ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆ.15 ರಂದು ‘ಎಂಜಿನಿಯರ್ಸ್ ದಿನ’ ಎಂದು ಅಧಿಕೃತವಾಗಿ ಘೋಷಿಸಲು ಹಾಗೂ ಎಂಜಿನಿಯರ್‌ಗಳ ಹೆಸರಿನ ಪೂರ್ವದಲ್ಲಿ ‘ಇಆರ್-Er’ (Engineer) ಎಂಬುದನ್ನು ಬಳಸಿಕೊಳ್ಳಲು ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು : ದೇಶದ ಪ್ರಗತಿಗೆ ಎಂಜಿನಿಯರ್‌ಗಳ ಕೊಡುಗೆ ಸ್ಮರಿಸುವ ಸಲುವಾಗಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆ.15 ರಂದು ‘ಎಂಜಿನಿಯರ್ಸ್ ದಿನ’ ಎಂದು ಅಧಿಕೃತವಾಗಿ ಘೋಷಿಸಲು ಹಾಗೂ ಎಂಜಿನಿಯರ್‌ಗಳ ಹೆಸರಿನ ಪೂರ್ವದಲ್ಲಿ ‘ಇಆರ್-Er’ (Engineer) ಎಂಬುದನ್ನು ಬಳಸಿಕೊಳ್ಳಲು ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈವರೆಗೆ ವೈದ್ಯರಿಗೆ Dr. ಎಂದು, ಪ್ರೊಫೆಸರ್‌ಗಳಿಗೆ Prof. ಎಂದು ಆಂಗ್ಲ ಭಾಷೆಯಲ್ಲಿ ವಿಶೇಷಣ ನೀಡಲಾಗುತ್ತಿತ್ತು. ಇತ್ತೀಚೆಗೆ ಶಿಕ್ಷಕರಿಗೆ Tr. ಎಂದು ಕರೆಯಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದರು. ಇದರ ನಡುವೆಯೇ ಎಂಜಿನಿಯರುಗಳಿಗೆ Er. ಎಂದು ಕರೆಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ವಿಶೇಷ.
ಎಂಜಿನಿಯರುಗಳಿಗೆ ಗೌರವ:
ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿರುವ ಸರ್ಕಾರ, ‘ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ 1912 ರಿಂದ 1918ರವರೆಗೆ ಮೈಸೂರು ರಾಜ್ಯದ 19ನೇ ದಿವಾನರಾಗಿ ಸೇವೆ ಸಲ್ಲಿಸಿದ ಅವರ ಕೈಗಾರಿಕೀಕರಣ ಇಲ್ಲವೇ ವಿನಾಶ ಎಂಬ ಚಿಂತನೆಯಿಂದ ಹಲವು ಕೈಗಾರಿಕೆಗಳು ಹುಟ್ಟಿಕೊಂಡವು’ ಎದು ಬಣ್ಣಿಸಿದೆ.
‘ಎಂಜಿನಿಯರಿಂಗ್, ನೀರಾವರಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿರುವ ಕೊಡುಗೆ ಅಪಾರ. ಇನ್ನುಸಮಾಜ ಪ್ರಗತಿ ಮತ್ತು ಆಧುನಿಕ ಜಗತ್ತಿನ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎಂಜಿನಿಯರ್‌ಗಳು ಕೇವಲ ಯಂತ್ರಗಳನ್ನು ವಿನ್ಯಾಸಗೊಳಿಸುವುದಿಲ್ಲ’ ಎಂದೂ ಹೇಳಿದೆ.
‘ಬದಲಿಗೆ ಮಾನವನ ಸವಾಲುಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ. ಹೀಗಾಗಿ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಎಂಜಿನಿಯರ್‌ಗಳ ದಿನಾಚರಣೆ ಆಗಿ ಆಚರಿಸುವುದನ್ನು ಅಧಿಕೃತಗೊಳಿಸಲು ಹಾಗೂ ಎಂಜಿನಿಯರ್‌ಗಳ ಹೆಸರಿನ ಪೂರ್ವದಲ್ಲಿ ‘ಇಆರ್-Er’ (Engineer) ಎಂಬುದನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುವುದು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.
