ಜನಶಕ್ತಿಯ ವಿರಾಟ್ ಶಕ್ತಿಯ ಮುಂದೆ ಎಲ್ಲಾ ಷಡ್ಯಂತ್ರ ವಿಫಲ: ಎಚ್.ಎ. ವೆಂಕಟೇಶ್

KannadaprabhaNewsNetwork |  
Published : Nov 24, 2024, 01:47 AM IST
23 | Kannada Prabha

ಸಾರಾಂಶ

ವಕ್ಫ್ ಆಸ್ತಿ ಗೊಂದಲವನ್ನು ಆರಂಭಿಸಿದ್ದೇ ಬಿಜೆಪಿಯವರು. ಈ ತಪ್ಪನ್ನೀಗ ಕಾಂಗ್ರೆಸ್ ತಲೆಗೆ ಕಟ್ಟಲು ನೋಡಿ ಇವರು ಬೀದಿ ಚಳವಳಿಗೂ ಮುಂದಾಗಿದ್ದರು. ಈ ಇಬ್ಬಗೆ ನಡುವಳಿಕೆಗೆ ತಕ್ಕ ಶಾಸ್ತಿಯಾಗಿದೆ. ಪ್ರಚಾರಕ್ಕಾಗಿ ಆರೋಪ ಮಾಡುವ ಮತ್ತು ಈ ಮೂಲಕ ರಾಜಕೀಯ ಶಕ್ತಿ ಪಡೆದುಕೊಳ್ಳುವ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಗೊಬೆಲ್ಸ್ ಪ್ರಚಾರಕ್ಕೆ ಹಿನ್ನಡೆಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಎಲ್ಲಾ ಷಡ್ಯಂತ್ರ ರಚಿಸಿದರೂ ಜನಶಕ್ತಿ ಎಂಬ ವಿರಾಟ ಶಕ್ತಿಯ ಮುಂದೆ ವೈಫಲ್ಯದಿಂದ ತಲೆತಗ್ಗಿಸಿ ನಿಲ್ಲುವ ಅನಿವಾರ್ಯ ಸ್ಥಿತಿಗೆ ತಳ್ಳಲ್ಪಟ್ಟಿವೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಟೀಕಿಸಿದ್ದಾರೆ.

ಈ ಪಕ್ಷಗಳು ವಿವಿಧ ವೇದಿಕೆಗಳಲ್ಲಿ ಸರ್ಕಾರದ ವಿರುದ್ಧ ಮಾಡಿದ ಟೀಕೆ ಟಿಪ್ಪಣಿಗಳು, ಮುಖ್ಯಮಂತ್ರಿ ಸೇರಿದಂತೆ ಸಚಿವ ಪ್ರಮುಖರ ವಿರುದ್ಧ ಹೊರಿಸಿದ್ದ ಆರೋಪ ಇತ್ಯಾದಿಗಳಿಗೆಲ್ಲಾ ಮತದಾರ ಸೂಕ್ತ ಉತ್ತರ ನೀಡಿದ್ದಾನೆ. ವಕ್ಫ್ ಆಸ್ತಿ ವಿವಾದ, ಮುಡಾ ಗೊಂದಲ, ವಾಲ್ಮೀಕಿ ಹಗರಣ, ಪಡಿತರ ಚೀಟಿ ಗೊಂದಲ ಇತ್ಯಾದಿಗಳನ್ನು ಸೃಷ್ಟಿಸಿ ಕೇಂದ್ರದಿಂದಲೂ ಇಡಿಯಂತಹ ಸಂಸ್ಥೆಗಳನ್ನು ಎಳೆತಂದು, ಸಚಿವರನ್ನು ಬಂಧಿಸಿ ಜನರ ದಾರಿ ತಪ್ಪಿಸಲು ಬಿಜೆಪಿ- ಜೆಡಿಎಸ್ ಪಕ್ಷಗಳು ಯತ್ನಿಸಿದರೂ ಇದು ಫಲಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ತಾಯಿ ಹೃದಯದಿಂದ ಜನರ ಸಂಕಷ್ಟವನ್ನು ನೋಡುತ್ತಿದೆ. ಈ ಕಾರಣದಿಂದಲೇ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮೀ ಮುಂತಾದ ಯೋಜನೆಗಳು ಜನರ ನೆರವಿಗೆ ನಿಂತಿವೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ಸಾಮಾನ್ಯರು ತುಸು ನಿರಾಳತೆಯಿಂದ ಬದುಕು ಸಾಗಿಸುವಂತಾಗಿದೆ. ಇಂತಹ ಸಹಜ ಸ್ಥಿತಿಗೆ ಹುಳಿಹಿಂಡಿ, ಮತೀಯ ವಿಷಯ ಕೆದಕಿ ಲಾಭ ಪಡೆಯಲು ಯತ್ನಿಸಿ ಬಿಜೆಪಿ- ಜೆಡಿಎಸ್ ಮೈತ್ರಿ ಮುಖಭಂಗಕ್ಕೊಳಗಾಗಿದೆ ಎಂದು ಕುಟುಕಿದ್ದಾರೆ.

