ಕನ್ನಡಪ್ರಭ ವಾರ್ತೆ ಮಾಲೂರು
ಪುರಸಭಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಗುರುತಿಸಿರುವ ೩೨೯ ಸಿಎ ನಿವೇಶನಗಳ ಪೈಕಿ ಸಂಘ ಸಂಸ್ಥೆಗಳು ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ಹೊರತು ಪಡಿಸಿ ಉಳಿದ ಸಿಎ ನಿವೇಶನಗಳನ್ನು ಪುರಸಭೆ ವಶಕ್ಕೆ ಪಡೆಯಲು ಎಲ್ಲ ಸದಸ್ಯರು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಶಾಸಕ ಕೆ.ವೈ. ನಂಜೇಗೌಡ ಮನವಿ ಮಾಡಿದರು. ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷ ಕೋಮಲ ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿರುವ ಕೆಲವು ಬಡಾವಣೆಗಳಲ್ಲಿ ಪುರಸಭೆಗೆ ಸೇರಿದ ನಿವೇಶನಗಳನ್ನು ಕೆಲವರು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದರು.ಅಕ್ರಮ ನಿವೇಶನಗಳ ಪತ್ತೆ
ಅಕ್ರಮ ನಿವೇಶನಗಳನ್ನು ಗುರುತಿಸುವಂತೆ ಪುರಸಭಾ ಅಧಿಕಾರಿಗಳಿಗೆ ಸೂಚಿಸಲಾಗಿತ್ತು, ಅದರಂತೆ ಪುರಸಭೆಯ ಕಂದಾಯ ಶಾಖೆಯ ಅಧಿಕಾರಿಗಳು ಈಗಾಗಲೇ ೩೨೯ ಸಿಎ ನಿವೇಶನಗಳನ್ನು ಗುರುತಿಸಿದ್ದಾರೆ, ಆ ನಿವೇಶನಗಳಲ್ಲಿ ಸಮುದಾಯಗಳ ಸಂಘಗಳ ಸಿಎ ನಿವೇಶನಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೆ, ಅವರಿಗೆ ಪುರಸಭೆಯಿಂದ ದಾಖಲೆಗಳನ್ನು ಮಾಡಿಕೊಟ್ಟು ಅಂತಹ ನಿವೇಶನಗಳನ್ನು ಹೊರತುಪಡಿಸಿ ಇನ್ನುಳಿದ ನಿವೇಶನಗಳನ್ನು ಮುಲಾಜಿಲ್ಲದೆ ಪುರಸಭೆಯ ವಶಕ್ಕೆ ಪಡೆಯಲಾಗುವುದು. ಇದಕ್ಕೆ ಪುರಸಭೆ ಸದಸ್ಯರು ಆಯಾ ವಾಡುಗಳಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು. ಅಂತರ್ಜಲ ಕುಸಿಯುತ್ತಿರುವುದರಿಂದ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತಾಲೂಕಿನಲ್ಲಿ ಉಲ್ಬಣಗೊಳ್ಳುತ್ತಿದೆ ಬೇಸಿಗೆ ಸಮೀಪಿಸುತ್ತಿದ್ದು ಪಟ್ಟಣದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಪುರಸಭೆ ಎಚ್ಚರವಹಿಸಬೇಕು. ನೀರಿನ ಸಮಸ್ಯೆ ಇರುವ ವಾರ್ಡುಗಳಲ್ಲಿ ನೀರು ಸರಬರಾಜು ಮಾಡಲು ಕ್ರಿಯಾ ಪ್ರಯೋಜನ ರೂಪಿಸಿಕೊಳ್ಳಬೇಕು, ಯರಗೋಳು ಯೋಜನೆಯಿಂದ ನಮ್ಮ ಪಾಲಿನ ನೀರು ಶೀಘ್ರದಲ್ಲಿಯೇ ಬರಲಿದೆ ಎಂದರು. ರಸ್ತೆಯಲ್ಲಿನ ಗುಂಡಿ ಮುಚ್ಚಿಸದಸ್ಯ ಎಂ.ವಿ.