ಪುತ್ತೂರು: ಯಾರನ್ನೇ ಆಗಲಿ ಅಳುವಂತೆ ಮಾಡುವುದು ಸುಲಭ. ಆದರೆ ನಗಿಸುವುದು ಕಷ್ಟ. ನನ್ನಿಂದ ಅದು ಸಾಧ್ಯ ಆಯಿತು. ಅದು ಪುಣ್ಯ ಕೂಡ. ಆದರೆ ನಾನು ಮಾತ್ರ ಅಲ್ಲ ನೀವು ಎಲ್ಲರೂ ನಗಿಸಲು ಸಾಧ್ಯವಿದೆ. ನಗುವ ಮನಸ್ಸು ಇರಬೇಕಷ್ಟೆ. ಇಂದು ಒತ್ತಡದ ಬದುಕಿಗೆ ನಗುವನ್ನೇ ಔಷದವನ್ನಾಗಿ ಮಾಡಿಕೊಳ್ಳಬೇಕು ಎಂದು ತುಳು ಚಿತ್ರನಟ, ತುಳುನಾಡಿನ ಮಾಣಿಕ್ಯ ಅರವಿಂದ ಬೋಳಾರ್ ಹೇಳಿದರು.
ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಂಸ್ಥೆಯ ಪಾತ್ರ ಶ್ಲಾಘನೀಯ-ಸತ್ಯಗಣಪತಿ ಭಟ್:ಮುಖ್ಯ ಅತಿಥಿ, ಮೈಸೂರು ಸಾಹಿ ಎಕ್ಸ್ ಪೋರ್ಟ್ ಎಚ್.ಆರ್, ಜಿ.ಎಂ ಸತ್ಯಗಣಪತಿ ಭಟ್ ಎ ಮಾತನಾಡಿ, ಕಾಲೇಜಿನಲ್ಲಿ ವೈವಿಧ್ಯಮಯವಾದ ಚಟುವಟಿಕೆಗಳು ನಡೆಯಬೇಕು. ಇದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕ. ಈ ಕೆಲಸವನ್ನು ಅಕ್ಷಯ ಶಿಕ್ಷಣ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿ ತಮ್ಮ ಸಂಸ್ಥೆಯಾದ ಸಾಹಿ ಎಕ್ಸ್ಪೋರ್ಟ್ ಪ್ರೈ.ಲಿ. ಬಗ್ಗೆ ಪರಿಚಯವನ್ನು ಮಾಡಿ ೧೫೦ ವರ್ಷಗಳ ಹಿಂದೆ ಪ್ರಾರಂಭವಾಗಿ ೧೨ ಸಾವಿರಕ್ಕೂ ಹೆಚ್ಚು ಉದ್ಯೋಗದ ಅವಕಾಶವನ್ನು ನೀಡುತ್ತಿದೆ. ಬೆಳವಣಿಗೆಗೆ, ದೂರ ದೃಷ್ಟಿ ಮುಖ್ಯವಾಗುತ್ತದೆ ಮತ್ತು ವಿದ್ಯಾರ್ಥಿಗಳು ಜೀವನದಲ್ಲಿ ಅನುಸರಿಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಸಾಧನೆಗೆ ಶ್ರಮ ಮುಖ್ಯ-ಮಾಡೆಲ್ ಅನನ್ಯ; ಮತ್ತೋರ್ವ ಅತಿಥಿ, ಡೀನ್ ಮಾಡೆಲ್ ಅನನ್ಯ ಮಾತನಾಡಿ, ಸಾಧನೆ ಎನ್ನುವುದು ನಮ್ಮ ಪ್ರಯತ್ನಗಳಿಂದ ಕೂಡಿದೆ. ನಾವುಗಳು ಅದರ ಜೊತೆ ಇರಬೇಕಷ್ಟೆ. ಒಂದೇ ದಿನದಲ್ಲಿ ಯಾವ ಅರಮನೆಯನ್ನು ಹೇಗೆ ಕಟ್ಟಲಾಗುವುದಿಲ್ಲವೋ ಹಾಗೆಯೇ ಸಾಧನೆಗೆ ಸಮಯ ತೆಗೆದುಕೊಳ್ಳುತ್ತೆ ಅದಕ್ಕೆ ಶ್ರಮವೆಂಬ ತಪಸ್ಸು ಅತೀ ಮುಖ್ಯ ಎಂದರು.ವೃತ್ತಿಪರ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆ-ಕಲಾವತಿ ಜಯಂತ್: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ಎಲ್ಲ ವಾತಾವರಣವು ಅಕ್ಷಯ ಕಾಲೇಜಿನಲ್ಲಿ ಇದ್ದು ಅದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿಂದು ಪಠ್ಯದ ಜೊತೆಜೊತೆಗೆ ವೃತ್ತಿಪರ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆ ನಮ್ಮದು. ಇಲ್ಲಿನ ಪ್ರತೀ ಸನ್ನಿವೇಶವನ್ನು ಕಲಿತು ಉಜ್ವಲ ಬದುಕನ್ನು ಕಟ್ಟಿಕೊಳ್ಳಿ ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಮಾತನಾಡಿ, ಫ್ಯಾಶನ್ ಶೋ ಅನುವುದು ಮನೋರಂಜನೆಗೆ ಮಾತ್ರವಲ್ಲ ಬದುಕನ್ನು ಸುಂದರಗೊಳಿಸುವ ಒಂದು ಮಾರ್ಗವು ಹೌದು. ಅದೇ ಮಾರ್ಗದಲ್ಲಿ ನಮ್ಮ ವಿದ್ಯಾರ್ಥಿಗಳು ಸಾಗುತ್ತಿದ್ದಾರೆ. ಜನರ ಮನೋರಂಜನೆಯ ಮಾರ್ಗಗಳಲ್ಲಿ ಫ್ಯಾಶನ್ ಶೋ ಕೂಡ ಒಂದು ಸಾಧಕರನ್ನು ನಮ್ಮ ಬದುಕಿನಲ್ಲಿ ಅನಿಸಿದ್ದರೆ ನಾವು ಕೂಡ ಸಾಧಕರಾಗಲು ಸಾಧ್ಯ ಎಂದರು.ಅಕ್ಷಯ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಡಾ.ಅಕ್ಷಯ್, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಅರ್ಪಿತ್ ಟಿ.ಎ, ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಉಪಸ್ಥಿತರಿದ್ದರು. ದ್ವಿತೀಯ ಎಫ್.ಡಿ ವಿಭಾಗದ ವಿದ್ಯಾರ್ಥಿನಿಯರಾದ ದೇವಿಕಾ, ಮೋಕ್ಷ ಮತ್ತು ಸ್ವರ್ಣ ಪ್ರಾರ್ಥಿಸಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಖಜಾಂಚಿ ಅಂಚಿತ್ ಸ್ವಾಗತಿಸಿ, ಎಫ್.ಡಿ ವಿಭಾಗದ ಮುಖ್ಯಸ್ಥೆ ವೀಣಾ ವಂದಿಸಿ, ಉಪನ್ಯಾಸಕರಾದ ಹರೀಶ್ಚಂದ್ರ ಮತ್ತು ಕು.ಶೈಲ ಅತಿಥಿಗಳ ಪರಿಚಯ ವಾಚನ ಮಾಡಿದರು. ಅಕ್ಷಯ ಪದವಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಅಭಿಲಾಷ್ ಕ್ಷತ್ರಿಯ ಪ್ರಸ್ತಾವನೆಗೈದು, ಬಿ.ಎಚ್.ಎಸ್ ವಿಭಾಗದ ಉಪನ್ಯಾಸಕಿ ಶ್ರತ ಮತ್ತು ಆಂಗ್ಲ ಭಾಷಾ ಉಪನ್ಯಾಸಕಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.
ನಾನು ಇಂದು ನನ್ನನ್ನು ಹೊಗಳಿಕೊಳ್ಳುವುದಲ್ಲ ಆದರೆ ಡೈಜೀವರ್ಲ್ಡ್ನಲ್ಲಿ ೨೦೦ ಪಾತ್ರ ಮಾಡಿದ್ದೇನೆ. ಅದು ಬೇರೆ ಬೇರೆ ಪಾತ್ರವೇ. ಯಾವುದೇ ಪಾತ್ರವಾದರೂ ಅದಕ್ಕೆ ಜೀವ ನಾವೇ ನೀಡಬೇಕು ಜೊತೆಗೆ ಆ ಪಾತ್ರದ ಅಧ್ಯಯನ ಮಾಡಲೇಬೇಕು. ಉದಾಹರಣೆಗೆ ಒಂದು ಭಿಕ್ಷುಕನ ಪಾತ್ರವೇ ಆಗಿರಲಿ ಅದನ್ನು ಪಾತ್ರ ಅಂತ ಗೌರವಿಸಿ ಅದಕ್ಕೆ ಜೀವ ಕೊಡುವುದು ಕಲಾವಿದನ ಕರ್ತವ್ಯ. ಹಾಗಾಗಿ ನಾವು ಇಲ್ಲಿ ಬದುಕಬೇಕಾದ್ದು ಹಾಸ್ಯದ ಜೊತೆ. ವಿದ್ಯಾರ್ಥಿ ಬದುಕನ್ನು ಚಿನ್ನದಂತಹ ಬದುಕು ಎನ್ನುತ್ತಾರೆ. ನನ್ನ ಜೀವನದಲ್ಲಿ ವಿದ್ಯೆ ಕಲಿಯಲು ಅವಕಾಶ ಇರಲಿಲ್ಲ. ಆದರೆ ನಿಮಗೆ ಶಿಕ್ಷಣದ ಜೊತೆಗೆ ಫ್ಯಾಷನ್ ಶೋವನ್ನು ಶಿಕ್ಷಣವಾಗಿ ಕಲಿಯಲು ಅವಕಾಶವಿದೆ. ನಾವೆಂದಿಗೂ ಜನ್ಮ ಕೊಟ್ಟ ತಾಯಿ, ಜವಾಬ್ದಾರಿ ಕಲಿಸಿದ ತಂದೆ, ದಾರಿ ತೋರಿಸಿದ ಗುರುವನ್ನು ಎಂದಿಗೂ ಮರೆಯಬಾರದು.-ಅರವಿಂದ ಬೋಳಾರ್, ತುಳುನಾಡಿನ ಮಾಣಿಕ್ಯ