾ ಮಹಮ್ಮದ್ ನಿಯಾಜಿ, ಸಂವಿಧಾನ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಮಚಂದ್ರಪ್ಪ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್. ಭಾಸ್ಕರ್ ರೆಡ್ಡಿ, ಸಿಐಟಿಯುನ ಮುಖಂಡರಾದ ಬಿಸಾಟಿ ತಾಯಪ್ಪ ನಾಯಕ, ಎನ್. ಯಲ್ಲಾಲಿಂಗ, ದಲಿತ ಹಕ್ಕುಗಳ ಸಂಘಟನೆ ಸಂಚಾಲಕ ಮರಡಿ ಜಂಬಯ್ಯ ನಾಯಕ, ಎಸ್ಡಿಪಿಐ ಪಕ್ಷದ ಅಧ್ಯಕ್ಷ ನೂರ್ ಅಹಮದ್, ಕಾರ್ಯದರ್ಶಿ ಸದ್ದಾಂ, ಕಾರ್ಯಕರ್ತರಾದ ಮೋಹಿನುದ್ದೀನ್, ಸಲೀಂ ಬಾಷಾ ಮತ್ತಿತರರಿದ್ದರು.