ಮುಂದಿನ ವರ್ಷದಿಂದ ಸರ್ಕಾರದಿಂದಲೇ ದಿನಾಚರಣೆ: ಸಿಎಂ
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದಲೇ ಎಂಜಿನಿಯರ್‌ಗಳ ದಿನಾಚರಣೆ ಮಾಡಲಾಗುತ್ತದೆ ಎಂದು ಘೋ಼ಇಸಿದರು.
ಮಂಗಳವಾರ ಕೆ.ಆರ್ ವೃತ್ತದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸರ್ಕಾರ ವತಿಯಿಂದ ಎಂಜಿನಿಯರ್ ದಿನ ಆಚರಿಸುವ ಪ್ರಸ್ತಾವನೆ ನೀಡಿದ್ದು, ನಾನು ಅದಕ್ಕೆ ಸಮ್ಮತಿ ಸೂಚಿಸಿದ್ದೇನೆ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಎಂಜಿನಿಯರ್ ಪದವೀಧರರು ಹೊರ ಬರುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಎಂಜಿನಿಯರ್ ಇದ್ದು, ಅವರನ್ನು ಗುರುತಿಸುವುದು ನಮ್ಮ ಕರ್ತವ್ಯ. ಈ ಬಗ್ಗೆ ಅಧಿಕಾರಿಗಳ ಜತೆ ರೂಪುರೇಷೆಗಳ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದು ಹೇಳಿದರು.
ಇಂದು ಎಂಜಿನಿಯರ್‌ಗಳ ದಿನವಾಗಿದ್ದು, ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಸರ್ಕಾರದ ಪರವಾಗಿ ಮಾಲಾರ್ಪಣೆ ಮಾಡಲಾಗಿದೆ. ಎಂಜಿನಿಯರ್‌ಗಳು ದೇಶದ ಆಸ್ತಿ. ವಿಜ್ಞಾನಿಗಳ ಸಂಶೋಧನೆಗಳನ್ನು ಕಾರ್ಯಗತಗೊಳಿಸುತ್ತಿರುವವರು ಎಂಜಿನಿಯರ್‌ಗಳು. ಎಲ್ಲಾ ಅಭಿವೃದ್ಧಿಗೆ ಅಡಿಪಾಯ ಹಾಕುವವರು ಎಂಜಿನಿಯರ್‌ಗಳು ಎಂದು ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಾಸ್ತುಶಿಲ್ಪದ ಪರಂಪರೆಯಲ್ಲಿ ನಾವು ಎಂಜಿನಿಯರ್‌ಗಳನ್ನು ಗುರುತಿಸುತ್ತಿದ್ದೆವು. ಈಗ ಇಂಧನ, ಕಟ್ಟಡ ನಿರ್ಮಾಣ, ಐಟಿ ತಂತ್ರಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿಶ್ವೇಶ್ವರಯ್ಯ ಅವರು ದೇಶಕ್ಕೆ ಮಾದರಿ. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.
ಎಂಜಿಯರುಗಳಿಗೆ ಗೌರವ
- ಈಗಾಗಲೇ ವೈದ್ಯರಿಗೆ Dr. ಎಂದು, ಪ್ರೊಫೆಸರ್‌ಗಳಿಗೆ Prof. ಎಂಬ ವಿಷೇಷಣ ಇದೆ
- ಇತ್ತೀಚೆಗೆ ಶಿಕ್ಷಕರಿಗೆ Tr. ಎಂದು ಕರೆಯಿರಿ ಎಂದು ಕರೆ ನೀಡಿದ್ದ ಡಿ.ಕೆ. ಶಿವಕುಮಾರ್
- ಈ ಮಧ್ಯೆ ಸರ್ ಎಂ, ವಿಶ್ವೇಶ್ವರಯ್ಯ ಜನ್ಮದಿನದಂದು ಸರ್ಕಾರದ ವಿಶೇಷ ಘೋಷಣೆ
- ಎಂಜಿನಿಯರುಗಳ ಕೊಡುಗೆ ಸ್ಮರಿಸಿ ಅವರಿಗೆ Er. ಎಂದು ಸಂಬೋಧಿಸಲು ಅಸ್ತು
-ಇನ್ನು ಮುಂದೆ ಸರ್ಕಾರದಿಂದಲೇ ಎಂಜಿನಿಯರುಗಳ ದಿನಾಚರಣೆ ಆಚರಣೆಗೆ ಆದೇಶ
