ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಕ್ಕೆ ಅಕ್ಕಿ ಕೊಟ್ರಪ್ಪ ಕೊಡುಗೆ ಅಪಾರ: ವಿರಕ್ತಮಠದ ಪ್ರಭುಸ್ವಾಮೀಜಿ

KannadaprabhaNewsNetwork | Published : Aug 1, 2024 12:15 AM

ಸಾರಾಂಶ

ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅಕ್ಕಿ ಕೊಟ್ರಪ್ಪ, ಗ್ರಾಮದಲ್ಲಿ ಡಿಗ್ರಿ ಕಾಲೇಜು ಆರಂಭಿಸಬೇಕು.

ಹಗರಿಬೊಮ್ಮನಹಳ್ಳಿ: ಗಾಂಧೀಜಿಯವರ ತತ್ವಾದರ್ಶ, ಬಸವಣ್ಣನರಂತೆ ಕಾಯಕವನ್ನು ಕೊನೆಯವರೆಗೂ ಪ್ರೀತಿಸಿದವರು ಅಕ್ಕಿ ಕೊಟ್ರಪ್ಪನವರು ಎಂದು ಸಂಡೂರಿನ ವಿರಕ್ತಮಠದ ಪ್ರಭುಸ್ವಾಮೀಜಿ ಹೇಳಿದರು.

ತಾಲೂಕಿನ ತಂಬ್ರಹಳ್ಳಿ ಗ್ರಾಮದ ದಾನಿ ಅಕ್ಕಿ ಕೊಟ್ರಪ್ಪ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅಕ್ಕಿ ಕೊಟ್ರಪ್ಪ, ಗ್ರಾಮದಲ್ಲಿ ಡಿಗ್ರಿ ಕಾಲೇಜು ಆರಂಭಿಸಬೇಕು ಎಂಬ ಮಹದಾಸೆ ಹೊಂದಿದ್ದರು. ಕಡಿಮೆ ಮಾತನಾಡುತ್ತಿದ್ದ ಇವರು, ಕೆಲಸ ಮಾಡುವುದರಲ್ಲಿ ನಿಪುಣರು. ಇವರ ಅಗಲಿಕೆಯಿಂದ ಅಖಂಡ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ. ದುಡಿದ ಹಣವನ್ನು ದಾನದ ರೂಪದಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯ ಕ್ಷೇತ್ರಕ್ಕೆ ವಿನಿಯೋಗ ಮಾಡಿದ್ದಾರೆ. ಇವರ ಮಕ್ಕಳಾದ ಅಕ್ಕಿ ತೋಟೇಶ್ ರಾಜಕೀಯ ಕ್ಷೇತ್ರದಲ್ಲಿ ಅನುಭವ ಉಳ್ಳವರು. ಮಗಳು ಡಾ.ಸುಜಾತ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮೂಲಕ ಗುರುತಿಸಿಕೊಂಡಿದ್ದಾರೆ. ತಂಬ್ರಹಳ್ಳಿಯಲ್ಲಿ ಡಿಗ್ರಿ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಅವರ ತಂದೆಯ ಹಾದಿಯಲ್ಲಿ ಇವರು ಪ್ರಯತ್ನ ಮಾಡಿದಾಗ ಕೊಟ್ರಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ. ಅವರ ಆಸೆ ಈಡೇರಿದಂತಾಗುತ್ತದೆ. ಕೊಟ್ರಪ್ಪ ಗದುಗಿನ ತೋಂಟದಾರ್ಯ ಮಠದ ಹೆಸರಿನಲ್ಲಿ ₹೭೫ಲಕ್ಷರೂ ನಿಶ್ಚಿತ ಠೇವಣಿ ಇರಿಸಿರುವ ಮೊತ್ತ ಈಗ ₹೧ ಕೋಟಿ ದಾಟಿದೆ. ಈ ಮೊತ್ತದಲ್ಲಿ ಗದುಗಿನ ಮಠದಲ್ಲಿ ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳು ನೆರವೇರುವುದು ಕೊಟ್ರಪ್ಪ ಅವರ ಬಹುದೊಡ್ಡ ಮೈಲುಗಲ್ಲಾಗಿದೆ ಎಂದರು.

ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಚಾರ್ಯ ಮಾತನಾಡಿ, ಉಸಿರು ಹೋದರೂ ಸಮಾಜದಲ್ಲಿ ಹೆಸರು ಉಳಿಯುವಂತೆ ಕೆಲಸ ಮಾಡಿದವರು ಅಕ್ಕಿ ಕೊಟ್ರಪ್ಪ ಎಂದರು.

ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಅಕ್ಕಿ ಕೊಟ್ರಪ್ಪ ನಮ್ಮ ಭಾಗದ ಗಾಂಧೀಜಿ. ಧಾರ್ಮಿಕ ಕಾರ್ಯಗಳಿಗೆ ಸಾರ್ವಜನಿಕರು ನೀಡಿದ ಹಣವನ್ನು ಅತ್ಯಂತ ಪ್ರಾಮಾಣಿಕತೆಯಿಂದ ವಿನಿಯೋಗ ಮಾಡಿ ಲೆಕ್ಕದ ಪುಸ್ತಕಗಳನ್ನು ಮನೆಮನೆಗೆ ಹಂಚಿ ಆದರ್ಶ ಮೆರೆದಿದ್ದಾರೆ. ಗ್ರಾಮದ ಬಂಡೆ ರಂಗನಾಥೇಶ್ವರ ಸ್ವಾಮಿ ರಥ ನಿರ್ಮಾಣ ಹಾಗೂ ಗ್ರಾಮದೇವತೆಯ ಜಾತ್ರೆಯನ್ನು ಇವರ ನೇತೃತ್ವದಲ್ಲಿ ಸಮರ್ಪಕವಾಗಿ ಮಾಡಲಾಗಿತ್ತು ಎಂದು ತಿಳಿಸಿದರು.

ಗದಗ ಡಂಬಳ ಸಂಸ್ಥಾನ ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಅಕ್ಕಿ ಕೊಟ್ರಪ್ಪ ಅವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದರು. ಮಲ್ಲನಕೇರಿ ಚನ್ನಬಸವ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಬೊಪ್ಪಕಾನ್ ಕುಮಾರಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಬಿ. ನಾಗನಗೌಡ್ರು, ಸಾಹಿತಿ ಮೇಟಿ ಕೊಟ್ರಪ್ಪ ಮಾತನಾಡಿದರು. ಕೊಟ್ರಪ್ಪ ಅವರ ಪತ್ನಿ ಅಕ್ಕಿ ಕೊಟ್ರಮ್ಮ, ಪಂಚಮಸಾಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಅಕ್ಕಿ ಶಿವಕುಮಾರ್, ಅಕ್ಕಿ ಬಸವರಾಜ್, ಬದಾಮಿ ಕರಿಬಸವರಾಜ, ರೆಡ್ಡಿ ಮಂಜುನಾಥ ಪಾಟೀಲ್, ಗೌರಜ್ಜನವರ ಗಿರೀಶ್, ಹುಡೇದ ಗುರುಬಸವರಾಜ, ಭದ್ರವಾಡಿ ಚಂದ್ರಶೇಖರ, ಸೊನ್ನದ ಗುರುಬಸವರಾಜ ಇದ್ದರು.

ಕಾರ್ಯಕ್ರಮವನ್ನು ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ್ ನಿರ್ವಹಿಸಿದರು.

Share this article