ಕನ್ನಡಪ್ರಭವಾರ್ತೆ ಶಿವಮೊಗ್ಗ
ಅಕ್ಷಯ ತೃತೀಯ ದಿನವಾದ ಶುಕ್ರವಾರ ನಗರದ ಬಹುತೇಕ ಎಲ್ಲ ಚಿನ್ನಾಭರಣ ಮಳಿಗೆಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಸಂಪತ್ತು ಅಕ್ಷಯವಾಗುವುದು ಎಂಬ ನಂಬಿಕೆ ಸಮಾಜದಲ್ಲಿದೆ. ಹೀಗಾಗಿ ಬೆಳಗ್ಗೆ ಒಂಭತ್ತು ಗಂಟೆಯಿಂದಲೇ ಖರೀದಿಗೆ ಜನ ಧಾವಿಸಿದ್ದರು. ವಾರದಿಂದ ಚಿನ್ನಾಭರಣ ಕಾದಿರಿಸಿ ಅಕ್ಷಯ ತೃತೀಯ ಶುಭದಿನದಂದು ಚಿನ್ನ ಖರೀದಿಸಿದವರ ಸಂಖ್ಯೆ ಹೆಚ್ಚಿತ್ತು. ಬಹುತೇಕ ಆಭರಣದಂಗಡಿಗಳು ಬೆಳಗ್ಗೆ 8 ರಿಂದಲೇ ತೆರೆದಿದ್ದವು.ಕೆಲವು ಆಭರಣ ಮಳಿಗೆಗಳಲ್ಲಿ ಆಕ್ಷಯ ತೃತೀಯಗೆಂದು ವಿಶೇಷ ಕೊಡುಗೆಗಳನ್ನು ನೀಡಲಾಗಿತ್ತು. ಗ್ರಾಹಕರನ್ನು ಆಕರ್ಷಿಸಲು ಚಿನ್ನ, ಹರಳು, ವಜ್ರಾಭರಣಗಳ ಮೇಲೆ ಒಂದಷ್ಟು ರಿಯಾಯಿತಿ, ಮೇಕಿಂಗ್ ಶುಲ್ಕ ಕಡಿತ ಇತ್ಯಾದಿ ಕೊಡುಗೆ ನೀಡಲಾಗಿತ್ತು. ಈ ಬಾರಿಯ ಅಕ್ಷಯ ತೃತೀಯದಂದು ನಿರೀಕ್ಷೆಯಂತೆ ಉತ್ತಮ ಖರೀದಿ ನಡೆಯಿತು. ಕಳೆದ ಒಂದು ವಾರದಿಂದ ಬುಕ್ಕಿಂಗ್ ಕೂಡ ಉತ್ತಮವಾಗಿತ್ತು. ಚಿನ್ನದ ಬೆಲೆ ದುಬಾರಿಯಾಗಿದ್ದರು ಗ್ರಾಹಕರಿಂದ ಖರೀದಿ ಉತ್ಸಾಹಕ್ಕೆ ಕೊರತೆಯಾಗಿರಲಿಲ್ಲ. ಚಿನ್ನದ ಬೆಲೆ ಹೆಚ್ಚಿದ್ದರೂ ಖರೀದಿಸುವವರ ಸಂಖ್ಯೆಗೇನೂ ಕಡಿಮೆ ಇರಲಿಲ್ಲ.
ನಗರದ ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಬಾಲರಾಜ್ ಅರಸ್ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಚಿನ್ನದ ಅಂಗಡಿಗಳಲ್ಲೂ ಗ್ರಾಹಕರುಗಳಿಂದ ತುಂಬಿ ತುಳುಕುತ್ತಿತ್ತು. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆದಿದೆ.ಶ್ರೀರಾಮ, ಮುಖ್ಯಪ್ರಾಣ ದೇವರ ರಥೋತ್ಸವಶಿವಮೊಗ್ಗ: ಅಕ್ಷಯ ತೃತೀಯ ಪ್ರಯುಕ್ತ ನಗರದ ಕೆ.ಆರ್.ಪುರಂ ರಸ್ತೆಯಲ್ಲಿರುವ ಶ್ರೀಮನ್ ಮಧ್ವ ಸೇವಾ ಸಂಘದ ವತಿಯಿಂದ ಶ್ರೀ ರಾಮದೇವರ ಮತ್ತು ಮುಖ್ಯಪ್ರಾಣ ದೇವರ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ರಾಯಚೂರು ಕೃಷ್ಣಾಚಾರ್ಯ, ವಾಸುದೇವಚಾರ್ಯ, ಕಲ್ಲಾಪುರ ಜಯತೀರ್ಥ, ವಸಂತ ರಾವ್, ಕುಷ್ಟಗಿ ಅನಂತಾಚಾರ್ ಮತ್ತು ಪಂಡಿತ ರಘೋತ್ತಮಾಚಾರ್ಯ, ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀಮನ್ ಮಧ್ವ ಸೇವಾ ಸಂಘದ ವತಿಯಿಂದ ಶ್ರೀ ಸಂಜೀವ ಆಂಜನೇಯ ದೇವಾಲಯದಲ್ಲಿ ನಡೆಯುತ್ತಿರುವ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಿರುವ ಸುಮಾರು 35ಕ್ಕೂ ಹೆಚ್ಚು ಮಕ್ಕಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.