ಬಿಜೆಪಿ ಸದಸ್ಯರ ಅನರ್ಹತೆ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಚುನಾವಣೆ ನಡೆಸುವುದನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲಾ ಕೇಂದ್ರವಾದ ಗದಗ- ಬೆಟಗೇರಿ ನಗರಸಭೆ ಅಧಿಕಾರ ಚುಕ್ಕಾಣಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ಇದೀಗ ದೆಹಲಿ ತಲುಪಿದ್ದು, ಶುಕ್ರವಾರ ಸುಪ್ರೀಂ ಕೋರ್ಟ್ ಮಾ. 3ರಂದು ನಡೆಯಬೇಕಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಿದೆ.ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ 18 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಬಹುಮತ ಹೊಂದಿತ್ತು. 17 ಸ್ಥಾನ ಪಡೆದಿರುವ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿತ್ತು. ಇದರ ಆಧಾರದಲ್ಲಿ ಮೊದಲ ಅವಧಿಗೆ ಬಿಜೆಪಿ ಅಧಿಕಾರ ನಡೆಸಿತ್ತು. ಇದೇ ಸಂದರ್ಭದಲ್ಲಿ ಅವಳಿ ನಗರದಲ್ಲಿನ ನಗರಸಭೆಯ ಅಮೂಲ್ಯ ಆಸ್ತಿಯನ್ನು ಖಾಸಗಿಯವರಿಗೆ ನೀಡುವ ಲೀಜ್ ವಿಸ್ತರಣೆ ವಿಷಯದಲ್ಲಿ ಅಂದಿನ ಪೌರಾಯುಕ್ತರ ಸಹಿಯನ್ನು ನಕಲಿ ಮಾಡಿ ಠರಾವು ಪಾಸ್ ಮಾಡಲಾಗಿದೆ ಎಂದು ಅಧಿಕಾರಿ ಪ್ರಕರಣ ದಾಖಲಿಸಿದ್ದರು.
3 ಜನರ ಸದಸ್ಯತ್ವ ಅನರ್ಹ: ನಕಲಿ ಸಹಿಯ ವಿಚಾರಣೆ ನಡೆಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತರು, ನಕಲಿ ಸಹಿಯ ಆರೋಪ ಎದುರಿಸುತ್ತಿದ್ದ 3 ಜನ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಿದ್ದರು. ಇದನ್ನು ಬಿಜೆಪಿ ಸರ್ಕಾರ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿತ್ತು.2025ರ ಫೆ. 27ರಂದು ಹೈಕೋರ್ಟ್ ಈ ಅನರ್ಹ ಬಿಜೆಪಿ ಸದಸ್ಯರಿಗೆ ಮತದಾನದ ಹಕ್ಕು ನೀಡಿತ್ತು. ಆದರೆ, ಅದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ಪ್ರಾದೇಶಿಕ ಆಯುಕ್ತರು ನಕಲಿ ಠರಾವು ಪ್ರಕರಣದ ಅಡಿ ಸದಸ್ಯರನ್ನು ಮತ್ತೊಮ್ಮೆ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
ವ್ಯಾಪಕ ಚರ್ಚೆ: ಹೈಕೋರ್ಟ್ ತಡೆಯಾಜ್ಞೆ ಇದ್ದಾಗ್ಯೂ ಗದಗ ಉಪವಿಭಾಗಾಧಿಕಾರಿಗಳು ಅಂದು ಚುನಾವಣೆ ಪ್ರಕ್ರಿಯೆ ಮುಂದುವರಿಸಿದ ಕಾರಣಕ್ಕೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದ್ದು, ಅದರ ವಿಚಾರಣೆ ಕೂಡಾ ನಡೆಯುತ್ತಿತ್ತು.ಇದೆಲ್ಲರ ಮಧ್ಯೆ ಅದೇ ಅಧಿಕಾರಿ ಮಾ. 3ರಂದು ಮತ್ತೊಮ್ಮೆ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿ ಮಾಡಿ ಘೋಷಣೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ಸುಪ್ರೀಂ ಕೋರ್ಟಿಗೆ: ಬಿಜೆಪಿ ಸದಸ್ಯರ ಅನರ್ಹತೆ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಚುನಾವಣೆ ನಡೆಸುವುದನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಮಾ. 3ರಂದು ನಡೆಯಬೇಕಿದ್ದ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ. ಇದು ಕಾಂಗ್ರೆಸ್‌ಗೆ ಹಿನ್ನಡೆಯಾದರೆ, ಬಿಜೆಪಿಗೆ ತಾತ್ಕಾಲಿಕ ಜಯ ತಂದುಕೊಟ್ಟಿದೆ.ಮಾ. 2ರಂದು ಹೈಕೋರ್ಟ್ ವಿಚಾರಣೆ
ಈಗ ಎಲ್ಲರ ಕಣ್ಣು ಮಾ. 2ರ ವಿಚಾರಣೆ ಮೇಲೆ ನೆಟ್ಟಿದೆ. ಅಂದು ಧಾರವಾಡ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಹಾಗೂ ಬಿಜೆಪಿ ಸದಸ್ಯರ ಅನರ್ಹತೆ ಎರಡು ಪ್ರಕರಣಗಳ ಪ್ರಮುಖ ವಿಚಾರಣೆಗಳು ನಡೆಯಲಿವೆ. ಅಂದಿನ ವಿಚಾರಣೆ ಪೂರ್ಣಗೊಂಡು ತೀರ್ಪು ಬರುತ್ತದೆಯೋ ಅಥವಾ ವಿಚಾರಣೆ ಮತ್ತೆ ಮುಂದೂಡಲಾಗುತ್ತದೆಯೋ ಎನ್ನುವುದು ಅಷ್ಟೇ ಮುಖ್ಯವಾದ ಹಿನ್ನೆಲೆ ಎಲ್ಲರ ದೃಷ್ಟಿ ಈಗ ಮತ್ತೆ ಹೈಕೋರ್ಟನತ್ತ ನೆಟ್ಟಿದೆ.