ಹಾವೇರಿ ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ಫೆ. 28ರಿಂದ ಮಾ.17ರ ವರೆಗೆ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಹಾವೇರಿ: ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ಫೆ. 28ರಿಂದ ಮಾ.17ರ ವರೆಗೆ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಸ್ನೇಹಿ ಪೂರಕ ವಾತಾವರಣವನ್ನು ಕಲ್ಪಿಸಲಾಗಿದೆ. ಮೊದಲ ದಿನವಾದ ಫೆ. 28ರ ಕನ್ನಡ ಹಾಗೂ ಅರೇಬಿಕ್ ವಿಷಯದ ಪರೀಕ್ಷೆಗಳು ಜರುಗಲಿವೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿವೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಈಗಾಗಲೇ ಎಚ್ಚರಿಕೆ ವಹಿಸಲಾಗಿದೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು, ಉಪನ್ಯಾಸಕರು ಪರೀಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರದ ಹೊರ ವಲಯ ಹಾಗೂ ಕೊಠಡಿಯ ಒಳಗೆ ಶಿಸ್ತುಬದ್ಧವಾಗಿ ಪರೀಕ್ಷಾ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಸುವಂತೆ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಿದೆ.14,264 ವಿದ್ಯಾರ್ಥಿಗಳ ನೋಂದಣಿ: ಪ್ರಸ್ತುತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಿನ್ನೆಲೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳ ಪೈಕಿ ಜಿಲ್ಲೆಯಲ್ಲಿ 13,077 ಹೊಸ, 856 ಪುನರಾವರ್ತಿತ, 327 ಖಾಸಗಿ ಹಾಗೂ ಫಲಿತಾಂಶ ಸುಧಾರಣೆ ಬಯಸಿ 4 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 14,264 ವಿದ್ಯಾರ್ಥಿಗಳು ಈ ಸಲ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.ಪ್ರಶ್ನೆ ಪತ್ರಿಕೆ ಬಂಡಲ್ ತೆಗೆದುಕೊಂಡು ಹೋಗಲು ಪ್ರತಿ ತಾಲೂಕಿಗೂ ತಹಸೀಲ್ದಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪ್ರಿನ್ಸಿಪಾಲ್ ಒಳಗೊಂಡ ತ್ರಿ ಸದಸ್ಯ ಸಮಿತಿ ರಚಿಸಲಾಗಿದ್ದು, ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ವಾಹನಕ್ಕೆ ಜಿಪಿಎಸ್ ಅಳವಡಿಸಲಾಗಿದೆ. ಪೊಲೀಸ್ ಬಂದೋಬಸ್ತನಲ್ಲಿ ನಿಗದಿಪಡಿಸಿದ ಸಮಯಕ್ಕೆ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲು ಅಗತ್ಯ ಕ್ರಮವಹಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ: ಪರೀಕ್ಷಾ ಕೊಠಡಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ವ್ಯವಸ್ಥಿತವಾಗಿ ಪೀಠೋಪಕರಣ, ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಸಿಸಿಟಿವಿ ಕಣ್ಗಾವಲು: ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಲಾಗಿದ್ದುö, ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಬಂಡಲ್ ತೆರೆಯುವಾಗ ಮತ್ತು ಉತ್ತರ ಪತ್ರಿಕೆ ಬಂಡಲ್‌ಗಳನ್ನು ಕಡ್ಡಾಯವಾಗಿ ಸಿಸಿಟಿವಿ ಕಣ್ಗಾವಲಿನಲ್ಲಿ ಸೀಲ್ ಮಾಡುವಂತೆ ಸೂಚಿಸಲಾಗಿದೆ.ನಿಷೇತ ಪ್ರದೇಶ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಪರೀಕ್ಷಾರ್ಥಿಗಳು, ಕೊಠಡಿ ಮೇಲ್ವಿಚಾರಕರಾಗಲಿ ಪರೀಕ್ಷಾ ಕೇಂದ್ರದೊಳಗೆ ಅತ್ಯಾಧುನಿಕ ಇಲೆಕ್ಟಾçನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗದಂತೆ ನಿಷೇಧಿಸಲಾಗಿದೆ. ಸಾರಿಗೆ ಸೌಲಭ್ಯ: ದ್ವಿತೀಯ ಪಿಯುಸಿ ಪರೀಕ್ಷೆ ಬಹುತೇಕ ನಗರ ಪ್ರದೇಶಗಳಲ್ಲಿ ಜರುಗುವುದರಿಂದ ಗ್ರಾಮೀಣ ಭಾಗದಿಂದ ಸಂಚರಿಸುವ ವಿದ್ಯಾರ್ಥಿಗಳಿಗೆ ಅವರ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ಓಡಾಡುವಂತೆ ಸಾರಿಗೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ.ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತಲೂ ಅರ್ಧ ಗಂಟೆ ಮುಂಚಿತವಾಗಿ ಕೇಂದ್ರದೊಳಗೆ ಇರಬೇಕು. ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿ ಸ್ನೇಹಿಯಾಗಿವೆ. ಪರೀಕ್ಷಾ ಭಯವಿಲ್ಲದೇ ನಿರ್ಭೀತಿಯಿಂದ ಪರೀಕ್ಷೆ ಬರೆಯಬೇಕು ಎಂದು ಹಾವೇರಿ ಡಿಡಿಪಿಯು ಅಶೋಕ ಶಾಸ್ತ್ರಿ ಹೇಳಿದರು.