ಇದೇ ವರದಿ ಮುಂದುವರೆದರೆ ಸಂಘರ್ಷಕ್ಕೆ ಕಾರಣ: ರಂಭಾಪುರಿ ಶ್ರೀಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ರಾಜ್ಯದಲ್ಲಿ ಜಾತಿ ಜನ ಗಣತಿ ವರದಿಯನ್ನು ಎಲ್ಲೋ ಕುಳಿತು ತಯಾರು ಮಾಡಿದಂತಿದ್ದು, ಜಾತಿ ಗಣತಿ ವರದಿಯನ್ನು ಮತ್ತೊಮ್ಮೆ ನಡೆಸುವುದು ಒಳ್ಳೆಯದು. ಮತ್ತೊಮ್ಮೆ ಮನೆ ಮನೆಗೆ ತೆರಳಿ ಜಾತಿ ಜನಗಣತಿ ಮಾಡಬೇಕು ಎಂದು ಬಾಳೆ ಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದ್ದಾರೆ.ಇದೇ ಜಾತಿ ಜನಗಣತಿ ವರದಿ ಮುಂದುವರಿಸಿದರೆ ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತದೆ. ವೀರಶೈವ ಲಿಂಗಾಯ ತರು, ಒಕ್ಕಲಿಗರು ಈಗಾಗಲೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಜಾತಿ ಗಣತಿ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬ ಕೊರಗು ಇದೆ. ಹೀಗಾಗಿ ಮತ್ತೆ ಜಾತಿ ಸಮೀಕ್ಷೆ ನಡೆಸೋದು ಒಳ್ಳೆಯದು ಎಂದು ರಂಭಾಪುರಿ ಪೀಠದಲ್ಲಿ ಶನಿವಾರ ಸುದ್ದಿಗಾರರಿಗೆ ಹೇಳಿದರು.ಕಳೆದ 10 ವರ್ಷಗಳಿಂದ ಜಾತಿ ಜನಗಣತಿ ವಿಚಾರವಾಗಿ ಬೇಕಾದಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಈಗಾಗಲೇ ವರದಿ ಸರ್ಕಾರದ ಕೈ ಸೇರಿದೆ. ವಿಧಾನಮಂಡಲದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಮೇಲ್ನೋಟಕ್ಕೆ ಹೇಳಿದ್ದಾರೆ. ಆದರೆ ಈ ಹಿಂದೆ ಏನು ಜಾತಿ ಜನಗಣತಿ ಆಗಿದೆ ಅದು ಸರಿಯಾದಂತಹ ರೀತಿಯಲ್ಲಿ ಕ್ರಮಬದ್ಧವಾಗಿ ಆಗಿಲ್ಲ ಎನ್ನುವಂತಹದ್ದು ಹಲವಾರು ಸಮುದಾಯಗಳ ಜನರ ಕೊರಗೂ ಕೂಡ ಇದೆ. ಈಗಾಗಲೇ ಈ ಹಿಂದೆ ಜಾತಿ ಜನಗಣತಿ ವಿಚಾರ ಬಂದಾಗ ವೀರಶೈವ ಲಿಂಗಾಯತ, ಒಕ್ಕಲಿಗ ಸಮಾಜವಾಗಲಿ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈಗಲೂ ಕೂಡ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತನ್ನ ವಿರೋಧ ವ್ಯಕ್ತಪಡಿಸಿದೆ. ಒಕ್ಕಲಿಗರ ಸಂಘ ಈ ಜಾತಿ ಜನಗಣತಿ ಸಕ್ರಮವಾಗಿ ಆಗಿಲ್ಲ. ಅಧಿಕಾರಿಗಳು ಎಲ್ಲೋ ಕುಳಿತು ತಯಾರು ಮಾಡಿದಂತಹ ಪೂರ್ವ ನಿಯೋಜಿತ ವರದಿ ಎನ್ನುವಂತಹ ಭಾವನೆ ಎಲ್ಲರಲ್ಲಿ ಬೆಳೆದು ಬಂದಿದೆ. ಅದಕ್ಕಾಗಿ ಖುದ್ದಾಗಿ ಸಮೀಕ್ಷೆ ಪುನರ್ ನಡೆಸುವುದು ಒಳ್ಳೆಯದು.ಇದನ್ನೇ ಸರ್ಕಾರ ಮುಂದುವರಿಸಿದರೆ ಇದರಿಂದ ನಾಡಿನಲ್ಲಿ ಜಾತಿ ಜಾತಿಗಳ ಸಂಘರ್ಷ ಇನ್ನಷ್ಟು ಹೆಚ್ಚಾಗಿ ಅನಾಹುತಕ್ಕೆ ಕಾರಣವಾಗಬಹುದು. ಯಾವುದೋ ಒಂದು ಜಾತಿ ಜನಾಂಗದವರನ್ನು ತುಷ್ಟೀಕರಣ ಮಾಡಿ ಬಹುಸಂಖ್ಯಾತ ಸಮುದಾಯ ಗಳ ಭಾವನೆಯನ್ನು ನಿರ್ಲಕ್ಷ್ಯ ಮಾಡುವಂತಹದ್ದು ಒಳ್ಳೆಯದಲ್ಲ. ಈ ಬಗ್ಗೆ ಹಲವು ಸಲ ಯೋಚನೆ ಮಾಡುವ ಅಗತ್ಯವಿದೆ. ಮತ್ತೊಮ್ಮೆ ಜಾತಿ ಜನಗಣತಿಯನ್ನು ಸಕ್ರಮವಾಗಿ ಮಾಡಬೇಕು ಎನ್ನುವಂತಹುದ್ದೆ ರಾಜ್ಯ ಸರ್ಕಾರಕ್ಕೆ ನಾವು ಕೊಡುವ ಸ್ಪಷ್ಟ ಸಂದೇಶ ಎಂದು ಹೇಳಿದರು. ಕೆಲವೊಂದು ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಂವಿಧಾನದಲ್ಲಿ ಏನು ಮೀಸಲಾತಿ ನಿಗದಿಪಡಿಸಿದ್ದಾರೆ ಅದನ್ನು ಮೀರಿ ಮೀಸಲಾತಿ ಕೊಡುವುದರಿಂದ ಉಳಿದ ಸಮುದಾಯಗಳಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ. ಇದೂ ಕೂಡ ಜಾತಿಯ ಸಂಘರ್ಷಕ್ಕೆ ಕಾರಣವಾಗಬಹುದು. ಮೀಸಲಾತಿ ಹೆಚ್ಚಿಸುವ ಪ್ರಮಾಣದಲ್ಲಿ ಬಹಳ ಪಾರದರ್ಶಕವಾಗಿ ಎಲ್ಲಾ ಸಮುದಾಯಗಳ ಹಿತ ಗಮನದಲ್ಲಿಟ್ಟುಕೊಂಡು ಮಾಡಬೇಕಾದದ್ದು ಅವಶ್ಯಕವಾಗಿದೆ ಎಂದು ಹೇಳಿದರು.೧೨ಬಿಹೆಚ್‌ಆರ್ ೨: ರಂಭಾಪುರಿ ಶ್ರೀ