ಮಾದಕ ದ್ರವ್ಯ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಯುವಕರು ಈ ಮಾದಕ ದ್ರವ್ಯಗಳಿಂದ ದೂರವಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಒತ್ತು ಕೊಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕರೆ ನೀಡಿದ್ದಾರೆ.
ಬೆಂಗಳೂರು : ಮಾದಕ ದ್ರವ್ಯ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಯುವಕರು ಈ ಮಾದಕ ದ್ರವ್ಯಗಳಿಂದ ದೂರವಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಒತ್ತು ಕೊಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕರೆ ನೀಡಿದ್ದಾರೆ.
ದಿಶಾಬೋದ್ ಸಸ್ಟೈನಬಲ್ ಕಮ್ಯುನಿಟಿ ಡೆವೆಲಪ್‌ಮೆಂಟ್ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸಹಯೋಗದಲ್ಲಿ ಭಾನುವಾರ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಶಾ ಮುಕ್ತ ಯುವ-ವಿಕಸಿತ ಭಾರತ ಸಂಕಲ್ಪ ಅಭಿಯಾನ’ದಲ್ಲಿ ಭಾಗವಹಿಸಿ ಮಾತನಾಡಿದರು.
ಭವಿಷ್ಯದ ಸ್ವಾಸ್ಥ್ಯ ಕಾಪಾಡಬೇಕು:
ಈ ಅಭಿಯಾನ ಭಾರತದ ಭವಿಷ್ಯದ ಸ್ವಾಸ್ಥ್ಯ ಕಾಪಾಡಲು ಮತ್ತು ರಾಷ್ಟ್ರ ರಕ್ಷಣೆಗೆ ಪ್ರೇರಣೆ ನೀಡಲಿದೆ. ಈ ದೇಶದ ದೊಡ್ಡ ಶಕ್ತಿ ಯುವ ಜನತೆ. ಭಾರತ ಮುಂದೆ ವಿಶ್ವದ ನೇತೃತ್ವ ವಹಿಸುವಲ್ಲಿ ಯುವ ಸಮುದಾಯದ ಪಾತ್ರ ಪ್ರಮುಖ. ಹೀಗಾಗಿ ಭಾರತವನ್ನು ನಶೆ ಮುಕ್ತ ದೇಶವಾಗಿಸುವ ನಿಟ್ಟಿನಲ್ಲಿ ಈ ಅಭಿಯಾನ ಜನಾಂದೋಲವಾಗಬೇಕು ಎಂದು ಹೇಳಿದರು.
ಯುವ ಜನತೆ ಕೈಯಲ್ಲಿ ದೇಶದ ಭವಿಷ್ಯ:
ಮಾದಕ ದ್ರವ್ಯ ವ್ಯಸನಿಗಳ ಭವಿಷ್ಯ ಛಿದ್ರವಾಗಲಿದೆ. ಅಪರಾಧಗಳು ಹೆಚ್ಚಾಗಲಿವೆ. ಎಷ್ಟೋ ಪರಿವಾರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸಾಮಾಜಿಕ ಜೀವನದ ಹಾದಿ ತಪ್ಪಲಿದೆ. ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆ ಪಾತ್ರ ಪ್ರಮುಖವಾಗಿದೆ. ದೇಶದ ಯುವ ಜನತೆಯಿಂದ ದೇಶದ ಭವಿಷ್ಯ ಅಡಗಿದೆ. ಯುವಕರಿಂದ ಮಾತ್ರ ಚರಿತ್ರೆ ನಿರ್ಮಾಣ ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಸಮಾಜ ನಶೆ ಮಕ್ತವಾದಾಗ ಮಾತ್ರ ಆತ್ಮ ನಿರ್ಭರ ಸಾಧ್ಯ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಹೀಗಾಗಿ ಸಮಾಜವನ್ನು ನಶೆ ಮುಕ್ತಗೊಳಿಸುವಲ್ಲಿ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಧಾರ್ಮಿಕ ಸಂಸ್ಥೆಗಳು, ಸಂಸ್ಥೆ-ಸಂಸ್ಥೆಗಳು, ಎನ್‌ಸಿಸಿ, ಸ್ಕೌಟ್ ಆ್ಯಂಡ್ ಗೈಡ್ಸ್, ಎನ್‌ಎಸ್‌ಎಸ್, ನೆಹರು ಯುವ ಕೇಂದ್ರ, ಮಾಧ್ಯಮಗಳು ಹಾಗೂ ನಾಗರಿಕ ಸಮಾಜ ಪಾತ್ರ ಬಹಳ ಮುಖ್ಯ ಎಂದರು.
ಅಭಿಯಾನ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ:
ವಿದ್ಯಾರ್ಥಿಗಳ ಚಾರಿತ್ರ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಯುವಕರ ಜೀವನ ಬದಲಿಸುವ ಶಕ್ತಿ ಶಿಕ್ಷಕರ ಮೇಲಿದೆ. ನಶೆ ಮುಕ್ತ ಭಾರತ ನಿರ್ಮಾಣದಲ್ಲಿ ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆ ಅತಿಮುಖ್ಯ. ಹೀಗಾಗಿ ಪ್ರಧಾನಿ ಮೋದಿ ಅವರ ಕನಸಾದ ನಶಾ ಮುಕ್ತ ಯುವ-ವಿಕಸಿತ ಭಾರತ ಅಭಿಯಾನ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ರಾಜ್ಯಪಾಲರು ಹೇಳಿದರು.
ಇದೇ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಬಿ.ಸಿ.ಭಗವಾನ್ ಅವರು ವಿದ್ಯಾರ್ಥಿಗಳು, ವೈದ್ಯರು, ಪ್ರಾಧ್ಯಾಪಕರು ಸೇರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಮಾದಕ ದ್ರವ್ಯ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸಿದರು.
ವೇದಿಕೆಯಲ್ಲಿ ಮೋಹನ್ ಜೀ ಫೌಂಡೇಶನ್ ಸಂಸ್ಥಾಪಕ ಡಾ.ಮೋಹನ್ ಜೀ, ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡೀನ್ ಸತ್ಯಮೂರ್ತಿ, ಸಿಇಒ ಸಿ.ಎನ್.ಸೀತಾರಾಮ್, ದಿಶಾಬೋದ್ ಫೌಂಡೇಶನ್ ನಿರ್ದೇಶಕ ಶಿವ ನಾಗಿ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

