ಕನ್ನಡಪ್ರಭ ವಾರ್ತೆ ಉಡುಪಿ
ಶಿಗ್ಗಾಂವಿ, ಚೆನ್ನಪಟ್ಟಣ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಸಿ.ಪಿ ಯೋಗೇಶ್ವರ್, ಅನ್ನಪೂರ್ಣ ತುಕಾರಾಮ್ ಮತ್ತು ಯಾಸಿರ್ ಪಠಾಣ್ ಹಾಗೂ ವಯನಾಡ್ ಲೋಕಸಭಾ ಕ್ಷೇತ್ರದ ಪ್ರಿಯಾಂಕಾ ಗಾಂಧಿ ಗೆಲುವನ್ನು ಉಡುಪಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸಿಹಿ ತಿಂಡಿ ಹಂಚಿ ಆಚರಿಸಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಮತ್ತು ಜೆಡಿಎಸ್ ಪ್ರಯತ್ನಕ್ಕೆ ರಾಜ್ಯ ಜನರು ಈ ಎರಡೂ ಪಕ್ಷಗಳನ್ನು ಸೋಲಿಸಿ ತಕ್ಕ ಉತ್ತರ ನೀಡಿದ್ದಾರೆ ಎಂದರು.ಕರ್ನಾಟಕ ರಾಜ್ಯದ ಇಬ್ಬರು ಮುಖ್ಯಮಂತ್ರಿಗಳ ಪುತ್ರರು ಹೀನಾಯವಾಗಿ ಸೋತಿದ್ದು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಜನರು ಮೆಚ್ಚಿದ್ದಾರೆ ಎಂದು ಈ ಫಲಿತಾಂಶದಿಂದ ಸಾಬೀತಾಗಿದೆ. ಈ ಮೂಲಕ ಬಿಜೆಪಿಗರ ಕಾಂಗ್ರೆಸ್ ಮುಕ್ತ ಭಾರತ ಕನಸು ನುಚ್ಚು ನೂರಾಗಿದೆ ಎಂದು ಹೇಳಿದರು.
ನಾಯಕರಾದ ಮಹಾಬಲ ಕುಂದರ್, ಪ್ರಖ್ಯಾತ್ ಶೆಟ್ಟಿ, ಗಣೇಶ್ ನೆರ್ಗಿ, ಸತೀಶ್ ಕುಮಾರ್ ಮಂಚಿ, ಡಾ. ಸುನಿತಾ ಶೆಟ್ಟಿ, ರೋಶ್ನಿ ಒಲಿವರ್, ಗೀತಾ ವಾಗ್ಲೆ, ಯತೀಶ್ ಕರ್ಕೇರ, ಲಕ್ಷ್ಮೀಕಾಂತ್ ಬೆಸ್ಕೂರು, ಹಬೀಬ್ ಆಲಿ, ಸಂಧ್ಯಾ ತಿಲಕ್‌ರಾಜ್, ಸದಾನಂದ ಕಾಂಚನ್, ಐಡಾ ಡಿಸೋಜ ಮತ್ತಿತರರಿದ್ದರು.