ಕನ್ನಡಪ್ರಭ ವಾರ್ತೆ ಮೈಸೂರು
ಬಾಳೆ ಮತ್ತು ಚೇಳು ಹೇಗೆ ತಮ್ಮ ಮುಂದಿನ ಪೀಳಿಗೆಗಾಗಿ ತಮ್ಮ ಜೀವವನ್ನು ತ್ಯಾಗ ಮಾಡುತ್ತವೆಯೋ, ಅಂತೆಯೇ ನಮ್ಮ ಬದುಕು ನಮ್ಮ ಕಾಲಕ್ಕೆ ಮುಗಿಸದೇ ಮುಂದಿನ ಪೀಳಿಗೆಗೂ ಉಪಯೋಗವಾಗುವಂತೆ ಇರಬೇಕು ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಎನ್.ಕೆ. ಲೋಲಾಕ್ಷಿ ಹೇಳಿದರು.ರಾಮಾನುಜ ರಸ್ತೆಯ ಮೈಸೂರು ಆರ್ಟ್ ಗ್ಯಾಲರಿ ಹಾಗೂ ಕನ್ನಡ ಸಾಹಿತ್ಯ ಕಲಾಕೂಟದ ವತಿಯಿಂದ ಆಯೋಜಿಸಿದ್ದ ಕಲಾವಿದ ಎಲ್. ಶಿವಲಿಂಗಪ್ಪ ಅವರು ರಚಿಸಿದ ಕದಳಿ ವನದಲ್ಲಿ ಅಕ್ಕಮಹಾದೇವಿ ಕಲಾಕೃತಿ ಲೋಕಾರ್ಪಣೆ ಮತ್ತು ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಒಂದು ಸೃಷ್ಟಿ ಶಕ್ತಿ. ಭೂಮಿಗೆ ಹೇಗೆ ಉತ್ಪಾದಿಸುವ ಶಕ್ತಿ ಇದೇಯೋ, ಹಾಗೇಯೇ ಹೆಣ್ಣಿಗೂ ಉತ್ಪಾದಿಸುವ ಶಕ್ತಿ ಇದೆ. ಈ ಕದಳಿ ವನದಲ್ಲಿ ನಿಂತು ಅಕ್ಕಮಹಾದೇವಿ ಯಾಕೆ ಮಾತನಾಡುತ್ತಿದ್ದಾಳೆ ಎಂದರೆ ಜಗತ್ತಿನ ಚಿಂತೆ ಇರುವುದಕ್ಕೆ ಅವರು ಕದಳಿ ವನದಲ್ಲಿ ಕಾಲ ಕಳೆಯುತ್ತಿದ್ದರು. ಅಕ್ಕ ಮಹಾದೇವಿಯವರು ನೈಸರ್ಗಿಕವಾಗಿ ಬದುಕುತ್ತಿ ದ್ದವರು. ಬುದ್ದ, ಗೊಮ್ಮಟೇಶ್ವರ ಹಾಗೆಯೇ ಎಲ್ಲವನ್ನೂ ತೆರೆದ ಮನಸ್ಸಿನಿಂದ ನೋಡುತ್ತಿದ್ದರು. ಕಲಾಕೃತಿ ಲೋಕಾರ್ಪಣೆಗೊಳಿಸಿದ ಮಾತೆ ಬಸವಾಂಜಲಿದೇವಿ ಮಾತನಾಡಿ, ಕೌಶಿಕ ಮಹಾರಾಜರು ಅರಮನೆಯನ್ನು ತ್ಯಜಿಸಿ ಲೋಕ ಕಲ್ಯಾಣಕ್ಕಾಗಿ ತಮ್ಮ ವಚನಗಳ ಮೂಲಕ ಸಂದೇಶ ಸಾರಿದ್ದಾಗಿ ಹೇಳಿದರು.ಈ ಕಲಾಕೃತಿಯನ್ನು ಪರಿಸರದ ಮಧ್ಯೆ ಹೇಗೆ ಅಕ್ಕಮಹಾದೇವಿ ಅವರು ತಮ್ಮ ಇಷ್ಟದೈವ ಚನ್ನಮಲ್ಲಿಕಾರ್ಜುನನ ಹುಡುಕುತ್ತಿದ್ದಾರೆ ಎಂದು ಅವರು ಬಣ್ಣಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಮೈಸೂರು ಆರ್ಟ್ ಗ್ಯಾಲರಿ ಅಧ್ಯಕ್ಷ ಎಲ್. ಶಿವಲಿಂಗಪ್ಪ, ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ ಮೊದಲಾದವರು ಇದ್ದರು.