ವೇಮನ ಮಾತನಾಡಿ ಪಟ್ಟಣದ ನಡೆಯುವ ಪ್ರಸಿದ್ದ ಕರಗ ಮತ್ತು ಜಾತ್ರಾ ಮಹೋತ್ಸವ ಸಮಿಪಿಸುತ್ತಿದ್ದು, ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ಕರಗ ಸಂಚಾರ ಮಾಡಲು ಕಷ್ಟಕರವಾಗಿದ್ದು, ತಕ್ಷಣ ಗುಂಡಿಗಳನ್ನು ಮುಚ್ಚಲು ಪುರಸಭೆ ಅಧಿಕಾರಿಗಳು ಮುಂದಾಗಬೇಕೆಂದು ಶಾಸಕ ಗಮನಕ್ಕೆ ತಂದರು.ಮುಖ್ಯ ಅಧಿಕಾರಿ ಎ.ಬಿ.ಪ್ರದೀಪ್ ಮಾತನಾಡಿ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ೨೦ ಕೋಟಿ ಬಿಡುಗಡೆಯಾಗಿದೆ ಹಾರ್ಡ್ ಕಾಪಿ ಬಂದಿದ್ದು, ಆನ್‌ಲೈನ್ ಮೂಲಕ ಸಾಫ್ಟ್ ಕಾಪಿಯನ್ನು ಪಡೆದು ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು. ಹಣಕಾಸು ಅವ್ಯವಹಾರದ ತನಿಖೆ
ಸದಸ್ಯ ಬಾನುತೇಜ ಮಾತನಾಡಿ, ಹಿಂದಿನ ಅವಧಿಯಲ್ಲಿ ಹಣಕಾಸು ವ್ಯವಹಾರ ಅಕೌಂಟೆಂಟ್ ಮಾಡಿರುವ ದುರುಪಯೋಗ ಯಾವ ಸ್ಥಿತಿಯಲ್ಲಿದೆ ಎಂದರು, ಇದಕ್ಕೆ ಉತ್ತರಿಸಿ ಮಾತನಾಡಿದ ಮುಖ್ಯ ಅಧಿಕಾರಿ ಈ ಪ್ರಕರಣವು ತನಿಖೆಯ ಹಂತದಲ್ಲಿದ್ದು ತಪ್ಪಿತಸ್ಥರು ಯಾರೇ ಇದ್ದಲ್ಲಿ ಕಾನೂನು ಕ್ರಮ ವಹಿಸಲಾಗುವುದು ಎಂದ ಪ್ರದೀಪ್ ಅವರು ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ ಎಂದರು. ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿಸಲು ಸರ್ಕಾರಕ್ಕೆ ಪ್ರಸ್ತಾವಿನೆ ಕಳುಹಿಸಲಾಗಿದೆ ಸಚಿವರು ಸಹ ಭರವಸೆ ನೀಡಿದ್ದು ಮುಂಬರುವ ದಿನಗಳಲ್ಲಿ ನಗರ ಸಭೆಯನ್ನಾಗಿಸುವ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ ಎಂದು ಹೇಳಿದರು.ದೊಡ್ಡಕೆರೆ ಅಭಿವೃದ್ಧಿಗೆ ₹ 21 ಕೋಟಿಯೋಜನಾ ಪ್ರಾಧಿಕಾರದ ಅನುದಾನದಡಿ ಪಟ್ಟಣದ ದೊಡ್ಡ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿದ್ದು ದೊಡ್ಡ ಕೆರೆಯಲ್ಲಿ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿ ಹಾಗೂ ೨೧ ಕೋಟ ರು.ಗಳ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮುಖ್ಯರಸ್ತೆಯಲ್ಲಿ ಮೇಲ್ ಸೇತುವೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎ ರಾಜಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಹಮದ್ ನಯಿಂ ಉಲ್ಲಾ, ಕಂದಾಯ ಅಧಿಕಾರಿ ರೇಣುಕಾ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಹಾಜರಿದ್ದರು.