ವಿಧಾನ ಪರಿಷತ್ : ರಾಜ್ಯದಲ್ಲಿ ಸಂಯುಕ್ತ ಪದವಿ ಕಾಲೇಜುಗಳಿಂದ ಬೇರ್ಪಟ್ಟ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಪರಿಶೀಲಿಸಲಾಗುವುದು, ಕಾರ್ಯಭಾರ ಆಧರಿಸಿ ಶಿಕ್ಷಕರ ನೇಮಕ ಮಾಡಲಾಗುವುದು, ಜೊತೆಗೆ ವಿಷಯವಾರು ಹೊಸದಾಗಿ ಸೃಷ್ಟಿಸಬೇಕಾದ ಹುದ್ದೆಗಳ ಪ್ರಸ್ತಾವನೆ ಪರಿಶೀಲಿಸಲಾಗುತ್ತಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬಿಜೆಪಿಯ ಎಸ್.ವಿ. ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಖಾಸಗಿ ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ ಬೇರ್ಪಟ್ಟ ಒಟ್ಟು 156 ಪದವಿ ಪೂರ್ವ ಕಾಲೇಜುಗಳಿದ್ದು, 277 ಹುದ್ದೆಗಳು ಖಾಲಿ ಇವೆ. ಒಟ್ಟು 156 ಕಾಲೇಜುಗಳ ಪೈಕಿ 106 ಕಾಲೇಜುಗಳಲ್ಲಿ ಹುದ್ದೆ ಭರ್ತಿಗೆ ಪ್ರಸ್ತಾವನೆ ಇದೆ. ಉಳಿದ 50 ಕಾಲೇಜುಗಳಲ್ಲಿ ಐದು ಕಾಲೇಜುಗಳು ಅನುದಾನರಹಿತವಾಗಿ ಪರಿವರ್ತನೆಗೊಂಡಿದೆ. ಒಂದು ಕಾಲೇಜಿನ ಆಡಳಿತ ಮಂಡಳಿ ವೇತಾನುಧನ ನಿರಾಕರಿಸಿದೆ. ಉಳಿದ ಕಾಲೇಜುಗಳ ಆಡಳಿತ ಮಂಡಳಿಗಳು ಹುದ್ದೆ ಸೃಜನೆಗೆ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ವಿವರಿಸಿದರು.
ಸಂಯುಕ್ತ ಪದವಿ ಕಾಲೇಜುಗಳನ್ನು ಬೇರ್ಪಡಿಸಿದ ಬಳಿಕ ಅಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕಾರ್ಯಭಾರ ಆಧರಿಸಿ ನೇಮಕಾತಿ ಮಾಡಬೇಕಾಗುತ್ತದೆ. ಅಲ್ಲದೇ ಇಂಥ ಕಾಲೇಜುಗಳಲ್ಲಿ ವಿಷಯವಾರು ಸೃಷ್ಟಿಸಬೇಕಾದ ಹುದ್ದೆಗಳ ಕುರಿತು ಪ್ರಸ್ತಾವನೆ ಸರ್ಕಾರ ಪರಿಶೀಲಿಸಿ ನಿರ್ಧರಿಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿ
ಈಗಾಗಲೇ ನಿರ್ಧರಿಸಿದಂತೆ 15 ಸಾವಿರ ಶಿಕ್ಷಕರ ನೇಮಕಾತಿ ವೇಳೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಆದ್ಯತೆ ನೀಡಲಾಗುವುದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬಿಜೆಪಿಯ ಚಿದಾನಂದ ಎಂ.ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಪ್ರಾಥಮಿಕ ಶಾಲೆಗಳಲ್ಲಿ 3361, ಪ್ರೌಢಶಾಲೆಗಳಲ್ಲಿ 1861 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇದೆ. ದೈಹಿಕ ಶಿಕ್ಷಣ ಶಿಕ್ಷಕರು ಸೇರಿ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. ಅದೇ ರೀತಿ ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಖಾಲಿ ಹುದ್ದೆಗಳು ಸೇರಿ 5267 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ವಿವರಿಸಿದರು.
ದೈಹಿಕ ಶಿಕ್ಷಣದ ಪಿರಿಯಡ್‌ನಲ್ಲಿ ಮೌಲ್ಯ ಶಿಕ್ಷಣ ಬೋಧಿಸುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೌಲ್ಯ ಶಿಕ್ಷಣವನ್ನು ಪ್ರತ್ಯೇಕ ಪಿರಿಯಡ್‌ನಲ್ಲಿ ಬೋಧಿಸಲಾಗುವುದು ಎಂದರು.
ಮಾತೃತ್ವ, ಶಿಶುಪಾಲನಾ ರಜೆ 15 ದಿನಗಳಲ್ಲಿ ಮಂಜೂರಾತಿ:
ಇನ್ನು ಮುಂದೆ ಮಹಿಳಾ ಶಿಕ್ಷಕರ ಮಾತೃತ್ವ ರಜಾ ಮನವಿ, ಮಾತೃತ್ವ ರಜೆಯೊಂದಿಗೆ ಶಿಶುಪಾಲನಾ ರಜೆ ಸಂಯೋಜಿಸಿ ಉಪಯೋಗಿಸಿಕೊಳ್ಳಲು ಇಚ್ಛಿಸಿದಲ್ಲಿ ಅಥವಾ ಶಿಶುಪಾಲನಾ ರಜೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಸಕ್ಷಮ ಪ್ರಾಧಿಕಾರ 15 ದಿನದೊಳಗೆ ರಜೆ ಮಂಜೂರು ಮಾಡಲು ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬಿಜೆಪಿಯ ವೈ.ಎಂ.ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಾತೃತ್ವ ರಜೆ ನಂತರ ಮರಳಿ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ಶಿಕ್ಷಕರಿಗೆ ಮಗುವಿನ ವಯಸ್ಸು ಐದು ವರ್ಷ ಪೂರ್ಣಗೊಳ್ಳುವವರೆಗೆ ಅದರ ಆರೈಕೆಗೆ ಅನುಕೂಲವಾಗುವ ರೀತಿಯಲ್ಲಿ ಅವರು ಇಚ್ಛಿಸುವ ಸ್ಥಳಕ್ಕೆ ಕೌನ್ಸೆಲಿಂಗ್ ಸಮಯದಲ್ಲಿ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಮಾತೃತ್ವ ರಜೆ ಹಾಗೂ ಶಿಶುಪಾಲನಾ ರಜೆ ಮೇಲೆ ತೆರಳುವ ಮಹಿಳಾ ಶಿಕ್ಷಕರ ರಜೆ ಅವಧಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ವರ್ಗಾವಣೆಯನ್ನು ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
