ಕನ್ನಡಪ್ರಭ ವಾರ್ತೆ ವಿಜಯಪುರ
ಚುನಾವಣೆ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆಯಿಂದಲೇ ನಾನಾ ಗ್ರಾಮಗಳಿಗೆ ತೆರಳಿ ಮತದಾರರನ್ನು ಭೇಟಿ ಮಾಡಿದ ಸಚಿವರು ಪ್ರೊ.ರಾಜು ಆಲಗೂರ ಪರ ಮತಯಾಚಿಸಿದ್ದರು. ಅಲ್ಲದೇ, ನಾನಾ ಸಭೆಗಳಲ್ಲಿ ಪಾಲ್ಗೊಂಡು ಕಾಂಗ್ರೆಸ್ ಸರಕಾರ ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳು, ಅದರಿಂದ ಪ್ರತಿಯೊಂದು ಕುಟುಂಬಕ್ಕಾದ ಲಾಭಗಳು ಮತ್ತು ಬಿಜೆಪಿಯ ಪೊಳ್ಳು ಭರವಸೆಗಳಿಂದ ಜನಸಾಮಾನ್ಯರಿಗೆ ಉಂಟಾಗಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೇ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನೀಡಲಾಗುವ ಹೊಸ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದ್ದರು.
ಮತದಾನ ಮುಕ್ತಾಯವಾಗಿರುವ ಹಿನ್ನೆಯಲ್ಲಿ ಬುಧವಾರ ನಗರದ ತಮ್ಮ ನಿವಾಸದಲ್ಲಿರುವ ಸಚಿವರು, ಭೇಟಿಗೆ ಆಗಮಿಸಿದ ಜಿಲ್ಲೆಯ ನಾನಾ ಭಾಗಗಳ ಮುಖಂಡರಿಂದ ಮತದಾನ ಪ್ರಮಾಣ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಅಂತರದ ಕುರಿತು ಮಾಹಿತಿ ಪಡೆದರು. ನಿಮ್ಮ ಊರಿನಲ್ಲಿ ಎಷ್ಟು ಮತದಾನವಾಗಿದೆ? ಯುವಕರು, ಮಹಿಳೆಯರು ಹಾಗೂ ಹಿರಿಯರ ಉತ್ಸಾಹ ಹೇಗಿತ್ತು? ಬೆಳಿಗ್ಗೆ ಮತದಾನದ ಪ್ರಮಾಣ ಹೇಗೆ ನಡೆಯಿತು ಸೇರಿದಂತೆ ಯಾವ್ಯಾವ ಮತಗಟ್ಟೆ ಮತ್ತು ಊರುಗಳಲ್ಲಿ ನಮಗೆ ಹೆಚ್ಚಿನ ಲೀಡ್ ಸಿಗಬಹುದು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಿದರು. ಅಲ್ಲದೇ, ಹಲವಾರು ಮುಖಂಡರು ಮೊಬೈಲ್ ಮೂಲಕವು ಸಚಿವರಿಗೆ ಮತದಾನ ಮತ್ತಿತರ ವಿಷಯಗಳ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬೇಸಿಗೆಯಲ್ಲಿಯೇ ಚುನಾವಣೆ ಬಂದಿದ್ದರಿಂದ ಮತದಾರರಿಗೆ ಬಿಸಿಲಿನ ಬೇಗೆಯಿಂದ ತೊಂದರೆಯಾಗದಂತೆ ಪ್ರಚಾರ ಕಾರ್ಯಕ್ರಮ ನಿಗದಿ ಪಡಿಸಲಾಗಿತ್ತು. ಪ್ರತಿದಿನ ಬೆಳಿಗ್ಗೆ ಎರಡು ಮತ್ತು ಸಂಜೆ ಮೂರು ಕಡೆಗಳಲ್ಲಿ ಪ್ರಚಾರ ನಡೆಸಲಾಗಿತ್ತು. ಮತದಾನ ಚೆನ್ನಾಗಿ ನಡೆದಿದೆ. ನಮ್ಮ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ನಿಶ್ಚಿತವಾಗಿಯೂ ಗೆಲುವು ಸಾಧಿಸಲಿದ್ದಾರೆ. ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಎರಡನೇ ಹಂತದಲ್ಲಿ ಚುನಾವಣೆ ನಡೆದ ಒಟ್ಟು 14 ಕ್ಷೇತ್ರಗಳ ಪೈಕಿ ಕನಿಷ್ಠ 10 ರಿಂದ 11ಸ್ಥಾನಗಳಲ್ಲಿ ಮತ್ತು ರಾಜ್ಯದಲ್ಲಿ 19 ರಿಂದ 20 ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ತಿಳಿಸಿದರು.