ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ: ಸಚಿವ ಶಿವರಾಜ ತಂಗಡಗಿ

KannadaprabhaNewsNetwork | Published : Apr 13, 2025 2:00 AM

ಸಾರಾಂಶ

ಕದಂಬರ ನೆಲವಾದ ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ ಮಾಡಲಾಗುವುದು.

ಶಿರಸಿ: ಕದಂಬರ ನೆಲವಾದ ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ ಮಾಡಲಾಗುವುದು. ಪಂಪವನ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ₹೫೦ ಲಕ್ಷ ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ಬನವಾಸಿ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ ಎಂದು ಕನ್ನಡ ಸಂಸ್ಕೃತಿ ಹಾಗೂ ಹಿಂದುಳಿದ ವರ್ಗದ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬನವಾಸಿ ಅಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತಾಶ್ರಯಲ್ಲಿ ಶನಿವಾರ ಹಮ್ಮಿಕೊಂಡ ಕದಂಬೋತ್ಸವ ೨೦೨೫ ಹಾಗೂ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪಂಪ ಭವನ ನಿರ್ಮಾಣ ಮಾಡಿ ಅಲ್ಲಿ ಪಂಪನ ಕುರಿತು ಮಾಹಿತಿ ನೀಡುವ ಕೆಲಸ ಮಾಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ಸ್ಥಳ ಗುರುತಿಸಿ, ಪ್ರಸ್ತಾವನೆ ಸಲ್ಲಿಸಲಿ ಎಂದರು.

ಬನವಾಸಿಯ ಪಂಪವನ ಪಾಳು ಬಿದ್ದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಮುಂದಿನ ಕದಂಬೋತ್ಸವ ಒಳಗಾಗಿ ಪಂಪವನವನ್ನು ಅರ್ಥಪೂರ್ಣವಾಗಿ ಅಭಿವೃದ್ಧಿ ಮಾಡುತ್ತೇವೆ. ಇಲ್ಲಿ ಅಭಿವೃದ್ಧಿ ಮಾಡಲು ಸರ್ಕಾರ ಬದ್ಧವಿದೆ. ಬನವಾಸಿಯಲ್ಲಿ ಕದಂಬೋತ್ಸವ ಮಾಡುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾದ ಕೆಲಸವಾಗಿದೆ. ಕದಂಬರ ನಾಡು ಕನ್ನಡ ನಾಡು ಕನ್ನಡ ಪ್ರೇಮವನ್ನು ಉಳಿಸಿ ಬೆಳೆಸುವ ಕಾರ್ಯ ಸರ್ಕಾರದಿಂದ ಆಗುತ್ತಿದೆ ಎಂದರು.

ಪ್ರತಿ ವರ್ಷ ಕದಂಬೋತ್ಸವ:

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯು ಕಲೆ, ಸಾಂಸ್ಕೃತಿಕ ಹಾಗೂ ಕ್ರೀಡೆಯ ತವರೂರು. ಕದಂಬರ ಇತಿಹಾಸ ಶಾಶ್ವತವಾಗಿ ಉಳಿಯಲು ಹಾಗೂ ಮುಂದಿನ ಪೀಳಿಗೆಗೆ ಕದಂಬರ ಆಳ್ವಿಕೆಯ ತಿಳಿಯಬೇಕಾದರೆ ಕದಂಬೋತ್ಸವ ಪ್ರತಿ ವರ್ಷ ನಡೆಯಬೇಕು. ಮುಂದಿನ ವರ್ಷದಿಂದ ವಿಜೃಂಭಣೆಯಿಂದ ಕದಂಬೋತ್ಸವ ಆಚರಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಪಂಪ ಪ್ರಶಸ್ತಿಯು ಕ್ರಿಯಾಶೀಲ ವ್ಯಕ್ತಿಗೆ ದೊರೆತಿದೆ. ಬನವಾಸಿಯಲ್ಲಿ ವಿದ್ಯಾರ್ಥಿನಿಯರ ವಸತಿಗೃಹ ಅವಶ್ಯವಿದ್ದು, ಅದನ್ನು ಹಿಂದುಳಿದ ವರ್ಗಗಳ ಸಚಿವರು ಕದಂಬೋತ್ಸವ ವೇದಿಕೆಯಲ್ಲಿ ಮಂಜೂರು ಮಾಡಬೇಕು ಎಂದರು.

ಕದಂಬೋತ್ಸವ ಎನ್ನುವುದು ಕೇವಲ ಸರ್ಕಾರವಾಗಬಾರದು. ಸಾರ್ವಜನಿಕರ ಉತ್ಸವವಾಗಿ ವಿಜೃಂಭಣೆಯಿಂದ ನಡೆಯಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದರು.ಸ್ಥಳಿಯರಿಗೂ ಪಂಪ ಪ್ರಶಸ್ತಿ:

ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಅಧಿಕಾರ ಎನ್ನುವುದು ಕ್ಷಣಿಕವಾಗಿದ್ದು, ಅಧಿಕಾರಕ್ಕೆ ಅಂಟಿಕೊಂಡಿರಬಾರದು. ಯಾವುದೇ ಸರ್ಕಾರವಿದ್ದರೂ ಕದಂಬೋತ್ಸವ ನಿರಂತರವಾಗಿ ನಡೆಯಬೇಕು. ಹೃದಯದಲ್ಲಿ ಸಂಗೀತ, ಸಾಹಿತ್ಯ, ಕ್ರೀಡೆ ಕಲೆಗೆ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಜೀವನವೇ ವ್ಯರ್ಥ ಎಂದ ಅವರು, ಬನವಾಸಿ ಕದಂಬೋತ್ಸವ ಮೊದಲು ಸಾರ್ವಜನಿಕರಿಂದ ಪ್ರಾರಂಭವಾಗಿದೆ. ಈ ಭಾಗದ ಹಲವು ಮಹನೀಯರಿಗೆ ಆದಿ ಕವಿ ಪಂಪ ಪ್ರಶಸ್ತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕದಂಬೋತ್ಸವ ನಿರಂತರವಾಗಿ ನಡೆದು ಜನರ ಉತ್ಸವವಾಗಿ ಬೆಳೆಯಬೇಕು. ಕರ್ನಾಟಕ ಸರ್ಕಾರದಿಂದ ಕಲೆ, ಸಾಂಸ್ಕೃತಿಕ ಉತ್ಸವಕ್ಕೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಬೆಲೆ ಏರಿಕೆಯಲ್ಲಿ ಜನರು ತತ್ತರಿಸಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರ ಸಹಾಯಕ್ಕೆ ಧಾವಿಸಿದೆ ಎಂದರು.

ಎಂಸಿಎ ಅಧ್ಯಕ್ಷ ಹಾಗೂ ಕಾರವಾರ ಕ್ಷೇತ್ರ ಶಾಸಕ ಸತೀಶ ಸೈಲ್, ವಿಪ ಸದಸ್ಯ ಶಾಂತಾರಾಮ ಸಿದ್ದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಕೆ.ಎಂ., ಎಸ್ಪಿ ಎಂ. ನಾರಾಯಣ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಶಿರಸಿ ಎಸಿ ಕೆ.ವಿ. ಕಾವ್ಯಾರಾಣಿ, ಎಡಿಸಿ ಸಾಜಿದ್ ಮುಲ್ಲಾ, ಡಿಎಫ್ ಒ ಡಾ. ಅಜ್ಜಯ್ಯ, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ ಖಾನ್, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಮತ್ತಿತರರು ಇದ್ದರು. ಜಿಲ್ಲಾಧಿಕಾರಿ ಡಾ. ಲಕ್ಷ್ಮೀಪ್ರಿಯಾ ಸ್ವಾಗತಿಸಿದರು.

ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ದಿವ್ಯಾ ಆಲೂರ ಕಾರ್ಯಕ್ರಮ ನಿರೂಪಿಸಿದರು.

ಕದಂಬೋತ್ಸವಕ್ಕೆ ಅನುದಾನ ನೀಡಿದಂತೆ ಕರಾವಳಿ ಉತ್ಸವ ವಿಜೃಂಭಣೆಯಿಂದ ಆಚರಿಸಲು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯಿಂದ ₹೫ ಕೋಟಿ ಅನುದಾನ ನೀಡುತ್ತೇವೆ ಎನ್ನುತ್ತಾರೆ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ.

Share this article