ಕನ್ನಡಪ್ರಭ ವಾರ್ತೆ ಮೈಸೂರು
ಅಕ್ರಮ ಹಣ ವರ್ಗಾವಣೆಯು ಭ್ರಷ್ಟಾಚಾರಕ್ಕೆ ಕಾರಣವಲ್ಲದೆ, ಹೊಸ ಸವಾಲಾಗಿ ಪರಿಣಮಿಸಿದೆ ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಹೇಳಿದರು.ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ನೀತಿ ವೇದಿಕೆಯು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ಡೆ-2002 ಕುರಿತು ಉಪನ್ಯಾಸ ನೀಡಿದರು.
ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ, ಆರೋಪಿಗಳಿಗೆ ಶಿಕ್ಷೆ ನೀಡುವ ಜೊತೆಗೆ ವ್ಯವಸ್ಥೆಯನ್ನು ಸರಿದಾರಿಯಲ್ಲಿ ಮುನ್ನಡೆಸಲು ಪಿಎಂಎಲ್‌ಎ ಕಾಯ್ದೆ ಜಾರಿಗೆ ಬಂತು. 2002ರಲ್ಲಿ ಮಸೂದೆಯಾಗಿ ಮಂಡನೆಗೊಂಡು, 2005ರಿಂದ ದೇಶದಲ್ಲಿ ಜಾರಿಯಲ್ಲಿದೆ. ಈ ಕಾಯ್ದೆಯಲ್ಲಿ ಒಟ್ಟು 75 ಸೆಕ್ಷನ್ ಗಳು ಇವೆ. ಸೀಮಿತ ಷೆಡ್ಯುಲ್ ಅಪರಾಧಗಳ ಕುರಿತು ತನಿಖೆ ನಡೆಸುವ ಅಧಿಕಾರವನ್ನು ಹೊಂದಿದೆ ಎಂದು ಅವರು ವಿವರಿಸಿದರು.ಭ್ರಷ್ಟರು-ಶ್ರೀಮಂತರು ತಮ್ಮಲ್ಲಿನ ಕಾಳಧನವನ್ನು ವಾಮಮಾರ್ಗದ ಮೂಲಕ ಮತ್ತೊಬ್ಬರಿಗೆ ವರ್ಗಾಯಿಸುವ ಪ್ರಕ್ರಿಯೆಯು ಆಗಾಗ್ಗೆ ವರದಿ ಆಗುತ್ತಿದೆ. ಇದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿರುವುದಲ್ಲದೇ ಸಮಾಜದ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ದೊಡ್ಡ -ದೊಡ್ಡ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತೀಚೆಗೆ ಜಾರಿ ನಿರ್ದೇಶನಾಲಯಕ್ಕೆ ಹೆಚ್ಚು ಹೆದರುತ್ತಿದ್ದು, ದೇಶದಲ್ಲಿ ಆರ್ಥಿಕ ಅಪರಾಧಗಳ ನಿಯಂತ್ರಣಕ್ಕೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ಡೆ-2002 ಸಹಕಾರಿ ಆಗಿದೆ ಎಂದರು.
ಪೊಲೀಸ್ ಎಫ್.ಐ.ಆರ್.ಗಳಲ್ಲಿ ಆರೋಪಿಗಳ ಉಲ್ಲೇಖ ಇರದಿದ್ದರೂ ಪಿಎಂಎಲ್ಎ ಅಡಿ ವಶಕ್ಕೆ ಪಡೆದು ತನಿಖೆಗೆ ಒಳಪಡಿಸುವ ಅಧಿಕಾರ ಜಾರಿ ನಿರ್ದೇಶನಾಲಯ (ಇಡಿ)ಗೆ ಇದೆ. ಆದರೆ ಕಾಯ್ದೆಯಲ್ಲಿ ಪ್ರಸ್ತಾಪಿಸಿರುವ ಅಪರಾಧ ಚಟುವಟಿಕೆಗಳು ನಡೆದಿದ್ದರಷ್ಟೇ ತನಿಖೆಗೆ ಅವಕಾಶವಿದೆ. ಸೆಕ್ಷನ್ 19ರ ಪ್ರಕಾರ ಆರೋಪಿಯನ್ನು ಬಂಧನಕ್ಕೆ ಒಳಪಡಿಸಿದ ನಂತರ ಅವರಿಗೆ ಅವರನ್ನು ಯಾವ ಕಾರಣಕೋಸ್ಕರ ಬಂಧಿಸಲಾಗಿದೆ ಹಾಗೂ ಅವರ ಮೇಲಿನ ಆರೋಪಗಳ ಬಗ್ಗೆ ಲಿಖಿತ ಮಾಹಿತಿ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ನ್ಯಾಯಾಲಯವು ಜಾಮೀನು ನೀಡಬಹುದು ಎಂದು ಪಂಕಜ್ ಬನ್ಸಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ ಎಂದರು.ಅರವಿಂದ್ ಕೇಜ್ರಿವಾಲ್, ಸತ್ಯಜಿತ್ ಅವರಂತಹ ಸಾಕಷ್ಟು ರಾಜಕೀಯ ನಾಯಕರು ಇಡಿಯಿಂದ ಬಂಧನಕ್ಕೆ ಒಳಗಾಗಿ ಸೆರೆವಾಸ ಅನುಭವಿಸಿದ್ದಾರೆ. ಪಿಎಂಎಲ್ಎ ಅಡಿ ಒಮ್ಮೆ ಪ್ರಕರಣ ದಾಖಲಾದರೆ, ಆರೋಪಿಯ ಸಾಚಾತನದ ಕುರಿತು ನ್ಯಾಯಾಧೀಶರಿಗೆ ಮನವರಿಕೆ ಆಗದ ಹೊರತು ಸುಲಭಕ್ಕೆ ಸೆಕ್ಷನ್ 45 ಅಡಿ ಜಾಮೀನು ದೊರೆಯುವುದಿಲ್ಲ. ಪಿಎಂಎಲ್ಎ ಸೆಕ್ಷನ್ 50 ಅಡಿ ಇ.ಡಿ. ಅಧಿಕಾರಿಗಳು ಯಾರಿಗಾದರೂ ಸಮನ್ಸ್ ನೀಡಿ ವಿಚಾರಣೆಗೆ ಒಳಪಡಿಸಬಹುದು. ಇಲ್ಲಿ ಎಫ್‌ಐಆರ್ ಬದಲಿಗೆ ಇಸಿಐಅರ್ ಅನ್ನು ದಾಖಲಿಸಲಾಗುತ್ತದೆ. ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಸುಲಭಕ್ಕೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ ಎಂದರು.
ಕಾನೂನು ವಿದ್ಯಾರ್ಥಿಗಳು ಕೋರ್ಟ್ ನೀಡುವ ತೀರ್ಪನ್ನು ಪ್ರತಿನಿತ್ಯ ಗಮನಿಸಬೇಕು. ಯಾವ ಪ್ರಕರಣದಲ್ಲಿ ಯಾವ ರೀತಿ ತೀರ್ಪು ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಅಲ್ಲದೇ ತೀರ್ಪುಗಳನ್ನು ವಿಮರ್ಶೆಗೆ ಒಳಪಡಿಸುವ ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಕಾನೂನು ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂದರು.ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್, ಪ್ರಾಂಶುಪಾಲೆ ಎನ್. ವಾಣಿಶ್ರೀ ಇದ್ದರು.