ಸರ್ಕಾರಗಳ ಆಲ್ಕೋಹಾಲ್ ಆರ್ಥಿಕ ನೀತಿಯೇ ಅನರ್ಥಕ್ಕೆ ಕಾರಣ: ಪುತ್ತಿಗೆ ಶ್ರೀಗಳು

KannadaprabhaNewsNetwork | Published : Oct 4, 2024 1:16 AM

ಸಾರಾಂಶ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಗಾಂಧಿ ಸ್ಮೃತಿ ಅಂಗವಾಗಿ ರಾಜಾಂಗಣದಲ್ಲಿ ಜನಜಾಗೃತಿ ಸಮಾವೇಶ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಂದಿನ ಸರ್ಕಾರಗಳು ಹಾಲಿನ ಆರ್ಥಿಕ ನೀತಿಯನ್ನು ಕೈಬಿಟ್ಟು, ಆಲ್ಕೋಹಾಲಿನ ಆರ್ಥಿಕ ನೀತಿಯನ್ನು ಪ್ರೋತ್ಸಾಹಿಸಿದ್ದೇ ಇಂದಿನೆಲ್ಲಾ ಅನರ್ಥ, ಅವ್ಯವಸ್ಥೆಗೆ ಕಾರಣ ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.ಅವರು ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಗಾಂಧಿ ಸ್ಮೃತಿ ಅಂಗವಾಗಿ ರಾಜಾಂಗಣದಲ್ಲಿ ನಡೆದ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಸಂದೇಶ ನೀಡಿದರು.

ಜಗತ್ತಿನ ರಾಷ್ಟ್ರಗಳಲ್ಲೇ ಭಾರತಕ್ಕೆ ಅಹಿಂಸೆಯಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಭಗವದ್ಗೀತೆಯಲ್ಲಿ ಶ್ರದ್ಧೆ, ನಂಬಿಕೆಯಿಟ್ಟು ಅಹಿಂಸೆಯ ಸ್ಫೂರ್ತಿ ಪಡೆದಿದ್ದಾರೆ. ವೈದ್ಯರು ದೊಡ್ಡ ಹಿಂಸೆ ತಪ್ಪಿಸಲು ಕನಿಷ್ಠ ಹಿಂಸೆಯ ಧರ್ಮ ಪಾಲಿಸುತ್ತಾರೆ, ಅದೇ ರೀತಿ ಜಗತ್ತಿನ ಮಹಾವೈದ್ಯ ಶ್ರೀಕೃಷ್ಣ ಕೂಡ ಜಗತ್ತಿನ ಶಾಂತಿಗಾಗಿ ಕನಿಷ್ಠ ಹಿಂಸೆ ಪ್ರತಿಪಾದಿಸಿದ್ದಾನೆ ಎಂದವರು ಹೇಳಿದರು.ಧಾರ್ಮಿಕ ಚಿಂತಕ ದಾಮೋದರ ಶರ್ಮಾ ಬಾರ್ಕೂರು ದಿಕ್ಸೂಚಿ ಮಾತುಗಳನ್ನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆನ್‌ಲೈನ್ ಸಂದೇಶ ನೀಡಿದರು.ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಸ್ವಾಮೀಜಿ, ಎಸ್‌.ಕೆ.ಡಿ.ಆರ್.ಪಿ. ಬಿಸಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಮುಂಬೈ ಉದ್ಯಮಿ ಆರ್. ಬಿ. ಹೆಬ್ಬಳ್ಳಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಮುಖರಾದ ದೇವದಾಸ್‌ ಹೆಬ್ಬಾ‌ರ್, ನವೀನ್ ಅಮೀನ್, ದುಗ್ಗೇ ಗೌಡ, ದಯಾನಂದ ಹೆಜಮಾಡಿ, ಉದಯ ಕುಮಾ‌ರ್ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ನೀರೆ ಕೃಷ್ಣ ಶೆಟ್ಟಿ,ಉಮೇಶ್ ಶೆಟ್ಟಿ ಕುಂದಾಪುರ ಉಪಸ್ಥಿತರಿದ್ದರು.ಸಮಾವೇಶದಲ್ಲಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಸಮಾವೇಶಕ್ಕೆ ಮೊದಲು ಜೋಡುಕಟ್ಟೆಯಿಂದ ರಾಜಾಂಗಣದವರೆಗೆ ಬೃಹತ್, ವೈವಿಧ್ಯಮಯ ಜನಜಾಗೃತಿ ಜಾಥಾ ನಡೆಯಿತು.

Share this article