ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ

| Published : Sep 18 2025, 02:00 AM IST

ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಆಯೋಜಿಸಲಾಗಿದ್ದ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಸಾಧಕರನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭವಿಷ್ಯದ ದೃಷ್ಟಿಯಿಂದ ನಗರ ಯೋಜನೆ ಅತ್ಯುತ್ತಮವಾಗಿರಲು ನಗರ ಯೋಜನೆ ಮತ್ತು ವಾಸ್ತುಶಿಲ್ಪದ ಶಿಕ್ಷಣ ನೀಡುವ ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್ ಸ್ಕೂಲ್‌ ಆರಂಭಿಸಲು ಪ್ರಯತ್ನ ನಡೆಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಎಂಜಿನಿಯರ್‌ಗಳ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್‌.ಎಂ.ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನ ಮತ್ತು 58ನೇ ಎಂಜಿನಿಯರಿಂಗ್‌ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿಡಿಎ ಮತ್ತು ಬಿಬಿಎಂಪಿಗಳಲ್ಲಿ ಸಿವಿಲ್‌ ಎಂಜಿನಿಯರ್‌, ನಗರ ಯೋಜನೆ ಎಂಜಿನಿಯರ್‌ಗಳೇ ಇಲ್ಲ. ಜಲಾನಯನ, ಇಂಧನ, ಮೆಕಾನಿಕಲ್‌ ಎಂಜಿನಿಯರ್‌ಗಳು ಸೇರಿದಂತೆ ಇತರರು ಬೇರೆ ಇಲಾಖೆಗಳಿಂದ ಎರವಲು ಸೇವೆಯಲ್ಲಿ ಬರಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ಇರುವಂತೆ ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್ ಸ್ಕೂಲ್‌ ಆರಂಭಿಸಲು ಯತ್ನಿಸಲಾಗುತ್ತಿದೆ ಎಂದರು.

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ 70 ಲಕ್ಷ ಜನಸಂಖ್ಯೆ ಇತ್ತು. ಈಗ 1.40 ಕೋಟಿ ಜನಸಂಖ್ಯೆಯಾಗಿದ್ದು, ಹೊರಗಿನಿಂದ ಬಂದು ಹೋಗುವವರು ಸೇರಿ 2.20 ಕೋಟಿ ಜನರಿದ್ದಾರೆ. ಅವರೆಲ್ಲರನ್ನೂ ಬೆಂಗಳೂರು ತಡೆದುಕೊಳ್ಳಬೇಕಾದರೆ ಮೂಲಭೂತ ಸೌಕರ್ಯ ಒದಗಿಸಲು ಎಂಜಿನಿಯರ್‌ಗಳೇ ಬೇಕು. ಹೊಸ ರಸ್ತೆ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಈಗ ಯಾವುದೇ ರಸ್ತೆ ಮಾಡಬೇಕಾದರೆ, ಕಟ್ಟಡದ ಮೌಲ್ಯ ಲೆಕ್ಕ ಮಾಡಿ ಒಂದು ಚದರ ಅಡಿಗೆ 50 ಸಾವಿರ ಕೊಡಬೇಕಾಗುತ್ತದೆ. ಇದು ಸಾಧ್ಯವಾಗದ ಕಾರಣ ಸುರಂಗ ಮಾರ್ಗ, ಡಬಲ್‌ ಡೆಕ್ಕರ್‌ ಇತ್ಯಾದಿ ಯೋಜನೆ ಮಾಡುತ್ತಿದ್ದೇವೆ ಎಂದರು.

ಪ್ರತಿಪಕ್ಷದವರು ಏನೇ ವಿರೋಧ ಮಾಡಲಿ, ದುಡ್ಡು ಹೊಡೆಯೋಕೆ ಮಾಡುತ್ತಿದ್ದಾರೆ ಎಂದರೂ ಪರವಾಗಿಲ್ಲ. ಅವರ ಕೈಯಲ್ಲಂತೂ ಅಭಿವೃದ್ಧಿ ಮಾಡಲು ಆಗಲಿಲ್ಲ. ನಮ್ಮ ಅವಧಿಯಲ್ಲಿ ಬೆಂಗಳೂರಿಗೆ ನನ್ನ ಕೊಡುಗೆಯನ್ನು ಕೊಡಬೇಕು ಎಂದು ನಿರ್ಧರಿಸಿದ್ದೇನೆ. ಸುರಂಗ ಮಾರ್ಗ ನಿರ್ಮಾಣಕ್ಕೆ ಕೈ ಹಾಕಿದ್ದೇನೆ. ಟೆಂಡರ್ ಕರೆದಿದ್ದೇನೆ. ಇದಕ್ಕೆ ದುಡ್ಡು ಒದಗಿಸುವುದು ಕಡಿಮೆ ಸಾಧನೆಯಲ್ಲ. 2008ರಲ್ಲಿ ಪೆರಿಫೆರಲ್‌ ರಸ್ತೆಗೆ ಯೋಚನೆ ಮಾಡಲಾಗಿತ್ತು. ಈಗ ಅದನ್ನು ಡಿನೋಟಿಫೈ ಕೂಡ ಮಾಡಲು ಆಗುತ್ತಿಲ್ಲ. ಬೆಂಗಳೂರು ಬಿಜಿನೆಸ್‌ ಕಾರಿಡಾರ್‌ ಎಂದು 100 ಕಿ.ಮೀ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದ್ದು ಹುಡ್ಕೋ ಕಂಪನಿ 26 ಸಾವಿರ ಕೋಟಿ ಸಾಲ ಕೊಟ್ಟಿದ್ದಾರೆ. ಕೆಲಸವೂ ಆರಂಭವಾಗಿದೆ ಎಂದು ಹೇಳಿದರು.

ಬಿಬಿಎಂಪಿಯನ್ನು ವಿಭಜಿಸಿ ಐದು ನಗರಪಾಲಿಕೆಗಳನ್ನು ಮಾಡಿದ್ದು, ಹೊಸ ಬಿಲ್ಡಿಂಗ್‌ಗಳನ್ನು ಮಾಡಲು ನಿರ್ಧರಿಸಿದ್ಧೇವೆ. ಎಂಜಿನಿಯರ್‌ಗಳು ತಮ್ಮಲ್ಲಿ ಕಟ್ಟಡದ ಪ್ಲಾನಿಂಗ್‌ ಇದ್ದರೆ ಪ್ರಸ್ತಾವನೆ ಸಲ್ಲಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್‌ ಅರ್ಷದ್‌, ಎಫ್‌ಐಇ ಛೇರ್‌ಮನ್‌ ಎಂ.ನಾಗರಾಜ್‌, ಕಾರ್ಯದರ್ಶಿ ಎಂ.ಲಕ್ಷ್ಮಣ್‌, ಭಾರತೀಯ ಎಂಜಿನಿಯರ್ಸ್ ಸಂಸ್ಥೆ ಅಧ್ಯಕ್ಷ ವಿ.ಬಿ.ಸಿಂಗ್‌ ಇದ್ದರು.