ಸಂಡೂರು ಹೊರತುಪಡಿಸಿ ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಈ ಹಿಂದೆ ಗೆದ್ದಿರಲಿಲ್ಲ. ಇಲ್ಲಿಯೂ ಪಕ್ಷದ ಗೆಲುವು ಸರ್ಕಾರದ ಜನಪ್ರಿಯತೆ ಹಾಗೂ ಗ್ಯಾರಂಟಿಗಳ ಪರಿಣಾಮವನ್ನು ಬಿಂಬಿಸುತ್ತಿದೆ. ಅಲ್ಲದೇ ಕಾಂಗ್ರೆಸ್ ಪಕ್ಷ ರಾಜ್ಯದ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದಲ್ಲಿ ಮತ್ತಷ್ಟು ಬಲಗೊಂಡಿದೆ ಎನ್ನುವುದನ್ನು ಈ ಗೆಲುವು ಸಾಬೀತು ಮಾಡಿದೆ ಎಂದು ತಿಳಿಸಿದ್ದಾರೆ.

ವಕ್ಫ್ ಆಸ್ತಿ ಗೊಂದಲವನ್ನು ಆರಂಭಿಸಿದ್ದೇ ಬಿಜೆಪಿಯವರು. ಈ ತಪ್ಪನ್ನೀಗ ಕಾಂಗ್ರೆಸ್ ತಲೆಗೆ ಕಟ್ಟಲು ನೋಡಿ ಇವರು ಬೀದಿ ಚಳವಳಿಗೂ ಮುಂದಾಗಿದ್ದರು. ಈ ಇಬ್ಬಗೆ ನಡುವಳಿಕೆಗೆ ತಕ್ಕ ಶಾಸ್ತಿಯಾಗಿದೆ. ಪ್ರಚಾರಕ್ಕಾಗಿ ಆರೋಪ ಮಾಡುವ ಮತ್ತು ಈ ಮೂಲಕ ರಾಜಕೀಯ ಶಕ್ತಿ ಪಡೆದುಕೊಳ್ಳುವ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಗೊಬೆಲ್ಸ್ ಪ್ರಚಾರಕ್ಕೆ ಹಿನ್ನಡೆಯಾಗಿದೆ. ಮತದಾರ ಈ ಪಕ್ಷಗಳ ನಾಯಕರ ಇಬ್ಬಂದಿತನ ಮತ್ತು ಸಮಯ ಸಾಧಕ ನಡವಳಿಕೆಯನ್ನು ಗುರುತಿಸಿದ್ದಾನೆ. ಅಧಿಕಾರಕ್ಕಾಗಿ ತಮ್ಮ ಪಕ್ಷದ ನಾಯಕರನ್ನೇ ನಿಂದಿಸುತ್ತಾ ಓಡಾಡುವ ಇಂತಹವರು ಮೂಲೆಗೆ ತಳ್ಳಲ್ಪಡಲು ಅರ್ಹರು ಎಂದು ಭಾವಿಸಿ ತೀರ್ಪು ಮುಂದಿಟ್ಟಿದ್ದಾನೆ ಎಂದು ಹೇಳಿದ್ದಾರೆ.

ಸರ್ಕಾರದ 5 ಗ್ಯಾರಂಟಿಗಳಿಗೆ ಹುರುಪು ತುಂಬಿದ ಮತದಾರರ ಈ ತೀರ್ಪು ಅಭಿನಂದನಾರ್ಹ. ಹಲವು ಬಗೆಯ ಒತ್ತಡಗಳು, ವಿಪಕ್ಷಗಳ ಸಡಿಲ ಆರೋಪಗಳನ್ನು ಪರಿಣಾಮಕಾರಿಯಾಗಿ ಎದುರಿಸಿ, ಮೂರೂ ಕಡೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಸರ್ಕಾರದ ಸಚಿವ ಸಂಪುಟ, ಶಾಸಕ ಪ್ರಮುಖರೆಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