ರಾಣಿಬೆನ್ನೂರು: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇತ್ತೀಚಿಗೆ ಜರುಗಿದ ಐತಿಹಾಸಿಕ ಸಾಧನೆಯಲ್ಲಿ ರಾಣಿಬೆನ್ನೂರಿನ ಎಂಜಿನಿಯರ್ ಸಂಜಯ ಲಿಂಗರಾಜ ಜಂಬಗಿ ಒಬ್ಬರಾಗಿದ್ದು, ವಿಕ್ರಮ್-1 ರಾಕೆಟ್ ಉಡಾವಣೆಯ ತಾಂತ್ರಿಕ ತಂಡದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿರುವುದು ಜಿಲ್ಲೆಗೆ ಹಾಗೂ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ಇಷ್ಟು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂಲಕ ರಾಕೆಟ್‌ಗಳ ಉಡಾವಣೆಯನ್ನು ಕಣ್ತುಂಬಿಕೊಳ್ಳುತ್ತಿದ್ದ ದೇಶದ ಜನತೆ, ಇದೀಗ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಭಾರತದ ಮೊದಲ ಖಾಸಗಿ ಕಕ್ಷಿಯ ರಾಕೆಟ್ ‘ವಿಕ್ರಮ್-1’ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡಾವಣೆಯಾಗಿದ್ದು, ದೇಶದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದೆ.ದೇಶ-ವಿದೇಶಗಳ ಪ್ರತಿಭಾವಂತ ಎಂಜಿನಿಯರ್‌ಗಳನ್ನೊಳಗೊಂಡ ತಂಡದಲ್ಲಿ ಸಂಜಯ ಲಿಂಗರಾಜ ಜಂಬಗಿ ವಾಹನ ಎಂಜಿನಿಯರಿಂಗ್ ಲೀಡ್ (vehicle engineering lead) ಆಗಿ ಕಾರ್ಯನಿರ್ವಹಿಸಿ, ಈ ಮಹತ್ವದ ಯೋಜನೆಯ ಯಶಸ್ಸಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಜು.18ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಮಿಷನ್ ಆಗಮನ’ದ ಭಾಗವಾಗಿ ವಿಕ್ರಮ್-1 ಉಡಾವಣೆಯಾಯಿತು. ಉಡಾವಣೆಯ ಬಳಿಕ ರಾಕೆಟ್ ಯಶಸ್ವಿಯಾಗಿ ಕಕ್ಷೆ ತಲುಪಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಹೊಸ ದಿಕ್ಕು ತೆರೆದಿದೆ.ರಾಣಿಬೆನ್ನೂರಿನ ಪ್ರತಿಭೆ ನಭಕ್ಕೆ: ರಾಣಿಬೆನ್ನೂರಿನ ಸಂಜಯ ಜಂಬಗಿ ಅವರು ನಗರದ ರೋಟರಿ ಕ್ಲಬ್‌ನ ಟ್ಯಾಗೋರ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷಣವನ್ನು ಪೂರ್ಣಗೊಳಿಸಿ, ನಂತರ ತರಳಬಾಳು ತಾಂತ್ರಿಕ ವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದರು. ಬಳಿಕ ಬೆಂಗಳೂರಿನ ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದು, ಬಾಹ್ಯಾಕಾಶ ಮತ್ತು ರಾಕೆಟ್ ತಂತ್ರಜ್ಞಾನ ಕ್ಷೇತ್ರದತ್ತ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡಿದ್ದಾರೆ.
ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ, ಸುಮಾರು ಎಂಟು ವರ್ಷಗಳ ಹಿಂದೆ ಆರಂಭಿಕ ಹಂತದಲ್ಲಿದ್ದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಗೆ ವಾಹನ ಎಂಜಿನಿಯರ್ ಆಗಿ ಸೇರ್ಪಡೆಯಾದರು. ಸಂಸ್ಥೆಯ ಆರಂಭಿಕ ಹಂತದಿಂದಲೇ ಅದರೊಂದಿಗೆ ಗುರುತಿಸಿಕೊಂಡು, ರಾಕೆಟ್ ಅಭಿವೃದ್ಧಿ ಹಾಗೂ ವಾಹನ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದಿರುವ ಅವರು, ಇದೀಗ ಭಾರತದ ಮೊದಲ ಖಾಸಗಿ ಕಕ್ಷೆಯ ರಾಕೆಟ್ ವಿಕ್ರಮ್-1 ಉಡಾವಣೆಯಲ್ಲಿ ಪ್ರಮುಖ ತಾಂತ್ರಿಕ ಜವಾಬ್ದಾರಿ ನಿರ್ವಹಿಸುವ ಮಟ್ಟಕ್ಕೆ ಬೆಳೆದಿದ್ದಾರೆ.
ತಂಡದ ಸಹಿಯಲ್ಲೂ ವಿಶೇಷ ನೆನಪು:ವಿಕ್ರಮ್-1 ರಾಕೆಟ್ ಉಡಾವಣೆಯ ಯಶಸ್ಸಿನ ಸಂಭ್ರಮದ ನಡುವೆ, ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಎಂಜಿನಿಯರ್‌ಗಳು ಹಾಗೂ ತಾಂತ್ರಿಕ ತಂಡದ ಸದಸ್ಯರು ರಾಕೆಟ್ ಮೇಲೆ ತಮ್ಮ ಸಹಿ ಹಾಕಿರುವುದು ವಿಶೇಷ ಗಮನ ಸೆಳೆದಿದೆ. ಈ ಐತಿಹಾಸಿಕ ಕ್ಷಣದ ಭಾಗವಾಗಿರುವ ಸಂಜಯ ಜಂಬಗಿ ಅವರಿಗೂ ಈ ಸಹಿ ಒಂದು ಅಪೂರ್ವ ನೆನಪಾಗಿ ಉಳಿಯಲಿದೆ.
ಸಂಜಯ ಜಂಬಗಿ ಅವರ ಸಾಧನೆಯು ರಾಣಿಬೆನ್ನೂರು ಹಾಗೂ ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಯುವ ಎಂಜಿನಿಯರ್‌ಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ. ಕನಸು, ಪರಿಶ್ರಮ, ತಾಂತ್ರಿಕ ಜ್ಞಾನ ಹಾಗೂ ನಿರಂತರ ಪ್ರಯತ್ನಗಳ ಮೂಲಕ ಸಣ್ಣ ನಗರಗಳಿಂದಲೂ ಜಾಗತಿಕ ಮಟ್ಟದ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅವರು ತಮ್ಮ ವೃತ್ತಿಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಉಪನ್ಯಾಸಕ ಶಿವಕುಮಾರ ಹೊನ್ನಾಳಿ ಹೇಳಿದರು.