ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂಬರ್ 19 ತಾಂತ್ರಿಕ ಲೋಪದಿಂದ ಮುರಿದಿದ್ದು, ಉಳಿದ ಎಲ್ಲ ಗೇಟ್‌ಗಳು ಸುರಕ್ಷಿತವಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಎಂಜಿನಿಯರ್‌ಗಳು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಹಾಗಾಗಿ ಎಲ್ಲ ಗೇಟ್‌ಗಳನ್ನು ಪರಿಶೀಲಿಸಬೇಕು. ಮುಂದೆ ಮತ್ತೆ ನೀರು ಬಂದರೆ ಸಮಸ್ಯೆಯಾದರೆ ಯಾರು ಹೊಣೆ? ತನಿಖೆ ಮಾಡಿದರೆ ಎಲ್ಲಿ ವೈಫಲ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಸಮನಾಂತರ ಜಲಾಶಯ ನಿರ್ಮಾಣ ಆಗಲಿ: ಕೊಪ್ಪಳದ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಆಗಬೇಕಿದೆ. ಈ ಜಲಾಶಯ ನಿರ್ಮಾಣಕ್ಕೆ ಇದು ಸೂಕ್ತ ಕಾಲ ಆಗಿದೆ. ಈ ಕುರಿತು ಡಿಪಿಆರ್ ಸಿದ್ಧವಿದೆ. ಆಂಧ್ರಪ್ರದೇಶದೊದಿಗೆ ನಾನೇ ಸಿಎಂ ಇದ್ದಾಗ ಮಾತಾಡಿದ್ದೆ. ಈ ಸರ್ಕಾರ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಸಿಎಂಗಳ ಜತೆ ಮಾತನಾಡಿ, ಅವರಿಗೂ ಇದರಿಂದ ಲಾಭವಿದೆ. ಅವರ ಒಪ್ಪಿಗೆ ಪಡೆದು ಮತ್ತೊಂದು ವಿವಾದ ಆಗದಂತೆ ಸಮಾನಾಂತರ ಜಲಾಶಯ ಆಗಬೇಕು ಎಂದು ಒತ್ತಾಯಿಸಿದರು.ಸ್ಟಾಪ್ ಲಾಕ್ ಗೇಟ್ ಹಳೇ ಡ್ಯಾಂಗಳಲ್ಲಿಲ್ಲ. ಇದಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಡ್ಯಾಂಗಳ ಸುರಕ್ಷತೆಗೆ ಕೇಂದ್ರದಂತೆ ರಾಜ್ಯ ಸರ್ಕಾರವೂ ತಜ್ಞರ ತಂಡ ನೇಮಿಸಿ ಆಗಾಗ ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸಬೇಕು. ನಾವು ಇದರಲ್ಲಿ ರಾಜಕಾರಣ ಮಾಡಲ್ಲ. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹೇಳಿದಂತೆ ಆಕಸ್ಮಿಕ ಘಟನೆ, ಇದಕ್ಕೆ ಯಾರೂ ಕಾರಣರಲ್ಲ ಎಂಬುದನ್ನು ನಾವು ಒಪ್ಪಲು ಸಾಧ್ಯವಿಲ್ಲ. ತಾಂತ್ರಿಕವಾಗಿ ಇದರಲ್ಲಿ ಲೋಪವಿದ್ದು, ತನಿಖೆಯಾಗಬೇಕು ಎಂದರು.
ವಿರೋಧ ಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವರಾದ ಆನಂದ್ ಸಿಂಗ್, ಹಾಲಪ್ಪ ಆಚಾರ್, ಶಾಸಕ ಕೃಷ್ಣನಾಯ್ಕ, ಮುಖಂಡ ಸಿದ್ಧಾರ್ಥ ಸಿಂಗ್ ಮತ್ತಿತರರಿದ್ದರು.